ನೀಟ್‌ ಹಗರಣದಲ್ಲಿ ಬಿಹಾರ ಸಚಿವ ಭಾಗಿ.?

| Published : Jun 20 2024, 01:06 AM IST / Updated: Jun 20 2024, 04:20 AM IST

Neet Bihar

ಸಾರಾಂಶ

ಆರೋಪಿ ವಿದ್ಯಾರ್ಥಿಗೆ ಸಚಿವರ ನೆರವಿನ ಸುಳಿವು ಪತ್ತೆಯಾಗಿದ್ದು, ಅವರೂ ಸಹ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಪಟನಾ: ಬಿಹಾರದಲ್ಲಿ ನಡೆದಿದೆ ಎನ್ನಲಾದ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ, ರಾಜ್ಯ ಸಚಿವರೊಬ್ಬರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಆದರೆ ಸದ್ಯ ಆರೋಪಿ ಸಚಿವರ ಹೆಸರನ್ನು ಬಹಿರಂಗಪಡಿಸಿಲ್ಲ.

ಪ್ರಕರಣ ಸಂಬಂಧ ಬಂಧಿತನಾಗಿರುವ ಅನುರಾಗ್‌ ಯಾದವ್‌ ಎಂಬ ವಿದ್ಯಾರ್ಥಿ, ಈ ಪ್ರಕರಣದಲ್ಲಿ ತನಗೆ ಸಚಿವರ ಬೆಂಬಲ ಇತ್ತು ಎಂದು ಹೇಳಿದ್ದಾನೆ. ಅಲ್ಲದೆ ಪರೀಕ್ಷೆಯ ಹಿಂದಿನ ದಿನ ಆತ ಪಟನಾದಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಸಚಿವರು ನೀಡಿರುವ ಶಿಫಾರಸು ಪತ್ರವನ್ನು ಸಾಕ್ಷ್ಯವಾಗಿ ತೋರಿಸಿದ್ದಾನೆ. ಜೊತೆಗೆ ಅತಿಥಿ ಗೃಹದಲ್ಲಿ ತನಗೆ ನೀಡಲಾಗಿದ್ದ ಪ್ರಶ್ನೆಪತ್ರಿಕೆ, ಮಾರನೇ ದಿನ ಪರೀಕ್ಷೆಯಲ್ಲಿ ನೀಡಲಾಗಿದ್ದ ಪ್ರಶ್ನೆಪತ್ರಿಕೆಯಂತೆಯೇ ಇತ್ತು ಎಂದು ಬಹಿರಂಗಪಡಿಸಿದ್ದಾನೆ.

ಪಶ್ನೆ ಪತ್ರಿಕೆ ಸೋರಿಕೆ ಹಗರಣ ಸಂಬಂಧ ಬಿಹಾರ ಪೊಲೀಸರು ಈಗಾಗಲೇ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಕ್ಕೆ ಸೇರಿದ ಕೆಲ ವ್ಯಕ್ತಿಗಳು ಕೂಡಾ ಸೇರಿದ್ದಾರೆ.

ಸುಳ್ಳು ದಾಖಲೆ ನೀಡಿದ್ದ ವಿದ್ಯಾರ್ಥಿನಿ ಅರ್ಜಿ ವಜಾ

‘ನೀಟ್‌ ಪರೀಕ್ಷೆ ವೇಳೆ ನಾನು ಉತ್ತರ ಬರೆದಿದ್ದ ಒಎಂಆರ್‌ ಶೀಟ್‌ ಹರಿದುಹೋದ ಕಾರಣ, ನನಗೆ ಕಡಿಮೆ ಅಂಕ ಬಂದಿದೆ. ಹೀಗಾಗಿ ನನಗೆ ಮರುಪರೀಕ್ಷೆ ಬರೆಯಲು ಅವಕಾಶ ಕೊಡಬೇಕು’ ಎದು ಕೋರಿ ಉತ್ತರ ಪ್ರದೇಶದ ಆಯುಷಿ ಪಟೇಲ್‌ ಎಂಬ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾ ಮಾಡಿದೆ.ಇತ್ತೀಚೆಗೆ ಆಯುಷಿ ಹರಿದುಹೋಗಿರುವ ಒಎಂಆರ್‌ ಶೀಟ್‌ನ ಫೋಟೋವೊಂದನ್ನು ಜಾಲತಾಣದಲ್ಲಿ ಹಾಕಿ, ‘ನನಗೆ ಅನ್ಯಾಯವಾಗಿದೆ. 715 ಅಂಕ ಬರಬೇಕಿದ್ದ ನನನಗೆ ಹರಿದುಹೋದ ಒಎಂಆರ್‌ ಶೀಟ್‌ನಿಂದಾಗಿ 325 ಅಂಕ ಬಂದಿದೆ’ ಎಂದು ದೂರಿದ್ದಳು. ಜೊತೆಗೆ ಹೈಕೋರ್ಟ್‌ ಮೊರೆ ಹೋಗಿದ್ದಳು.ಅರ್ಜಿ ವಿಚಾರಣೆ ವೇಳೆ ನೀಟ್‌ ಪರೀಕ್ಷೆ ನಡೆಸುವ ಎನ್‌ಟಿಎ, ಆಯುಷಿಯ ಮೂಲಕ ಒಎಂಆರ್‌ ಪ್ರತಿ ತೋರಿಸಿದಾಗ ಅದು ಸುಸ್ಥಿತಿಯಲ್ಲಿರುವುದು ಕಂಡುಬಂದಿತ್ತು. ಆಯುಷಿ ಸಲ್ಲಿಸಿದ್ದ ಒಎಂಆರ್‌ ಶೀಟ್‌ ನಕಲಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ. ಅಲ್ಲದೆ ಆಕೆಯ ವಿರುದ್ಧ ಅಗತ್ಯ ಕ್ರಮಕ್ಕೆ ಎನ್‌ಟಿಎಗೆ ಮುಕ್ತ ಅವಕಾಶ ನೀಡಿದೆ.

ಗ್ರೇಸ್‌ ಅಂಕ ರದ್ದು ಬಳಿಕ 6 ನೀಟ್‌ ಟಾಪರ್‌ಗಳಿಗೆ ಸಂಕಷ್ಟ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ನೀಟ್‌ ಪರೀಕ್ಷೆಯಲ್ಲಿ ಗ್ರೇಸ್‌ ಅಂಕ ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿದ್ದವರ ಪೈಕಿ 6 ಜನರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಪರೀಕ್ಷೆಯಲ್ಲಿ ಅಕ್ರಮ ಮತ್ತು ಗ್ರೇಸ್‌ ಅಂಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ 1563ಕ್ಕೂ ಹೆಚ್ಚು ಜನರಿಗೆ ನೀಡಲಾಗಿದ್ದ ಗ್ರೇಸ್‌ ಅಂಕ ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತ್ತು.

ಅದರನ್ವಯ, ಇದೀಗ ಪರೀಕ್ಷೆ ವೇಳೆ ಸಮಯ ನಷ್ಟವಾಗಿದ್ದಕ್ಕೆ ಪ್ರತಿಯಾಗಿ ನೀಡಿದ್ದ ಗ್ರೇಸ್‌ ಅಂಕ ರದ್ದುಪಡಿಸಿ, 1563 ಜನರ ಅಂಕಗಳ ಮರುಪರಿಶೀಲನೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಆರಂಭಿಸಿದೆ. ಈ ಪ್ರಕ್ರಿಯೆಯಲ್ಲಿ ಟಾಪರ್‌ಗಳಾಗಿದ್ದ ಹೊರಹೊಮ್ಮಿದ್ದವರ ಪೈಕಿ 6 ಜನರು 60-70ರಷ್ಟು ತಮ್ಮ ಗ್ರೇಸ್‌ ಅಂಕ ಕಳೆದುಕೊಳ್ಳಲಿದ್ದು, ಟಾಪರ್‌ ಸ್ಥಾನದಿಂದ ಭಾರೀ ಕೆಳಗೆ ಇಳಿಯಲಿದ್ದಾರೆ ಎಂದು ಎನ್‌ಟಿಎ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತ ಪ್ರವೇಶ ಪಡೆಯಲು 650 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆಯುವುದು ಅನಿವಾರ್ಯ. ಈ ಬಾರಿ ಟಾಪರ್‌ಗಳಾಗಿದ್ದ ಎಲ್ಲಾ 67 ಜನರೂ 720 ಅಂಕ ಪಡೆದಿದ್ದರು. ಈ ಪೈಕಿ ಇದೀಗ 6 ಜನರು 60-70 ಅಂಕ ಕಳೆದುಕೊಂಡರೆ ಅವರ ನೀಟ್‌ ರ್‍ಯಾಂಕಿಂಗ್‌ 600ಕ್ಕಿಂತ ಕೆಳಗೆ ಕುಸಿದು, ಉಚಿತ ವೈದ್ಯಕೀಯ ಸೀಟ್‌ನಿಂದ ವಂಚಿತರಾಗಲಿದ್ದಾರೆ.

ಹೀಗೆ ಅಂಕ ಕಳೆದುಕೊಳ್ಳುವ ಸಾಧ್ಯತೆ ಇರುವ ಎಲ್ಲಾ 6 ಜನರು ಕೂಡಾ ಹರ್ಯಾಣದ ಝಜ್ಜರ್‌ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು. ವಿಶೇಷವೆಂದರೆ ಈ ಎಲ್ಲಾ 6 ಜನರ ಕ್ರಮ ಸಂಖ್ಯೆ ಕೂಡಾ ಅನುಕ್ರಮವಾಗಿದೆ.ಆದರೆ ಹೀಗೆ ಗ್ರೇಸ್‌ ಅಂಕ ಕಳೆದುಕೊಳ್ಳುವವರಿಗೆ ಮತ್ತೊಮ್ಮೆ ನೀಟ್‌ ಪರೀಕ್ಷೆ ನಡೆಸುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ 1563 ವಿದ್ಯಾರ್ಥಿಗಳು ಒಂದೋ ಹೊಸದಾಗಿ ಪರೀಕ್ಷೆ ಬರೆಯಬೇಕು. ಇಲ್ಲವೇ ಗ್ರೇಸ್‌ ಅಂಕ ಕಡಿತವಾದ ಬಳಿಕ ಸಿಗುವ ಅಂಕವನ್ನು ಉಳಿಸಿಕೊಳ್ಳಬೇಕು.