ಸಾರಾಂಶ
ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದ ಘಟನೆಗೆ ರೈಲಿನ ಹೆಸರಿನ ಕುರಿತು ಪ್ರಯಾಣಿಕರಲ್ಲಿ ಉಂಟಾದ ಗೊಂದಲವೇ ಕಾರಣ ಎಂಬ ವಿಷಯ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ ಘಟನೆಯಲ್ಲಿ ಗಾಯಗೊಂಡಿದ್ದ ಮೂವರು ವ್ಯಕ್ತಿಗಳು ಭಾನುವಾರ ಸಾವನ್ನಪ್ಪುವುದರೊಂದಿಗೆ ದುರ್ಘಟನೆಗೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿದೆ.
ಈ ನಡುವೆ ಕಾಲ್ತುಳಿತ ದುರಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳು ಘಟನೆಯನ್ನು ಸಾಂಸ್ಥಿಕ ಹತ್ಯೆ ಎಂದು ಕಿಡಿಕಾರಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ಒತ್ತಾಯಿಸಿವೆ. ಆದರೆ ರೈಲ್ವೆ ಇಲಾಖೆ ಮಾತ್ರ ಪ್ರಯಾಣಿಕರ ನಡುವೆ ಆದ ಗೊಂದಲದಿಂದ ಘಟನೆ ಸಂಭವಿಸಿದೆ. ರೈಲುಗಳ ಪ್ಲಾಟ್‌ಫಾರಂ ಸಂಖ್ಯೆಯನ್ನು ಕೊನೇ ಕ್ಷಣದಲ್ಲಿ ಬದಲಿಸಿದ್ದು ಕಾಲ್ತುಳಿತಕ್ಕೆ ಕಾರಣವಾಯಿತು ಎಂಬ ಆರೋಪ ಸುಳ್ಳು ಎಂದಿದೆ.
ಆದಾಗ್ಯೂ ಇಬ್ಬರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ರೈಲ್ವೆ ಆದೇಶಿಸಿದ್ದು ಅದರ ಆಧಾರದಲ್ಲಿ ಮುಂದಿನ ಕ್ರಮದ ಭರವಸೆ ನೀಡಿದೆ.ಇದೇ ವೇಳೆ ಮೃತರ ಕುಟುಂಬಕ್ಕೆ ರೈಲ್ವೆ ಇಲಾಖೆ 10 ಲಕ್ಷ ರು., ತೀವ್ರ ಗಾಯಾಳುಗಳಿಗೆ 2.5 ಲಕ್ಷ ರು. ಹಾಗೂ ಕಮ್ಮಿ ಪ್ರಯಾಣದ ಗಾಯಾಳುಗಳಿಗೆ 1 ಲಕ್ಷ ರು. ಪರಿಹಾರ ಪ್ರಕಟಿಸಿದೆ. ಮೃತರಲ್ಲಿ 11 ಮಹಿಳೆಯರು, ಇಬ್ಬರು ಪುರುಷರು, ಒಬ್ಬ ಬಾಲಕ ಹಾಗೂ 4 ಮಕ್ಕಳಿದ್ದಾರೆ.
ಹೆಸರಿನ ಗೊಂದಲ:
ಪ್ರಯಾಗರಾಜ್‌ಗೆ ಶನಿವಾರ ರಾತ್ರಿ ಒಟ್ಟು 4 ರೈಲು ಹೋಗಬೇಕಿತ್ತು. ಆ ಪೈಕಿ ಮೂರು ರೈಲು ವಿಳಂಬವಾಗಿದ್ದವು. ಈ ನಡುವೆ, ಪ್ರಯಾಗರಾಜ್‌ಗೆ ತೆರಳಬೇಕಿದ್ದ ‘ಪ್ರಯಾಗರಾಜ್ ಎಕ್ಸ್‌ಪ್ರೆಸ್’ ರೈಲು ಪ್ಲಾಟ್‌ಫಾರಂ ನಂಬರ್ 14ಕ್ಕೆ ಬರಬೇಕಿತ್ತು. ಅದಕ್ಕಾಗಿ ಜನರು ಕಾಯುತ್ತಿದ್ದರು. ಅದೇ ಹೊತ್ತಿನಲ್ಲೇ ಪಕ್ಕದ ಪ್ಲಾಟ್‌ಫಾರಂ 12ರಿಂದ ಪ್ರಯಾಗ್‌ರಾಜ್ ಸ್ಪೆಷಲ್ ಟ್ರೇನ್ ಹೊರಡಲಿದೆ ಎಂದು ಪ್ರಕಟಣೆ ಹೊರಡಿಸಲಾಯಿತು.
ಈ ವೇಳೆ ಪ್ಲಾಟ್‌ಫಾರಂ 14ರಲ್ಲಿದ್ದ ಪ್ರಯಾಣಿಕರು, ತಮ್ಮ ರೈಲೇ ಪ್ಲಾಟ್‌ಫಾರಂ 12ಕ್ಕೆ ಆಗಮಿಸಲಿದೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಜೊತೆಗೆ ಸಾವಿರಾರು ಜನರು ಏಕಾಏಕಿ 42 ಮೆಟ್ಟಿಲು ಏರಿ ಬಳಿಕ 25 ಅಡಿ ಅಗಲದ ಮೇಲುಸೇತುವೆ ಮೂಲಕ ಪಕ್ಕದಲ್ಲಿನ ಪ್ಲಾಟ್‌ಫಾರಂ 12ರತ್ತ ಧಾವಿಸಿದ್ದಾರೆ.
ಹೀಗೆ ಹೋದವರ ಮಹಿಳೆಯರ ಪೈಕಿ ಕೆಲವರು ಪ್ಲಾಟ್‌ಫಾರಂ 12ರ ಕಡೆಯಲ್ಲಿ ಮೆಟ್ಟಿಲು ಇಳಿಯುವ ವೇಳೆ ಉರುಳಿಬಿದ್ದಿದ್ದಾರೆ. ಆಗ ಆಯ ತಪ್ಪಿ ಇನ್ನಷ್ಟು ಜನರು ಅವರ ಮೇಲೆ ಉರುಳಿಬಿದ್ದಿದ್ದಾರೆ. ಇದು ಗೊತ್ತಾಗದೇ ನೂರಾರು ಜನರು ಅದೇ ಹಾದಿಯಲ್ಲಿ ತೆರಳುವ ಪ್ರಯತ್ನ ಮಾಡಿದಾಗ ಭಾರೀ ಕಾಲ್ತುಳಿತ ಉಂಟಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವೇಳೆ ಮಹಿಳೆಯರು ಮತ್ತು ಮಕ್ಕಳು ಸೇರಿ ಹಲವರು ಸ್ಥಳದಲ್ಲೇ ಉಸಿರುಕಟ್ಟಿ ಸ್ಥಾವನ್ನಪ್ಪಿದ್ದಾರೆ.
ಹೇಗಾಯ್ತು ದುರಂತ?1. ಶನಿವಾರ ರಾತ್ರಿ ದೆಹಲಿಯಿಂದ ಪ್ರಯಾಗರಾಜ್‌ಗೆ 4 ರೈಲು ತೆರಳಬೇಕಿತ್ತು. 3 ರೈಲುಗಳು ವಿಳಂಬವಾಗಿದ್ದವು. 2. ಗಂಟೆಗೆ 1500ದಂತೆ ಜನರಲ್ ಬೋಗಿಯ ಟಿಕೆಟ್‌ಗಳು ಬಿಕರಿಯಾಗಿದ್ದವು. ಭಾರಿ ಸಂಖ್ಯೆಯಲ್ಲಿ ಜನರು ಇದ್ದರು 3. ‘ಪ್ರಯಾಗರಾಜ್ ಎಕ್ಸ್‌ಪ್ರೆಸ್’ ರೈಲು ಪ್ಲಾಟ್‌ಫಾರ್ಮ್ 14ಕ್ಕೆ ಬರಬೇಕಿತ್ತು. ಅದಕ್ಕಾಗಿ ಪ್ರಯಾಣಿಕರು ಕಾಯುತ್ತಿದ್ದರು4. ಅದೇ ವೇಳೆಗೆ 12ನೇ ಪ್ಲಾಟ್‌ಫಾರ್ಮ್‌ನಿಂದ ‘ಪ್ರಯಾಗರಾಜ್ ಸ್ಪೆಷಲ್’ ರೈಲು ಹೊರಡಲಿದೆ ಎಂಬ ಘೋಷಣೆ ಬಂತು 5. ತಾವು ತೆರಳಬೇಕಿರುವ ರೈಲೇ ಅದು ಎಂದು ಭಾವಿಸಿದ ಜನರು ಎದ್ದೆವೋ ಬಿದ್ದೆವೋ ಎಂಬಂತೆ ಓಡಲು ಆರಂಭಿಸಿದರು 6. 42 ಮೆಟ್ಟಿಲು ಏರಿ, 25 ಅಡಿ ಅಗಲದ ಬ್ರಿಜ್ ಮೇಲೆ ದೌಡಾಯಿಸಿ, 12ನೇ ಪ್ಲಾಟ್‌ಫಾರ್ಮ್‌ಗೆ ಇಳಿಯಲು ಪ್ರಾರಂಭಿಸಿದರು 7. ಮೆಟ್ಟಿಲು ಇಳಿವಾಗ ಕೆಲವು ಮಹಿಳೆಯರು ಎಡವಿ ಬಿದ್ದರು. ಆಯತಪ್ಪಿ ಮತ್ತಷ್ಟು ಜನರು ಉರುಳಿದ್ದರಿಂದ ದುರಂತ ನಡೆಯಿತು