ಸಾರಾಂಶ
ನವದೆಹಲಿ : ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿರುವ ಕ್ಯಾನ್ಸರ್ ಅನ್ನು ಗುಣಪಡಿಸಲು ವೈದ್ಯಲೋಕ ಹರಸಾಹಸ ಪಡುತ್ತಿರುವ ನಡುವೆಯೇ, ಫ್ಲೋರಿಡಾ ವಿಶ್ವವಿದ್ಯಾಲಯವು ಮಹತ್ವದ ಸಂಶೋಧನೆಯನ್ನು ನಡೆಸಿದೆ. ಇದು ಭವಿಷ್ಯದಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್‌ಗೂ ದಿವ್ಯೌಷಧ ಆಗಬಹುದು ಎಂಬ ಭಾರೀ ನಿರೀಕ್ಷೆಯೊಂದನ್ನು ಹುಟ್ಟುಹಾಕಿದೆ.
ಇದುವರೆಗೂ ಎಲ್ಲಾ ರೀತಿಯ ಸಂಶೋಧನೆಗಳು ಕ್ಯಾನ್ಸರ್ ಗಡ್ಡೆಯನ್ನು ನಾಶ ಮಾಡುವ ಉದ್ದೇಶದೊಂದಿಗೆ ನಡೆಸಲಾಗುತ್ತಿತ್ತು. ಆದರೆ ಫ್ಲೋರಿಡಾ ವಿವಿಯ ವಿಜ್ಞಾನಿಗಳ ತಂಡ ನೇರವಾಗಿ ಟ್ಯೂಮರ್ ನಿಯಂತ್ರಣದ ಬದಲಾಗಿ ಟ್ಯೂಮರ್ ವಿರುದ್ಧ ದೇಶದಲ್ಲಿ ಪ್ರತಿಕಾಯ ಶಕ್ತಿಯನ್ನು ಪ್ರಚೋದಿಸುವ ಮತ್ತು ಟ್ಯೂಮರ್ ಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ಉತ್ತೇಜಿಸುವ ಆಧಾರದಲ್ಲಿ ಸಂಶೋಧನೆ ನಡೆಸಿದೆ.
ಕೋವಿಡ್ ಲಸಿಕೆಯಲ್ಲಿ ಬಳಸಲಾದ ಎಂಆರ್‌ಎನ್‌ಎ ಪದ್ಧತಿ ಆಧರಿಸಿ ಲಸಿಕೆಯನ್ನು ಕ್ಯಾನ್ಸರ್ ಪೀಡಿತ ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಈ ವೇಳೆ ಅದು ಕ್ಯಾನ್ಸರ್ ಟ್ಯೂಮರ್ ವಿರುದ್ಧ ದೇಹದ ಪ್ರತಿಕಾಯಗಳು ಹೋರಾಡಲು ಪ್ರಚೋದಿಸಿದ್ದು ಕಂಡುಬಂದಿದೆ. ಜೊತೆಗೆ ಲಸಿಕೆ ನೀಡಿದ ಬಳಿಕ ಟ್ಯೂಮರ್ ಪೂರ್ಣ ಗುಣವಾಗಿದ್ದು ಕಂಡುಬಂದಿದೆ. ಇದನ್ನು ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೂ ಬಳಸಬಹುದಾಗಿದೆ ಎಂದು ಸಂಶೋಧಕರ ತಂಡ ಹೇಳಿದೆ.