ತುಂಗಭದ್ರಾ ಅಚ್ಚುಕಟ್ಟು ಕ್ಯಾನ್ಸರ್‌ ಹಬ್‌!

| N/A | Published : Jul 31 2025, 12:45 AM IST / Updated: Jul 31 2025, 10:50 AM IST

ಸಾರಾಂಶ

ಅತಿಯಾದ ಯೂರಿಯಾ ಬಳಕೆ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ವಿಶೇಷವಾಗಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ

ಸೋಮರಡ್ಡಿ ಅಳವಂಡಿ

 ಕೊಪ್ಪಳ :  ಅತಿಯಾದ ಯೂರಿಯಾ ಬಳಕೆ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ವಿಶೇಷವಾಗಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶವು ಕ್ಯಾನ್ಸರ್ ಹಬ್ ಆಗುವ ಆತಂಕ ಶುರುವಾಗಿದೆ.

ಇಂಥದ್ದೊಂದು ಆಘಾತಕಾರಿ ಅಂಶವನ್ನು ಕೊಪ್ಪಳ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ರುದ್ರೇಶಪ್ಪ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರೊ.ಡಾ। ರವಿ ಹೇಳಿದ್ದಾರೆ. ಕೊಪ್ಪಳ ಸೇರಿದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಹಾಗೂ ಜನಿಸುವ ಮಕ್ಕಳಲ್ಲಿ ರಕ್ತಹೀನತೆಯೂ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣವೇ ಅತಿಯಾದ ಯೂರಿಯಾ ಬಳಕೆ ಮತ್ತು ಕಳೆನಾಶಕ ಬಳಕೆ.

ಇದನ್ನು ನಿಖರವಾಗಿ ಹೇಳುವ ಯಾವುದೇ ಅಧ್ಯಯನ ವರದಿಗಳು ಈವರೆಗೂ ಬಹಿರಂಗವಾಗಿಲ್ಲ. ಆದರೆ, ಈ ಬಗ್ಗೆ ಅನೇಕ ಅಧ್ಯಯನಗಳು ಆಗಿದ್ದು, ಅವುಗಳ ವರದಿ ಬಹಿರಂಗಪಡಿಸಿದರೆ ಸತ್ಯ ಗೊತ್ತಾಗುತ್ತದೆ. ಮೇಲ್ನೋಟಕ್ಕೆ ಇದೆ ಸಾಬೀತಾಗುತ್ತಿದೆ ಎನ್ನುತ್ತಾರೆ ಡಾ.ರವಿ. ಮತ್ತು ಜೆಡಿ ಟಿ.ರುದ್ರೇಶಪ್ಪ.

‘ಕನ್ನಡಪ್ರಭ’ಕ್ಕೆ ಈ ಕುರಿತು ಮಾಹಿತಿ ನೀಡಿದ ಅವರು, ಹೊಲಗಳಲ್ಲಿ ಬೆಳೆಗಳಿಗೆ ಬಳಸುವ ಯೂರಿಯಾ ನೀರಿನಲ್ಲಿ ಸೇರ್ಪಡೆಯಾಗುತ್ತದೆ. ಆ ನೀರು ಹರಿದು ಹೋಗಿ ಜಲಸಂಗ್ರಹಾಗಾರಗಳನ್ನು ಸೇರುತ್ತದೆ. ಈ ನೀರಿನ ಬಳಕೆ ಕ್ಯಾನ್ಸರ್‌ ಬರಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ.

ಈ ಕುರಿತು ಮೆಡಿಕಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಅಧ್ಯಯನವೂ ನಡೆದಿದೆ ಎನ್ನುತ್ತಾರೆ. ಕಳೆದ ವರ್ಷ ಹುಬ್ಬಳ್ಳಿಯ ಕ್ಯಾನ್ಸರ್‌ ಸಂಶೋಧನಾ ಕೇಂದ್ರದಿಂದ ಕೊಪ್ಪಳದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಿದಾಗ ನಾಲ್ವರಲ್ಲಿ ಒಬ್ಬರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ತಂಡ ರಚಿಸಿ: ತಜ್ಞರು

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಅತಿಯಾಗಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕಳೆ ನಾಶಕ ಬಳಕೆ ಮಾಡುತ್ತಿರುವುದು ಮತ್ತು ಅದರಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಅಧ್ಯಯನ ನಡೆಯಬೇಕು. ಅದರಲ್ಲೂ ವಿಶೇಷವಾಗಿ ಈ ಭಾಗದಲ್ಲಿ ಹೆಚ್ಚಳ ಆಗಿರುವ ಕ್ಯಾನ್ಸರ್ ರೋಗಿಗಳ ಅಧ್ಯಯನ ಮಾಡುವ ಅಗತ್ಯವಿದೆ. ಸರ್ಕಾರ ಈ ದಿಸೆಯಲ್ಲಿ ವಿಶೇಷ ಅಧ್ಯಯನ ತಂಡವನ್ನೇ ಮಾಡಬೇಕಾಗಿದೆ ಎಂದು ಕೃಷಿ ಇಲಾಖೆ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.---

ಕ್ಯಾನ್ಸರ್‌ ಹೆಚ್ಚಳ

ಈ ಭಾಗದಲ್ಲಿ ಕ್ಯಾನ್ಸರ್ ಹೆಚ್ಚಳವಾಗುತ್ತಿದೆ. ಅದರಲ್ಲೂ ಯೂರಿಯಾದ ಅತಿಯಾದ ಬಳಕೆಯಿಂದಲೇ ಇದು ಹೆಚ್ಚಳವಾಗುತ್ತಿರುವ ಸಾಧ್ಯತೆ ಅಧಿಕವಾಗಿದೆ. ಈ ಕುರಿತು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗುತ್ತಿದೆ.

-ಟಿ.ರುದ್ರೇಶಪ್ಪ, ಜೆಡಿ ಕೃಷಿ ಇಲಾಖೆ, ಕೊಪ್ಪಳ

ಅಧ್ಯಯನ ಅಗತ್ಯ

ಯೂರಿಯಾ ಬಳಕೆಯಿಂದ ಕ್ಯಾನ್ಸರ್ ಹೆಚ್ಚಳವಾಗುತ್ತದೆ ಎನ್ನುವುದು ಸ್ಪಷ್ಟ. ಮಿತಿಮೀರಿ ಬಳಕೆ ಮಾಡುತ್ತಿರುವುದರಿಂದ ಅದು ನೀರಿನಲ್ಲಿ ಸೇರಿಕೊಂಡು ಹಾನಿ ಮಾಡುತ್ತಿದೆ. ಹೀಗಾಗಿ, ಈ ಕುರಿತು ಪ್ರತ್ಯೇಕ ಅಧ್ಯಯನ ಆಗಬೇಕಾಗಿದೆ.

- ಡಾ। ರವಿ. ಕೃಷಿ ವಿವಿ ರಾಯಚೂರು.

Read more Articles on