ಸಾರಾಂಶ
ನವದೆಹಲಿ: ಬಂಧಿತ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಅಲಿಯಾಸ್ ಭಾನು ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರು. ಬಹುಮಾನ ನೀಡುತ್ತೇವೆ ಎಂದು ಎನ್‌ಐಎ ಘೋಷಿಸಿದೆ.
ಮುಂಬೈನ ನಟ ಸಲ್ಮಾನ್ ಖಾನ್ ನಿವಾಸದ ಬಳಿ ನಡೆದ ಗುಂಡಿನ ದಾಳಿ ಹಾಗೂ ಇತ್ತೀಚೆಗೆ ನಡೆದ ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಅನ್ಮೋಲ್ ಪಾತ್ರವಿರುವ ಬಗ್ಗೆ ಶಂಕೆಯಿದ್ದು, ಭಯೋತ್ಪಾದನಾ ವಿರೋಧಿ ಸಂಸ್ಥೆಯ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿಯೂ ಇವನ ಹೆಸರಿದೆ.
ಕೆನಡಾದಲ್ಲಿ ವಾಸಿಸುತ್ತಿರುವ ಅನ್ಮೋಲ್, ಆಗಾಗ ಅಮೆರಿಕಕ್ಕೆ ಹೋಗಿಬರುತ್ತಾನೆ ಎಂಬ ಮಾಹಿತಿಯಿದ್ದು, ಆತನ ವಿರುದ್ಧ ಲುಕ್‌ಔಟ್ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ.
ಮಹಾ ಚುನಾವಣೆ: ಆದಿತ್ಯ ಠಾಕ್ರೆ ವಿರುದ್ಧ ಮಿಲಿಂದ್ ದೇವ್ರಾ ಕಣಕ್ಕೆ?
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರ್ಲಿ ಕ್ಷೇತ್ರದಲ್ಲಿ ಸ್ಟಾರ್ ಸಮರ ನಡೆಯುವ ನಿರೀಕ್ಷೆ ಇದ್ದು, ಶಿವಸೇನೆ (ಯುಬಿಟಿ) ಯುವ ನಾಯಕ ಆದಿತ್ಯ ಠಾಕ್ರೆ ವಿರುದ್ಧ ಸಿಎಂ ಏಕನಾಥ್ ಶಿಂಧೆ ಬಣದ ಶಿವಸೇನೆಯು ಮಿಲಿಂದ್ ದೇವ್ರಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.ಮುಂಬೈ ದಕ್ಷಿಣದಿಂದ 3 ಬಾರಿ ಸಂಸದರಾಗಿದ್ದ ದೇವ್ರಾ, ಪ್ರಸ್ತುತ ರಾಜ್ಯಸಭೆ ಸದಸ್ಯರಾಗಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಶಿವಸೇನೆ (ಶಿಂಧೆ ಬಣ) ಸೇರಿದ್ದರು.
ಈ ನಡುವೆ ನಾಮಪತ್ರ ಸಲ್ಲಿಸಿ ಮಾತನಾಡಿದ ಠಾಕ್ರೆ, ಜನರ ಆಶೀರ್ವಾದದಿಂದ ವಿಜಯಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು. ಅತ್ತ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಸಂದೀಪ್ ದೇಶಪಾಂಡೆ ಅವರನ್ನು ಕಣಕ್ಕಿಳಿಸಿದೆ.
663 ಅಂಕ ಕುಸಿದ ಸೆನ್ಸೆಕ್ಸ್ 79356 ಅಂಕದಲ್ಲಿ ಅಂತ್ಯ: ₹ 6.8 ಲಕ್ಷ ಕೋಟಿ ನಷ್ಟ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಶುಕ್ರವಾರ 663 ಅಂಕಗಳ ಭಾರೀ ಇಳಿಕೆ ಕಂಡು 79402 ಅಂಕಗಳಲ್ಲಿ ಮುಕ್ತಾಯವಾಗಿದೆ. ಮತ್ತೊಂದೆಡೆ ನಿಫ್ಟಿ ಕೂಡಾ 218 ಅಂಕ ಕುಸಿದು 24,180 ಅಂಕಗಳಲ್ಲಿ ಮುಕ್ತಾಯವಾಗಿದೆ. ಬಾಂಬೆ ಷೇರುಪೇಟೆಯಲ್ಲಿ ಕಂಡುಬಂದ ಭಾರೀ ಕುಸಿತದ ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 6.8 ಲಕ್ಷ ಕೋಟಿ ರು.ನಷ್ಟು ಕರಗಿಹೋಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆಯುತ್ತಿರುವುದು, ಜಾಗತಿಕ ಷೇರುಪೇಟೆಗಳ ಪ್ರಭಾವ, ಮಧ್ಯಪ್ರಾಚ್ಯ ಬಿಕ್ಕಟ್ಟು ಷೇರುಪೇಟೆ ಮೇಲೆ ಕರಿನೆರಳು ಬೀರಿದೆ. ಇಂಡಸ್ ಇಂಡ್ ಬ್ಯಾಂಕ್ ಶೇ.20ರಷ್ಟುಭಾರೀ ಕುಸಿತ ಕಂಡಿದೆ.
ಸಿದ್ದಿಕಿ ಹತ್ಯೆಗೆ ಬಳಸಿದ ಗನ್ ಪಾಕ್‌ನಿಂದ ಏರ್‌ಡ್ರಾಪ್ ಶಂಕೆ
ಮುಂಬೈ: ಮಹಾರಾಷ್ಟ್ರದ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಹತ್ಯೆಗೆ ಬಳಸಿದ್ದು 3 ಅಲ್ಲ, 4 ಗನ್‌ಗಳು ಹಾಗೂ ಅವುಗಳನ್ನು ಪಾಕಿಸ್ತಾನದಿಂದ ಏರ್‌ಡ್ರಾಪ್ ಮಾಡಿದ ಶಂಕೆ ಇದೆ ಎಂದು ಎಂದು ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಬಂದೂಕುಗಳನ್ನು ಕಳಿಸಲಾಗಿದೆಯೇ ಎಂದು ತನಿಖೆ ಆರಂಭಿಸಲಾಗಿದೆ. ಅವು ರಾಜಸ್ಥಾನ ಮೂಲಕ ಬಂದ ಶಂಕೆ ಇದ್ದು ಬಂದೂಕುಗಳ ಚಿತ್ರವನ್ನು ರಾಜಸ್ಥಾನ ಪೊಲೀಸರಿಗೂ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಿದ್ದಿಗಿ ಅವರನ್ನು ಅ.12ರಂದು ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಳಿಕ ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಶೂಟರ್‌ಗಳನ್ನು ಬಂಧಿಸಲಾಗಿತ್ತು.
ಬಿಷ್ಣೋಯಿ ಗ್ಯಾಂಗ್‌ನ 7 ಶೂಟರ್‌ಗಳ ಬಂಧನ
ನವದೆಹಲಿ: ಪಾತಕಿ ಲಾರೆನ್ಸ್ ಬಿಷ್ಣೋಯಿ ತಂಡದ ವಿರುದ್ಧದ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರ ವಿಶೇಷ ತಂಡವು ಬಿಷ್ಣೋಯಿ ಗ್ಯಾಂಗ್‌ಗೆ ಸೇರಿದ 7 ಶಂಕಿತ ಶೂಟರ್‌ಗಳನ್ನು ಬಂಧಿಸಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಮಹಾರಾಷ್ಟ್ರದಲ್ಲಿ ಎನ್‌ಸಿಪಿ ನಾಯಕ ಸಿದ್ದಿಕಿ ಹತ್ಯೆ ಹೊಣೆ ಬಿಷ್ಣೋಯಿ ಹೊತ್ತುಕೊಂಡ ಬಳಿಕದ ಈ ಕಾರ್ಯಾಚರಣೆಯಲ್ಲಿ ಪಂಜಾಬ್ ಮತ್ತು ಇತರ ರಾಜ್ಯಗಳಿಂದ ಬಂಧಿಸಲಾಗಿದೆ. ಈ ವೇಳೆ ಬಂಧಿತರಿಂದ ಅಪಾರ ಪ್ರಮಾಣದ ಶಸ್ತಾಸ್ತ್ರ, ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬಂಧಿತರು, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಆಪ್ತ ಆರ್ಜೂ ಬಿಷ್ಣೋಯಿ ನಿರ್ದೇಶನದ ಮೇರೆಗೆ ರಾಜಸ್ಥಾನದಲ್ಲಿ ಯಾರನ್ನೋ ಗುರಿಯಾಗಿಸಲು ಯೋಜನೆ ರೂಪಿಸಿದ್ದರು ಎನ್ನುವ ಸಂಶಯ ವ್ಯಕ್ತವಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಇವರ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.