ಸಿದ್ದು ಸರ್ಕಾರಕ್ಕೆ ನಿರ್ಮಲಾ ಪ್ರಹಾರ

| Published : Jul 31 2024, 01:00 AM IST

ಸಾರಾಂಶ

ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಎಸ್ಸಿಎಸ್ಟಿ ಯೋಜನೆಯ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಹಾಗೂ ದಲಿತರ ಹಣವನ್ನು ಖಾಸಗಿಯವರ ಖಾತೆಗೆ ಹಾಕುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ.

ನವದೆಹಲಿ: ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಎಸ್ಸಿಎಸ್ಟಿ ಯೋಜನೆಯ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಹಾಗೂ ದಲಿತರ ಹಣವನ್ನು ಖಾಸಗಿಯವರ ಖಾತೆಗೆ ಹಾಕುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ.ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸಿ ಮಂಗಳವಾರ ಮಾತನಾಡಿದ ಅವರು, ‘ದಲಿತರ ಉದ್ಧಾರಕ್ಕೆ ಮೋದಿ ಸರ್ಕಾರ ಸಾಕಷ್ಟು ಅನುದಾನ ನೀಡಿಲ್ಲ’ ಎಂದು ಕಾಂಗ್ರೆಸ್‌ ಸಂಸದ ಹಾಗೂ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು.‘ಕರ್ನಾಟಕ ಸರ್ಕಾರವು ಎಸ್ಸಿಎಸ್ಟಿ ಉಪ ಯೋಜನೆಯ 1587 ಕೋಟಿ ರು. ಸಹಿತ 2228 ಕೋಟಿ ರು.ಗಳನ್ನು ಹಾಗೂ ಆದಿವಾಸಿಗಳ ಉಪ ಯೋಜನೆಯ 641 ಕೋಟಿ ರು.ಗಳನ್ನು ಬಳಸಿಕೊಂಡಿದೆ. ಆದರೆ ಯಾವುದಕ್ಕೆ ಬಳಸಿದೆ ಎಂಬುದು ದೇವರಿಗೇ ಗೊತ್ತು. ಇದನ್ನು ಕರ್ನಾಟಕದಲ್ಲಿ ಪ್ರತಿಪಕ್ಷದ ನಾಯಕರೇ ಪ್ರಶ್ನಿಸುತ್ತಿದ್ದಾರೆ. ಮಾಧ್ಯಮಗಳೂ ಇವನ್ನು ಪ್ರಶ್ನಿಸಿವೆ.

ಚರಣ್‌ಜಿತ್‌ ಸಿಂಗ್‌ ಚನ್ನಿ ಅವರೇ ಕರ್ನಾಟಕಕ್ಕೆ ಹೋಗಿ ಹಾಗೂ ಎಸ್ಸಿಎಸ್ಟಿಯವರ ಪರಿಸ್ಥಿತಿ ಏನಿದೆ ಎಂಬುದನ್ನು ಕೇಳಿ. ಇಲ್ಲೇಕೆ ಕೇಳುತ್ತಿದ್ದೀರಿ? ಅಲ್ಲಿನ ಕಾಂಗ್ರೆಸ್‌ ಸರ್ಕಾರದಲ್ಲೇ ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿವೆ’ ಎಂದು ನಿರ್ಮಲಾ ಆರೋಪಿಸಿದರು. ‘ಎಲ್ಲ ಕಾಂಗ್ರೆಸ್‌ ನೇತಾರರೇ ಇವತ್ತೇ ಕರ್ನಾಟಕಕ್ಕೆ ಹೋಗಿ. ಎಸ್ಸಿ ಜನಾಂಗದ ದುಡ್ಡನ್ನು ಖಾಸಗಿ ಖಾತೆಗಳಿಗೆ ಹಾಕಲಾಗುತ್ತಿದೆ. ಅದು ನಿಮಗೆ ಗೊತ್ತಿಲ್ಲವೇ? ಎಸ್ಸಿ ಬಗ್ಗೆ ಇಲ್ಲಿ ನೀವು ಉಪದೇಶ ಮಾಡುತ್ತಿದ್ದೀರಿ?’ ಎಂದು ಪರೋಕ್ಷವಾಗಿ ವಾಲ್ಮೀಕಿ ನಿಗಮದ ಹಣವು ಖಾಸಗಿ ಖಾತೆಗಳಿಗೆ ವರ್ಗಾವಣೆ ಆದ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.