ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ

| Published : Jan 31 2024, 02:15 AM IST / Updated: Jan 31 2024, 01:27 PM IST

new parliment

ಸಾರಾಂಶ

ಇಂದು ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ. ನಾಳೆ ನಿರ್ಮಲಾರಿಂದ ಮಧ್ಯಂತರ ಬಜೆಟ್‌ ಮಂಡನೆಯಾಗಲಿದೆ. ಹೊಸ ಸಂಸತ್ತಲ್ಲಿ ರಾಷ್ಟ್ರಪತಿ ಭಾಷಣ, ಬಜೆಟ್‌ ಇದೇ ಮೊದಲ ಬಾರಿಯಾಗಿದೆ. ಈ ಸಲ ಆರ್ಥಿಕ ಸಮೀಕ್ಷೆ ಮಂಡನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ: ಬುಧವಾರದಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಲಿದೆ. ವರ್ಷದ ಮೊದಲ ಕಲಾಪ ಆಗಿರುವ ಕಾರಣ ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 

ಇನ್ನು ಅಧಿವೇಶನ ಆರಂಭವಾದ ಮಾರನೇ ದಿನ ಫೆ.1 ರಂದು ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ.

ಹೊಸ ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಮೊದಲ ಜಂಟಿ ಭಾಷಣ ಹಾಗೂ ಮೊದಲ ಬಜೆಟ್‌ ಇದಾಗಲಿದೆ.

ಇದೇ ವೇಳೆ, ಇದು ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಅಧಿವೇಶನವಾಗಿದೆ. ಹೀಗಾಗಿ ಇದು ಕಡಿಮೆ ಅವಧಿಯ ಅಧಿವೇಶನವಾಗಿದ್ದು ಜ.31 ರಿಂದ ಫೆ.9ರ ವರೆಗೆ ಮಾತ್ರ ನಡೆಯಲಿದೆ. 

ಈ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿತು. ಸಭೆಯಲ್ಲಿ, ‘ವಿಪಕ್ಷಗಳು ಪ್ರಸ್ತಾಪಿಸುವ ವಿವಿಧ ವಿಷಯಗಳ ಬಗ್ಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. 

ಆದರೆ ವಿಪಕ್ಷಗಳು ಸದನ ಸುಗಮವಾಗಿ ನಡೆಯಲು ಅವಕಾಶ ನೀಡಬೇಕು. ಇದು ಸರ್ಕಾರದ ಕೊನೆಯ ಅಧಿವೇಶನ ಆಗಿರುವ ಕಾರಣ ಯಾವುದೇ ಹೊಸ ಮಸೂದೆಗಳ ಮಂಡನೆ ಇಲ್ಲ. 

ರಾಷ್ಟ್ರಪತಿಗಳ ಭಾಷಣ, ಮಧ್ಯಂತರ ಬಜೆಟ್‌, ಮುಂಗಡಪತ್ರ ಹಾಗೂ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ, ಕೊನೆಗೆ ಚರ್ಚೆಗೆ ಮೋದಿ ಅವರ ಉತ್ತರ ಮಾತ್ರ ಇರಲಿವೆ’ ಎಂದು ಜೋಶಿ ಸ್ಪಷ್ಟಪಡಿಸಿದರು

ಇಂದು ಆರ್ಥಿಕ ಸಮೀಕ್ಷೆ ಮಂಡನೆ ಇಲ್ಲ: ಬಜೆಟ್‌ ಮಂಡನೆಗೂ ಮುನ್ನಾ ದಿನ ಆರ್ಥಿಕ ಸಮೀಕ್ಷೆ ಪ್ರಕಟವಾಗುವುದುಂಟು. ಇದು ಮೊದಲಿನಿಂದಲೂ ನಡೆದ ಪದ್ಧತಿ. 

ಆದರೆ ಫೆ.1ರ ಬಜೆಟ್‌ಗೂ ಮುನ್ನ ಈ ಸಲ ಆರ್ಥಿಕ ಸಮೀಕ್ಷೆ ಪ್ರಕಟವಾಗದು. ಏಕೆಂದರೆ ಪೂರ್ಣಪ್ರಮಾಣದ ಬಜೆಟ್‌ ಆಗಿದ್ದರೆ ಮಾತ್ರ ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ. 

ಈ ಸಲದ್ದು ಮಧ್ಯಂತರ ಬಜೆಟ್‌ ಆಗಿರುವ ಕಾರಣ ಬುಧವಾರ ಆರ್ಥಿಕ ಸಮೀಕ್ಷೆ ಇಲ್ಲ.

ನಾಳೆ ನಿರ್ಮಲಾ ಮಧ್ಯಂತರ ಬಜೆಟ್‌, ಹೊಸ ಘೋಷಣೆ ಇಲ್ಲ?
ಫೆ.1ರ ಗುರುವಾರ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ ಅವರು ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ. 

ಮಧ್ಯಂತರ ಬಜೆಟ್‌ ಆಗಿದ್ದರಿಂದ ‘ಆಕರ್ಷಕ ಘೋಷಣೆಗಳು’ ಇರದು ಎಂದು ಕಳೆದ ತಿಂಗಳು ನಿರ್ಮಲಾ ಹೇಳಿದ್ದರು. ಆದರೂ ಚುನಾವಣಾ ವರ್ಷ ಆಗಿರುವುದರಿಂದ ಏನಾದರೂ ಘೋಷಣೆ ಆಗಬಹುದಾ ಎಂದು ಜನರು ಎದುರು ನೋಡುತ್ತಿದ್ದಾರೆ. 

ಬೇಸಿಗೆಯಲ್ಲಿನ ನಡೆವ ಲೋಕಸಭೆ ಚುನಾವಣೆ ಬಳಿಕ ರಚನೆಯಾಗುವ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದೆ. ಆಗ ಹೊಸ ಯೋಜನೆಗಳ ಘೋಷಣೆ ಆಗಬಹುದು ಎನ್ನಲಾಗಿದೆ.

ಅಮಾನತಾಗಿದ್ದ ಎಲ್ಲ 146 ಸಂಸದರು ಇಂದು ಸದನಕ್ಕೆ
ಚಳಿಗಾಲದ ಸಂಸತ್‌ ಅಧಿವೇಶನದ ಸಮಯದಲ್ಲಿ ಸದನದ ಬಾವಿಗಿಳಿದು ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಅಶಿಸ್ತು ತೋರಿದ ಕಾರಣ ಅಮಾನತುಗೊಂಡಿದ್ದ 146 ವಿಪಕ್ಷ ಸಂಸದರು ಬುಧವಾರ ಸದನಕ್ಕೆ ಆಗಮಿಸಲಿದ್ದಾರೆ.

132 ಸಂಸದರು ಚಳಿಗಾಲದ ಅಧಿವೇಶನಕ್ಕೆ ಸೀಮಿತವಾಗಿ ಅಮಾನತಾಗಿದ್ದರು. ಇನ್ನು ರಾಜ್ಯಸಭೆಯ 11 ಸದಸ್ಯರು, 3 ಲೋಕಸಭಾ ಸೇರಿ 14 ಸದಸ್ಯರನ್ನು ಗಂಭೀರ ಅಶಿಸ್ತು ತೋರಿದ್ದ ಕಾರಣ ನೀಡಿ ಅಮಾನತು ಮಾಡಿದ್ದಲ್ಲದೆ, ಅವರ ಉಲ್ಲಂಘನೆಯನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಲಾಗಿತ್ತು.

ಈ ನಡುವೆ, ಮಂಗಳವಾರ 11 ರಾಜ್ಯಸಭಾ ಸದಸ್ಯರು ದೋಷಿಗಳು ಎಂದು ಹಕ್ಕುಬಾಧ್ಯತಾ ಸಮಿತಿ ಘೋಷಿಸಿದ್ದರೂ, ಅವರ ಸ್ಪೀಕರ್‌ ಜಗದೀಪ್‌ ಧನಕರ್‌ ಅವರು ಅಮಾನತು ಹಿಂಪಡೆದಿದ್ದಾರೆ. 

ಕ್ಷಮೆ ಕೇಳಿದ ಕಾರಣ 3 ಲೋಕಸಭಾ ಸದಸ್ಯರ ಅಮಾನತನ್ನೂ ರದ್ದುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಕಳೆದ ಚಳಿಗಾಲದ ಅಧಿವೇಶನದ ವೇಳೆ ಸದನದಲ್ಲಿ ಅಶಿಸ್ತು ತೋರಿದ ಕಾರಣ ಉಭಯ ಸದನಗಳಿಂದ ಒಟ್ಟು 146 ಸಂಸದರನ್ನು ಅಮಾನತು ಮಾಡಲಾಗಿತ್ತು.