ಒತ್ತಡ ನಿಭಾಯಿಸಲು ಅಂತಶಕ್ತಿ ಬೇಕೇ? : ಸಿಎ ಸಾವಿನ ಬೆನ್ನಲ್ಲೇ ಸಚಿವರ ಹೇಳಿಕೆ ವಿವಾದ

| Published : Sep 24 2024, 01:53 AM IST / Updated: Sep 24 2024, 06:54 AM IST

ಸಾರಾಂಶ

ಕೆಲಸದ ಒತ್ತಡ ನಿಭಾಯಿಸಲು ಅಂತಶಕ್ತಿ ಅಗತ್ಯ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆ ನೀಡಿದ್ದು, ಸಿ.ಎ. ಆಗಿದ್ದ ಯುವತಿಯೊಬ್ಬರ ಸಾವಿನ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಶಿವಸೇನೆ ಮತ್ತು ಸಿಪಿಐ ಸಂಸದರು ಖಂಡಿಸಿದ್ದಾರೆ.

ನವದೆಹಲಿ: ಕೆಲಸದ ಒತ್ತಡ ನಿಭಾಯಿಸಲು ಅಂತಶಕ್ತಿ ಅಗತ್ಯ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಕೆಲಸದ ಒತ್ತಡದಿಂದ ಸಿ.ಎ. ಆಗಿದ್ದ ಕೇರಳ ಮೂಲದ ಯುವತಿ ಪುಣೆಯಲ್ಲಿ ಸಾವನ್ನಪ್ಪಿದ ಕುರಿತು ಅವರು ನೀಡಿರುವ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ, ‘ನೀವು ಏನೇ ಓದಿ, ಉದ್ಯೋಗ ಮಾಡಿ. ಆದರೆ ಒತ್ತಡ ನಿಭಾಯಿಸಲು ಅಂತಶಕ್ತಿ ಅಗತ್ಯ. ಅದನ್ನು ಆಧ್ಯಾತ್ಮದ ಮೂಲಕ ಸಾಧಿಸಬಹುದು. ದೇವರನ್ನು ನಂಬಿದಾಗ ಅಂತಶಕ್ತಿ ಹೆಚ್ಚುತ್ತದೆ. ಶಿಕ್ಷಣ ಸಂಸ್ಥೆಗಳು ದೈವಿಕತೆ ಮತ್ತು ಆಧ್ಯಾತ್ಮಿಕತೆ ಕಲಿಸಬೇಕು’ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ, ‘ಅನ್ನಾಗೆ ಅಂತಃಶಕ್ತಿ ಶಕ್ತಿ ಇದ್ದುದರಿಂದಲೇ ಸಿಎ ಪದವಿ ಪಡೆಯಲು ಸಾಧ್ಯವಾಯಿತು. ದೀರ್ಘ ಕೆಲಸದ ಅವಧಿ, ಕಿರುಕುಳ ಮತ್ತು ಒತ್ತಡದಿಂದ ಅವರ ಸಾವಾಗಿದೆ’ ಎಂದಿದ್ದಾರೆ. ಅಂತೆಯೇ ‘ಸಚಿವೆ, ದುಡಿಯುವ ಜನರ ದೈನಂದಿನ ಹೋರಾಟಗಳನ್ನು ಅವಮಾನಿಸಿದ್ದಾರೆ’ ಎಂದು ಸಿಪಿಐ ಸಂಸದ ಸಂತೋಷ್‌ ಕುಮಾರ್‌ ಆರೊಪಿಸಿದ್ದಾರೆ.