₹50,000 ಎಫ್‌ಡಿ ಬಡ್ಡಿ ಆದಾಯಕ್ಕೂ ಇನ್ನು ಶೇ.10 ಟಿಡಿಎಸ್‌ ಕಡಿತ ಇಲ್ಲ : ಏ.1ರಿಂದ ಈ ನೀತಿ

| N/A | Published : Feb 02 2025, 01:01 AM IST / Updated: Feb 02 2025, 05:02 AM IST

ಸಾರಾಂಶ

ಅತ್ಯಂತ ಸುರಕ್ಷಿತ ಹೂಡಿಕೆ ಎಂಬ ಕಾರಣಕ್ಕೆ ಬ್ಯಾಂಕುಗಳ ನಿಶ್ಚಿತ ಠೇವಣಿ (ಫಿಕ್ಸ್ಡ್‌ ಡಿಪಾಸಿಟ್‌- ಎಫ್‌ಡಿ)ಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಂತಸದ ಸುದ್ದಿ. ಎಫ್‌ಡಿಯಿಂದ ಲಭಿಸುವ 50 ಸಾವಿರ ರು.ವರೆಗಿನ ಬಡ್ಡಿ ಆದಾಯಕ್ಕೂ ಇನ್ನು ಶೇ.10 ಟಿಡಿಎಸ್‌ ಕಡಿತ ಆಗುವುದಿಲ್ಲ.

ನವದೆಹಲಿ : ಅತ್ಯಂತ ಸುರಕ್ಷಿತ ಹೂಡಿಕೆ ಎಂಬ ಕಾರಣಕ್ಕೆ ಬ್ಯಾಂಕುಗಳ ನಿಶ್ಚಿತ ಠೇವಣಿ (ಫಿಕ್ಸ್ಡ್‌ ಡಿಪಾಸಿಟ್‌- ಎಫ್‌ಡಿ)ಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಂತಸದ ಸುದ್ದಿ. ಎಫ್‌ಡಿಯಿಂದ ಲಭಿಸುವ 50 ಸಾವಿರ ರು.ವರೆಗಿನ ಬಡ್ಡಿ ಆದಾಯಕ್ಕೂ ಇನ್ನು ಶೇ.10 ಟಿಡಿಎಸ್‌ ಕಡಿತ ಆಗುವುದಿಲ್ಲ. ಟಿಡಿಎಸ್‌ ಕಡಿತಕ್ಕೆ ಹಾಲಿ ಇರುವ 40 ಸಾವಿರ ರು. ಮಿತಿಯನ್ನು 50 ಸಾವಿರ ರು.ಗೆ ಹೆಚ್ಚಳ ಮಾಡಿರುವುದೇ ಇದಕ್ಕೆ ಕಾರಣ. ಏ.1ರಿಂದ ಈ ನೀತಿ ಜಾರಿಗೆ ಬರಲಿದೆ.

ಹಿರಿಯ ನಾಗರಿಕರು ಎಫ್‌ಡಿಯಿಂದ ಗಳಿಸುವ 50 ಸಾವಿರ ರು. ಬಡ್ಡಿಗೆ ಈವರೆಗೆ ಶೇ.10ರಷ್ಟು ಟಿಡಿಎಸ್‌ ಕಡಿತವಾಗುತ್ತಿತ್ತು (ಪ್ಯಾನ್‌ ಕಾರ್ಡ್‌ ಇದ್ದರೆ). ಆ ಮಿತಿಯನ್ನು ಈಗ 1 ಲಕ್ಷ ರು.ಗೆ ಏರಿಸಲಾಗಿದೆ. ಬ್ಯಾಂಕ್‌, ಸಹಕಾರಿ ಸಂಸ್ಥೆ, ಅಂಚೆ ಕಚೇರಿಗಳಲ್ಲಿ ಇಟ್ಟಿರುವ ಹಣಕ್ಕೆ ಹೊಸ ನೀತಿ ಅನ್ವಯವಾಗಲಿದೆ.

ಏನಿದು ಟಿಡಿಎಸ್‌?:

ಟಿಡಿಎಸ್‌ ಅಂದರೆ ಟ್ಯಾಕ್ಸ್‌ ಡಿಡಕ್ಟಡ್‌ ಅಟ್‌ ಸೋರ್ಸ್‌. ಮೂಲದಲ್ಲೇ ತೆರಿಗೆ ಮುರಿದುಕೊಳ್ಳುವುದು ಎಂದರ್ಥ. ಬ್ಯಾಂಕಿನಲ್ಲಿ ಯಾರಾದರೂ ಠೇವಣಿ ಇಟ್ಟರೆ, ಅದಕ್ಕೆ ಒಂದು ವರ್ಷದಲ್ಲಿ ಬರುವ ಬಡ್ಡಿ ಆದಾಯ ಇಂತಿಷ್ಟು ಮೀರಿದರೆ ಟಿಡಿಎಸ್‌ ವಿಧಿಸಬೇಕು ಎಂಬ ನಿಯಮವಿದೆ. ಹಿರಿಯ ನಾಗರಿಕರು ಹಾಗೂ ಇತರೆ ನಾಗರಿಕರಿಗೆ ಈ ಮಿತಿ ಬೇರೆ ಇದೆ. ಪ್ಯಾನ್‌ ಹೊಂದಿದ್ದರೆ ಶೇ.10, ಇಲ್ಲದಿದ್ದರೆ ಶೇ.20 ಟಿಡಿಎಸ್‌ ಅನ್ನು ಬ್ಯಾಂಕುಗಳು ಮುರಿದುಕೊಳ್ಳುತ್ತವೆ.

ವಿಮೆ ಕಮೀಷನ್, ಲಾಟರಿ ಹಣಕ್ಕೂ ಮಿತಿ ಹೆಚ್ಚಳ ವೈಯಕ್ತಿಕ ಷೇರುದಾರರು ಡಿವಿಡೆಂಡ್‌ ಮೂಲಕ ಗಳಿಸುವ ಆದಾಯ 5000 ರು. ದಾಟಿದರೆ ಟಿಡಿಎಸ್‌ ಕಡಿತಗೊಳ್ಳುತ್ತಿತ್ತು. ಅದನ್ನು ಈಗ 10 ಸಾವಿರ ರು.ಗೆ ಏರಿಸಲಾಗಿದೆ. ವಿಮಾ ಕಮಿಷನ್‌ 15 ಸಾವಿರ ರು. ದಾಟಿದರೆ ಮುರಿದುಕೊಳ್ಳುತ್ತಿದ್ದ ಟಿಡಿಎಸ್‌ ಅನ್ನು 20 ಸಾವಿರ ರು.ವರೆಗೆ ವಿಸ್ತರಿಸಲಾಗಿದೆ. ಲಾಟರಿ ಟಿಕೆಟ್‌ನಿಂದ ಗೆಲ್ಲುವ 15 ಸಾವಿರ ರು.ವರೆಗಿನ ಮೊತ್ತಕ್ಕೆ ಕಡಿತಗೊಳಿಸಲಾಗುತ್ತಿದ್ದ ಟಿಡಿಎಸ್‌ ಮಿತಿಯನ್ನು 20 ಸಾವಿರ ರು.ಗೆ ಏರಿಸಲಾಗಿದೆ. ಬಾಡಿಗೆ ಆದಾಯದ ಟಿಡಿಎಸ್‌ ಮಿತಿಯನ್ನು 2.40 ಲಕ್ಷ ರು.ನಿಂದ 6 ಲಕ್ಷ ರು.ಗೆ ಹೆಚ್ಚಿಸಲಾಗಿದೆ.