ಕರ್ನಾಟಕದ ಎಲ್ಲಾ ಬಾಕಿ ಪಾವತಿಸಿದ್ದೇವೆ: ನಿರ್ಮಲಾ ಸೀತಾರಾಮನ್‌

| Published : Feb 08 2024, 01:31 AM IST / Updated: Feb 08 2024, 07:40 AM IST

ಕರ್ನಾಟಕದ ಎಲ್ಲಾ ಬಾಕಿ ಪಾವತಿಸಿದ್ದೇವೆ: ನಿರ್ಮಲಾ ಸೀತಾರಾಮನ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕಕ್ಕೆ ನೀಡಬೇಕಿರುವ ಎಲ್ಲಾ ಅನುದಾನವನ್ನು ಸಕಾಲಕ್ಕೆ ಸರಿಯಾಗಿ ನೀಡಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕಕ್ಕೆ ನೀಡಬೇಕಿರುವ ಎಲ್ಲಾ ಅನುದಾನವನ್ನು ಸಕಾಲಕ್ಕೆ ಸರಿಯಾಗಿ ನೀಡಲಾಗಿದೆ. ಹಣಕಾಸು ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಇಲ್ಲಿಯವರೆಗೆ ಯಾವುದೇ ತರಹದ ಅನ್ಯಾಯ ಅಥವಾ ತಾರತಮ್ಯ ಆಗಿಲ್ಲ. 

ಕರ್ನಾಟಕವೂ ಸೇರಿದಂತೆ ಯಾವುದೇ ರಾಜ್ಯದ ವಿರುದ್ಧ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸಚಿವರು ಅಂಕಿ-ಅಂಶಗಳ ಸಮೇತ ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ 13ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ 61,691 ಕೋಟಿ ನೀಡಲಾಗಿದ್ದರೆ, 14 ನೇ ಹಣಕಾಸು ಆಯೋಗದ ಅವಧಿಯಲ್ಲಿ 1,51,309 ಕೋಟಿ ನೀಡಲಾಗಿತ್ತು. 

15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇಲ್ಲಿಯವರೆಗೆ, ಅಂದರೆ ಎರಡು ವರ್ಷ ಬಾಕಿ ಇರುವಾಗಲೇ 1,21,854 ಕೋಟಿ ನೀಡಲಾಗಿದೆ. 15ನೇ ಹಣಕಾಸು ಆಯೋಗದ ಅವಧಿ ಮುಗಿಯುವ ವೇಳೆಗೆ ಈ ಅನುದಾನ 1,74,339 ಕೋಟಿಗೆ ಏರಲಿದೆ ಎಂದು ತಿಳಿಸಿದ್ದಾರೆ.

ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ 81,795 ಕೋಟಿ ರು. ನೀಡಲಾಗಿತ್ತು. ಆದರೆ, ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2,85,452 ಕೋಟಿ ನೀಡಲಾಗಿದೆ. ಇದೇ ವೇಳೆ, ಕಳೆದ 10 ವರ್ಷಗಳ ಅವಧಿಯಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ವಿಶೇಷ ಅನುದಾನದಡಿ 2,26,837 ಕೋಟಿ ನೀಡಲಾಗಿದೆ.

ಆದರೆ, ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಕೇವಲ 60,779 ಕೋಟಿ ನೀಡಲಾಗಿತ್ತು. ಅಲ್ಲದೆ, ಆದಾಯ ಕೊರತೆಯ ಅನುದಾನವಾಗಿ ಕರ್ನಾಟಕಕ್ಕೆ 1,631 ಕೋಟಿ ನೀಡಲಾಗಿದೆ. 

ಆದರೆ, ಉತ್ತರ ಪ್ರದೇಶಕ್ಕೆ ಒಂದೇ ಒಂದು ರುಪಾಯಿ ಹೋಗಿಲ್ಲ. ಹಣಕಾಸು ಆಯೋಗ ಕೂಡ ಅವರಿಗೆ ಈ ಅನುದಾನ ನೀಡುವಂತೆ ಶಿಫಾರಸ್ಸು ಮಾಡಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 15ನೇ ಹಣಕಾಸು ಆಯೋಗದ ಅವಧಿಯಲ್ಲಿನ ವಿಶೇಷ ಹಣ ನೀಡಿಲ್ಲ ಎಂದಿದ್ದಾರೆ. ಆದರೆ, ಆ ಬಗ್ಗೆ ಆಯೋಗದ ವರದಿಯಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. 

ಆದರೆ, ಸಿಎಂ ಮಾತ್ರ 5,495 ಕೋಟಿ ವಿಶೇಷ ಅನುದಾನ ಅಂತಾರೆ, ಇದು ಸುಳ್ಳು. "Capital Assitance for Capital Expenditures " ಯೋಜನೆಯಡಿ ನಾವು ಕರ್ನಾಟಕ ಸರ್ಕಾರಕ್ಕೆ 6,279 ಕೋಟಿ ರು.ಗಳನ್ನು ಯಾವುದೇ ಬಡ್ಡಿಯಿಲ್ಲದೆ 50 ವರ್ಷಕ್ಕೆ ನೀಡಿದ್ದೇವೆ, ಇದನ್ನು ನೀಡಬೇಕಾಗಿರಲಿಲ್ಲ. 

15ನೇ ಹಣಕಾಸು ಆಯೋಗದ ಅವಧಿಯಲ್ಲಿ ಬರ ಪರಿಹಾರವೂ ಸೇರಿದಂತೆ ಪ್ರಕೃತಿ ವಿಕೋಪ ನಿಧಿಯಡಿ ಮುಂಗಡವಾಗಿ ಕರ್ನಾಟಕಕ್ಕೆ 6,196 ಕೋಟಿ ರು. ನೀಡಲಾಗಿದೆ. ಆದರೆ, ಕಾಂಗ್ರೆಸ್ ನವರು ಮಾತ್ರ ಒಂದೇ ಒಂದು ರುಪಾಯಿ ನೀಡಲಾಗಿಲ್ಲ ಎಂದು ಜಾಹೀರಾತು ನೀಡಿದ್ದಾರೆ. 

13 ಬಜೆಟ್‌ಗಳನ್ನು ಮಂಡಿಸಿರುವ ಅನುಭವ ಹೊಂದಿರುವ ಕರ್ನಾಟಕದ ಸಿಎಂ ಅವರ ಈ ಸುಳ್ಳು ಆರೋಪಗಳು ನಿಜವಾಗಿಯೂ ಆಶ್ಚರ್ಯ ತರಿಸಿದೆ ಎಂದು ಹೇಳಿದ್ದಾರೆ.

ಜಿಎಸ್‌ಟಿ ಪರಿಹಾರವಾಗಿ ₹1.65 ಲಕ್ಷ ಕೋಟಿ ಬಾಕಿ ಇದೆ ಎಂದು ಕರ್ನಾಟಕ ಸಿಎಂ ಹೇಳಿದ್ದಾರೆ. ಆದರೆ, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯಿದೆ, 2017ರ ಅಡಿಯಲ್ಲಿ ಒದಗಿಸಲಾಗಿದೆ. 

ಈ ಕಾಯಿದೆ ಪ್ರಕಾರ, ಜುಲೈ 1, 2017 ರಿಂದ ಜಿಎಸ್‌ಟಿ ಅನುಷ್ಠಾನದ ದಿನಾಂಕದಿಂದ ಪ್ರಾರಂಭವಾಗುವ ಐದು ವರ್ಷಗಳ ಪರಿವರ್ತನೆಯ ಅವಧಿಗೆ ಪರಿಹಾರವನ್ನು ಪಾವತಿಸಲಾಗುತ್ತದೆ. 

ಜೂನ್ 30, 2022 ರವರೆಗೆ ರಾಜ್ಯವೊಂದು ಈ ಐದು ವರ್ಷಗಳ ಅವಧಿಗೆ ಮಾತ್ರ ಪರಿಹಾರವನ್ನು ಪಡೆಯಲು ಅರ್ಹವಾಗಿದೆ. ಇದು ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಗ್ಯಾರಂಟಿಯಿಂದ ರಾಜ್ಯದ ಖಜಾನೆ ಬರಿದು: ಐದು ಗ್ಯಾರಂಟಿ ನೀಡಿ ಕರ್ನಾಟಕ ಸರ್ಕಾರ ಬರಿದಾಗಿದೆ. ಈ ಬಗ್ಗೆ ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಗ್ಯಾರಂಟಿ ಹಿನ್ನಲೆಯಲ್ಲಿ ಅಭಿವೃದ್ಧಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. 

ನಂತರ, ಸಿಎಂ ಹಣಕಾಸು ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ ಸಹ ಇದೆ ಮಾತು ಹೇಳಿದ್ದಾರೆ. ಆರಂಭದಲ್ಲಿ 40 ಸಾವಿರ ಕೋಟಿ ಹಣ ಬೇಕೆಂದು ಹೇಳಿದರು. ನಂತರ, 58 ಸಾವಿರ ಕೋಟಿ ಬೇಕು ಅಂದರು. ಆದರೆ, ಇವುಗಳಿಗೆ ಕನಿಷ್ಠ 60 ಸಾವಿರ ಕೋಟಿ ಹಣ ಬೇಕು ಎಂಬುದು ನಮಗೆ ಗೊತ್ತಿತ್ತು ಎಂದು ಟೀಕಿಸಿದ್ದಾರೆ.