ಸಾರಾಂಶ
ನವದೆಹಲಿ : 2011ರಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಬಿಡುಗಡೆ ಮಾಡಿದ್ದ ವರದಿ ಆಧರಿಸಿ ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಕಾಂಗ್ರೆಸ್ ಮೇಲೆ ಹೊಸ ‘ಬಾಂಬ್’ ಎಸೆದಿದ್ದಾರೆ. ಮಾಜಿ ರಾಜ್ಯಪಾಲೆ, ಮಾಜಿ ಸಂಸದೆ, ಕರ್ನಾಟಕದ ಮಾರ್ಗರೆಟ್ ಆಳ್ಚ, ಎಚ್.ಕೆ.ಎಲ್. ಭಗತ್ ಸೇರಿ 150ಕ್ಕೂ ಹೆಚ್ಚು ಕಾಂಗ್ರೆಸ್ ಸಂಸದರಿಗೆ ಹಿಂದಿನ ರಷ್ಯಾ ನೇತೃತ್ವದ ಸೋವಿಯತ್ ಒಕ್ಕೂಟ ಹಣ ನೀಡಿತ್ತು ಎಂದು ಆರೋಪಿಸಿದ್ದಾರೆ.
ಎಚ್.ಕೆ.ಎಲ್.ಭಗತ್ ನಾಯಕತ್ವದಲ್ಲಿ ಕಾಂಗ್ರೆಸ್ ಸಂಸದರಿಗೆ ಅಂದಿನ ಸೋವಿಯತ್ ಒಕ್ಕೂಟ ಹಣ ನೀಡುತ್ತಿತ್ತು. ಈ ಸಂಸದರು ಇದಕ್ಕೆ ಪ್ರತಿಯಾಗಿ ಆಗ ರಷ್ಯಾದ ಏಜೆಂಟರ ರೀತಿ ಕೆಲಸ ಮಾಡುತ್ತಿದ್ದರು ಎಂದು ದೂರಿದ್ದಾರೆ.
ಇದೇ ವೇಳೆ, ದೇಶದ ಹಲವು ಪತ್ರಕರ್ತರೂ ಸೋವಿಯತ್ ಒಕ್ಕೂಟದ ಪರ ಸಾವಿರಾರು ಲೇಖನಗಳನ್ನು ಬರೆದಿದ್ದರು. ಈ ಕುರಿತು ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.‘ಕಾಂಗ್ರೆಸ್, ಭ್ರಷ್ಟಾಚಾರ ಮತ್ತು ಜೀತ’ ಎಂಬ ಹೆಸರಿನಲ್ಲಿ ಸಿಐಎ ತಯಾರಿಸಿದ್ದ ರಹಸ್ಯ ದಾಖಲೆ ಆಧರಿಸಿ ದುಬೆ ಈ ಆರೋಪ ಮಾಡಿದ್ದಾರೆ.
ಕೆಲ ಪತ್ರಕರ್ತರು ಕೂಡ ರಷ್ಯಾದ ಏಜೆಂಟರ ರೀತಿ ಕೆಲಸ ಮಾಡಿದ್ದರು. 16 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ರಷ್ಯಾದ ಪರ ಪ್ರಕಟಿಸಿದ್ದಾರೆ. ಜತೆಗೆ, ಕಾಂಗ್ರೆಸ್ ಸರ್ಕಾರಾವಧಿಯಲ್ಲಿ ರಷ್ಯಾದ ಗುಪ್ತಚರ ಸಂಸ್ಥೆಯ 1,100 ಮಂದಿ ಭಾರತದಲ್ಲಿದ್ದರು. ಅವರು ಅಧಿಕಾರಿಗಳು, ಉದ್ದಿಮೆ ಸಂಘಟನೆಗಳು, ಕಮ್ಯುನಿಸ್ಟ್ ಪಕ್ಷಗಳು ಮತ್ತು ಅಭಿಪ್ರಾಯ ರೂಪಿಸುವವರನ್ನು ತಮ್ಮ ಕಿಸೆಯಲ್ಲಿಟ್ಟುಕೊಂಡಿದ್ದರು.
ಕಾಂಗ್ರೆಸ್‌ನ ಸುಭದ್ರ ಜೋಶಿ ಅವರು ಜರ್ಮನಿ ಸರ್ಕಾರದಿಂದ ಚುನಾವಣೆಗಾಗಿ 5 ಲಕ್ಷ ರು. ಪಡೆದುಕೊಂಡಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ಅವರು ಇಂಡೋ-ಜರ್ಮನ್ ಫೋರಂನ ಅಧ್ಯಕ್ಷರಾದರು ಎಂದು ಸಿಐಎ ವರದಿಯನ್ನು ಆಧರಿಸಿ ಪ್ರಸ್ತಾಪಿಸಿದ್ದಾರೆ.ಭಾರತವೇನು ದೇಶವೇ ಅಥವಾ ಗುಲಾಮರು, ಏಜೆಂಟರು ಮತ್ತು ಮಧ್ಯವರ್ತಿಗಳ ಕೈಗೊಂಬೆಯೇ? ಎಂದು ಕಿಡಿಕಾರಿರುವ ದುಬೆ, ಕಾಂಗ್ರೆಸ್ ಇದಕ್ಕೆ ಉತ್ತರ ನೀಡಬೇಕು. ಇದರ ಕುರಿತು ಈಗ ತನಿಖೆ ಆಗಬೇಕೇ? ಬೇಡವೇ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
- 150 ಕಾಂಗ್ರೆಸ್ ಸಂಸದರೂ ಹಣ ಸ್ವೀಕರಿಸಿದ್ದರು
- ಸಿಐಎ ವರದಿ ಆಧರಿಸಿ ನಿಶಿಕಾಂತ್ ದುಬೆ ಬಾಂಬ್
- - ಎಚ್.ಕೆ.ಎಲ್. ಭಗತ್ ನಾಯಕತ್ವದಲ್ಲಿ ಕಾಂಗ್ರೆಸ್ ಸಂಸದರಿಗೆ ಸೋವಿಯತ್ ಒಕ್ಕೂಟ ಹಣ ನೀಡುತ್ತಿತ್ತು
- ಮಾಜಿ ರಾಜ್ಯಪಾಲೆ, ಕರ್ನಾಟಕ ಮಾಜಿ ಎಂಪಿ ಮಾರ್ಗರೆಟ್ ಆಳ್ವ ಸೇರಿ 150 ಸಂಸದರು ಹಣ ಪಡೆದಿದ್ದರು
- ಇದಕ್ಕೆ ಪ್ರತಿಯಾಗಿ ಈ ಸಂಸದರು ರಷ್ಯಾದ ಏಜೆಂಟರ ರೀತಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ತನಿಖೆ ಆಗಲಿ
- 2011ರಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಬಿಡುಗಡೆ ಮಾಡಿದ್ದ ವರದಿ ಆಧರಿಸಿ ನಿಶಿಕಾಂತ್ ದುಬೆ ಆಗ್ರಹ