ಸಾರಾಂಶ
ಪಟನಾ: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು, ರಾಜಕೀಯ ನಾಯಕರ ಕಾಲು ಮುಟ್ಟಿ ನಮಸ್ಕರಿಸುವ ಸಂಪ್ರದಾಯ ಮುಂದುವರೆಸಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (73), ಇದೀಗ ತಮಗಿಂತ ವಯಸ್ಸಿನಲ್ಲಿ ಕಿರಿಯ ಬಿಜೆಪಿ ನಾಯಕರ ಪಾದಸ್ಪರ್ಶಕ್ಕೆ ಮುಂದಾದ ಘಟನೆ ನಡೆದಿದೆ. ಚಿತ್ರಗುಪ್ತ ಪೂಜೆಯ ನಿಮಿತ್ತ ನಗರದ ನೌಜರ್‌ಘಾಟ್ ದೇಗುಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿತೀಶ್ ಅವರು, ಮಾಜಿ ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ರಾಕೇಶ್ ಕುಮಾರ್ ಸಿನ್ಹಾ (60) ಅವರಿಗೆ ಮೊದಲು ನಮಸ್ಕರಿಸಿ ಬಳಿಕ ಪಾದ ಸ್ಪರ್ಶಿಸಲು ಪ್ರಯತ್ನಿಸಿದ್ದಾರೆ. ಇದನ್ನು ಕಂಡು ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಸ್ವತಃ ಸಿನ್ಹಾ ಮುಜುಗರಕ್ಕೆ ಒಳಗಾದರು.
==ಹಿಜಾಬ್ ವಿರುದ್ಧ ತುಂಡುಡುಗೆ ಧರಿಸಿ ಪ್ರತಿಭಟಿಸಿದ್ದ ಇರಾನಿ ಮಹಿಳೆ ‘ನಾಪತ್ತೆ’
ತೆಹ್ರಾನ್: ಇರಾನ್ ಸರ್ಕಾರದ ಕಟ್ಟುನಿಟ್ಟಿನ ಹಿಜಾಬ್ ನಿಯಮ ಹಾಗೂ ನೈತಿಕ ಪೊಲೀಸ್‌ಗಿರಿಯ ವಿರುದ್ಧ ತುಂಡುಡುಗೆ ಧರಿಸಿ ಪ್ರತಿಭಟಿಸಿದ್ದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಈಗ ಆಕೆಯ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಲಭಿಸುತ್ತಿಲ್ಲ. ಜೊತೆಗೆ ಆಕೆಯ ಗುರುತು ಕೂಡ ಪತ್ತೆಯಾಗಿಲ್ಲ.ಕೆಲ ವರದಿಗಳ ಪ್ರಕಾರ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದಲ್ಲಿ ಬಸೀಜ್ ಅರೆಸೇನಾ ಪಡೆಗಳು ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಶಿರವಸ್ತ್ರ ಹಾಗೂ ಬಟ್ಟೆಯನ್ನು ಹರಿಯಲಾಗಿದೆ.ಈ ಬಗ್ಗೆ ಪೋಸ್ಟ್ ಮಾಡಿರುವ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ನಿರ್ದೇಶಕ, ‘2 ಮಕ್ಕಳ ತಾಯಿಯಾದ ಈಕೆ ಪತಿಯಿಂದ ಬೇರ್ಪಟ್ಟಿದ್ದು, ಮಾನಸಿಕ ಅಸ್ವಸ್ಥೆಯಾಗಿದ್ದಾಳೆ’ ಎಂದಿದ್ದಾರೆ.
==ನಾನು ದೈವಭಕ್ತ, ಎಲ್ಲ ಧರ್ಮ ಗೌರವಿಸುವೆ: ಸಿಜೆಐ ಚಂದ್ರಚೂಡ್
ನವದೆಹಲಿ: ‘ನಾನು ದೈವಭಕ್ತ ವ್ಯಕ್ತಿ ಆಗಿದ್ದು, ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವೆ’ ಎಂದು ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.‘ಅಯೋಧ್ಯೆ ವಿವಾದ ಬಗೆಹರಿಸಲು ದೇವರಲ್ಲಿ ಬೇಡಿಕೊಂಡಿದ್ದೆ’ ಎಂಬ ಹೇಳಿಕೆ ವಿವಾದಕ್ಕೀಡಾದ ಕಾರಣ ಸೋಮವಾರ ಸಭೆಯೊಂದರಲ್ಲಿ ಸ್ಪಷ್ಟನೆ ನೀಡಿದ ಅವರು, ‘ನಾನು ದೇವರಲ್ಲಿ ನಂಬಿಕೆ ಉಳ್ಳವ. ಆದರೆ ಎಲ್ಲ ಧರ್ಮ ಗೌರವಿಸುವೆ’ ಎಂದರು.ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನೆಗೆ ಗಣೇಶ ಹಬ್ಬಕ್ಕೆ ಬಂದಿದ್ದ ಬಗ್ಗೆ ಪುನಃ ಸ್ಪಷ್ಟನೆ ನೀಡಿದ ಅವರು, ‘ಅದು ಗೌಪ್ಯ ಭೇಟಿ ಅಲ್ಲ. ಅಧಿಕೃತ ಭೇಟಿ. ಶಾಸಕಾಂಗ-ನ್ಯಾಯಾಂಗ ಬೇರೆ ಬೇರೆ ಎಂದರೆ ಭೇಟಿ ಮಾಡಬಾರದು ಎಂದೇನಿಲ್ಲ’ ಎಂದರು.
==ಸೆನ್ಸೆಕ್ಸ್ 942 ಅಂಕ ಪತನ: 3 ತಿಂಗಳ ಕನಿಷ್ಠ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ 942 ಅಂಕಗಳ ಭಾರೀ ಕುಸಿತ ಕಂಡು 78782 ಅಂಕಗಳಲ್ಲಿ ಮುಕ್ತಾಯವಾಗಿದೆ. ಇನ್ನೊಂದೆಡೆ ನಿಫ್ಟಿ ಕೂಡಾ 309 ಅಂಕ ಕುಸಿದು, 24 ಸಾವಿರಕ್ಕಿಂತ ಕೆಳಗೆ, ಅರ್ಥಾತ್ 23995ರಲ್ಲಿ ಮುಕ್ತಾಯವಾಯಿತು. ಸೆನ್ಸೆಕ್ಸ್ ಅಂಕವು 3 ತಿಂಗಳ ಕನಿಷ್ಠವಾಗಿದೆ.ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 5.99 ಲಕ್ಷ ಕೋಟಿ ರು.ನಷ್ಟು ಕರಗಿ ಹೋಯಿತು.ಮಧ್ಯಂತರದಲ್ಲಿ ಸೆನ್ಸೆಕ್ಸ್ 1491 ಅಂಕಗಳವರೆಗೆ ಕುಸಿತ ಕಂಡಿತ್ತಾದರೂ ಅಂತ್ಯದಲ್ಲಿ ಕೊಂಚ ಚೇತರಿಕೆ ಕಂಡಿತು. ಆದಾಗ್ಯೂ ಭಾರೀ ಕುಸಿತದ ಪರಿಣಾಮ ನೊಂದಾಯಿತ ಷೇರುಗಳ ಬೆಲೆ ಮುಗ್ಗರಿಸಿವೆ.ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಆತಂಕ, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರು ಮಾರಾಟಕ್ಕೆ ಮುಂದಾಗಿದ್ದು, ಭಾರತಕ್ಕಿಂತ ಚೀನಾ ಮತ್ತು ಇತರೆ ದೇಶಗಳ ಷೇರು ಮೌಲ್ಯ ಅಗ್ಗವಾಗಿರುವ ಅಂಶ, ಆರ್ಥಿಕತೆಗೆ ಚೇತರಿಕೆ ನೀಡಲು ಶೀಘ್ರವೇ ಚೀನಾ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂಬ ಸುದ್ದಿಗಳು ಪತನಕ್ಕೆ ಕಾರಣವಾಗಿವೆ.
ರಿಲಯನ್ಸ್, ಬ್ಯಾಂಕಿಂಗ್ ವಲಯದ ಷೇರುಗಳು, ಬಜಾಜ್ ಫಿನ್, ಸನ್ ಫಾರ್ಮಾ, ಅದಾನಿ ಪೋರ್ಟ್, ಟಾಟಾ ಮೋಟಾರ್ಸ್ ಷೇರುಗಳು ಭಾರೀ ಇಳಿಕೆ ಕಂಡವು.