ವೆಂಕಟೇಶ್ವರ ದೇಗುಲಕ್ಕೆ ಬರುವ ಭಕ್ತರಿಗೆ ಕಾಡುತ್ತಿದ್ದ ಚಪ್ಪಲಿ ಸಮಸ್ಯೆಗೆ ದೇಗುಲ ಆಡಳಿತ (ಟಿಟಿಡಿ) ಪರಿಹಾರವೊಂದನ್ನು ಹುಡುಕಿದೆ. ಚಪ್ಪಲಿಗಳನ್ನು ಬಿಟ್ಟು ದರ್ಶನ ಮುಗಿಸಿ ಬಂದಾಗ, ಚಪ್ಪಲಿ ಎಲ್ಲಿದೆ ಎಂಬ ಗೊಂದಲಕ್ಕೆ ತೆರೆ ಎಳೆಯಲು ಕ್ಯುಆರ್‌ಕೋಡ್ ವ್ಯವಸ್ಥೆಯನ್ನು ಟಿಟಿಡಿ ಜಾರಿಗೆ ತಂದಿದೆ.

ತಿರುಮಲ: ವೆಂಕಟೇಶ್ವರ ದೇಗುಲಕ್ಕೆ ಬರುವ ಭಕ್ತರಿಗೆ ಕಾಡುತ್ತಿದ್ದ ಚಪ್ಪಲಿ ಸಮಸ್ಯೆಗೆ ದೇಗುಲ ಆಡಳಿತ (ಟಿಟಿಡಿ) ಪರಿಹಾರವೊಂದನ್ನು ಹುಡುಕಿದೆ. ಚಪ್ಪಲಿಗಳನ್ನು ಬಿಟ್ಟು ದರ್ಶನ ಮುಗಿಸಿ ಬಂದಾಗ, ಚಪ್ಪಲಿ ಎಲ್ಲಿದೆ ಎಂಬ ಗೊಂದಲಕ್ಕೆ ತೆರೆ ಎಳೆಯಲು ಕ್ಯುಆರ್‌ಕೋಡ್ ವ್ಯವಸ್ಥೆಯನ್ನು ಟಿಟಿಡಿ ಜಾರಿಗೆ ತಂದಿದೆ.

ಈ ವ್ಯವಸ್ಥೆಗೆ ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಚಾಲನೆ ನೀಡಿದ್ದಾರೆ.

ಕ್ಯೂಆರ್‌ ಕೋಡ್‌ ಕೆಲಸ:

ಭಕ್ತರು ಚಪ್ಪಲಿ ಸ್ಟ್ಯಾಂಡ್‌ನಲ್ಲಿ ಪಾದರಕ್ಷೆ ಬಿಟ್ಟ ಬಳಿಕ ಅವರಿಗೆ ಕ್ಯುಆರ್‌ಕೋಡ್‌ ಚೀಟಿ ವಿತರಿಸಲಾಗುತ್ತದೆ. ಅದರಲ್ಲಿ ಎಷ್ಟು ಜೊತೆ ಪಾದರಕ್ಷೆ, ಸ್ಟ್ಯಾಂಡ್‌, ರ್‍ಯಾಕ್‌, ಬಾಕ್ಸ್‌ಗಳ ಕುರಿತು ಮಾಹಿತಿ ಇರಲಿದೆ. ದರ್ಶನ ಮುಗಿಸಿ ಬಂದಾಗ ಚಪ್ಪಲಿ ಸ್ಟ್ಯಾಂಡ್‌ನಲ್ಲಿ ಕ್ಯುಆರ್‌ಕೋಡ್‌ ಸ್ಕ್ಯಾನ್‌ ಮಾಡಿದಾಗ, ಚಪ್ಪಲಿಯ ನಿರ್ದಿಷ್ಟ ಸ್ಥಳ ಗೊತ್ತಾಗಲಿದೆ. ಇದರಿಂದ ಜನರಲ್ಲಿ ನೂಕುನುಗ್ಗಲು, ಗೊಂದಲ ನಿವಾರಣೆಯಾಗಿದೆ.

ಶೇ.80ರಷ್ಟು ಜನರ ಚಪ್ಪಲಿ ಮಾತ್ರ ಸಿಗುತ್ತಿದ್ದವು.

ಈವರೆಗೆ ಶೇ.80ರಷ್ಟು ಜನರ ಚಪ್ಪಲಿ ಮಾತ್ರ ಸಿಗುತ್ತಿದ್ದವು. ಕ್ಯುಆರ್ ಕೋಡ್‌ನಿಂದಾಗಿ ಶೇ.99ರಷ್ಟು ಜನರ ಚಪ್ಪಲಿ ಸಿಗುತ್ತಿವೆ ಎಂದು ಟಿಟಿಡಿ ಹೇಳಿದೆ.