ಸಾರಾಂಶ
ನವದೆಹಲಿ: ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಎನ್‌ಡಿಎ ಮೈತ್ರಿಕೂಟ ತೊರೆದು, ಆರ್‌ಜೆಡಿ, ಕಾಂಗ್ರೆಸ್ ಜೊತೆ ಸೇರಿ ಬಿಹಾರದಲ್ಲಿ ಸರ್ಕಾರ ರಚಿಸಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತೆ ಎನ್‌ಡಿಎ ಮೈತ್ರಿಕೂಟ ಸೇರುವ ಸಾಧ್ಯತೆ ಕಂಡುಬಂದಿದೆ.
ಇದಕ್ಕೆ ಪೂರಕವಾಗುವಂಥ ಹಲವು ದಿಢೀರ್ ಬೆಳವಣಿಗೆಗಳು ಬಿಹಾರ ಮತ್ತು ದೆಹಲಿಯಲ್ಲಿ ಬುಧವಾರದಿಂದೀಚೆಗೆ ಕಂಡುಬಂದಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಒಂದು ವೇಳೆ ನಿತೀಶ್ ಮತ್ತೆ ಎನ್‌ಡಿಎ ಮೈತ್ರಿಕೂಟ ಸೇರುವುದು ಖಚಿತವಾದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಉದ್ದೇಶದಿಂದ ಜನ್ಮ ತಳೆದಿರುವ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಕೂಟಕ್ಕೆ ಮತ್ತೊಂದು ಆಘಾತ ಎದುರಾಗುವುದು ಖಚಿತವಾಗಲಿದೆ.
ಜೊತೆಗೆ ಬಿಹಾರದಲ್ಲಿ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಸರ್ಕಾರ ಪತನಗೊಂಡು, ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರ ರಚನೆಯಾಗಲಿದೆ.ಬುಧವಾರವಷ್ಟೇ, ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಸಿಎಂ ಮಮತಾ ಮತ್ತು ಪಂಜಾಬ್‌ನಲ್ಲಿ ಮೈತ್ರಿ ಇಲ್ಲ ಎಂದು ಭಗವಂತ್ ಸಿಂಗ್ ಮಾನ್ ಘೋಷಿಸಿದ್ದರು.
ಅದರ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಶಾಕ್ ಹೊಡೆಯುವ ಎಲ್ಲಾ ಸಾಧ್ಯತೆ ಕಂಡುಬಂದಿದೆ.
ನಿತೀಶ್ ಅಚ್ಚರಿ ಹೇಳಿಕೆ: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಕಟುಟೀಕಾರಾಗಿದ್ದ ಬಿಹಾರ ಸಿಎಂ ನಿತೀಶ್ ಬುಧವಾರ ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಅಚ್ಚರಿ ಮೂಡಿಸಿದ್ದಾರೆ.
ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿದ ಕೇಂದ್ರ ಸರ್ಕಾರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿ ವೇಳೆ ನಿತೀಶ್, ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕರ್ಪೂರಿ ಠಾಕೂರ್ ಅವರು ರಾಜಕಾರಣದಲ್ಲಿ ಎಂದಿಗೂ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸಿರಲಿಲ್ಲ. ಆದರೆ ಹಲವು ವ್ಯಕ್ತಿಗಳು ಈಗಲೂ ತಮ್ಮ ಕುಟುಂಬವನ್ನು ರಾಜಕಾರಣದಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಲಾಲು ಹೆಸರೆತ್ತದೆ ಚಾಟಿ ಬೀಸಿದ್ದಾರೆ.
ಇದಕ್ಕೆ ಲಾಲು ಪುತ್ರಿ ರೋಹಿಣಿ ಆಚಾರ್ಯ ತಿರುಗೇಟು ನೀಡಿದ್ದಾರೆ. ‘ಕೆಲವೊಮ್ಮೆ ಕೆಲವು ಜನರಿಗೆ ತಮ್ಮ ಸಮಸ್ಯೆ ಅರ್ಥವಾಗದಿದ್ದರೂ ನಾಚಿಕೆ ಇಲ್ಲದೆ ಬೇರೊಬ್ಬರ ಮೇಲೆ ಕೆಸರು ಎರಚುತ್ತಾರೆ’ ಎಂದು ಟ್ವೀಟ್ ಮಾಡುವ ಮೂಲಕ ಲಾಲು- ನಿತೀಶ್ ಸಂಬಂಧ ಹಳಸಿರುವ ಸುಳಿವು ನೀಡಿದ್ದಾರೆ.
ಮತ್ತೊಂದೆಡೆ, ಜ.30ರಂದು ಪಟನಾದಲ್ಲಿ ನಡೆಯಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ತಮ್ಮ ಜಾರ್ಖಂಡ್ ಪ್ರವಾಸ ರದ್ದುಗೊಳಿಸಿದ ನಿತೀಶ್ ಗುರುವಾರ ಜೆಡಿಯು ನಾಯಕರ ಜೊತೆ ಪಟನಾದಲ್ಲಿ ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಆರ್‌ಜೆಡಿ ನಾಯಕರು ಕೂಡಾ ಪಟನಾದಲ್ಲಿ ಸಭೆ ನಡೆಸಿ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಇನ್ನೊಂದೆಡೆ ಬಿಹಾರ ಬೆಳವಣಿಗೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಹಾರ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಮೋದಿ ದೆಹಲಿಯಲ್ಲಿ ಆಪ್ತ ಸಮಾಲೋಚನೆ ನಡೆಸಿದ್ದಾರೆ.
ಜೊತೆಗೆ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ.ಈ ಎಲ್ಲಾ ಬೆಳವಣಿಗೆಗಳು ಸಿಎಂ ನಿತೀಶ್ ಮತ್ತೆ ಎನ್‌ಡಿಎ ಮೈತ್ರಿಕೂಟ ಸೇರುವ ಸುಳಿವು ಎಂದು ಬಣ್ಣಿಸಲಾಗಿದೆ.
ಆದರೆ ನಿತೀಶ್ ಸೇರಿಸಿಕೊಳ್ಳುವ ಮುನ್ನ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಷರತ್ತು ಹಾಕಿದೆ ಎನ್ನಲಾಗಿದೆ.
ಬಿಜೆಪಿ ರೇಣು ಹೊಸ ಸಿಎಂ?
ಒಂದು ವೇಳೆ ನಿತೀಶ್ ಕುಮಾರ್ ರಾಜೀನಾಮೆ ನೀಡಿ ಬಿಜೆಪಿ ಜೊತೆ ಸರ್ಕಾರ ರಚಿಸಿದರೆ ಬಿಜೆಪಿಯ ರೇಣು ದೇವಿ ನೂತನ ಮುಖ್ಯಮಂತ್ರಿ ಆಗಬಹುದು ಎಂದು ಹೇಳಲಾಗುತ್ತಿದೆ.