ಸಾರಾಂಶ
ಲೋಕಸಭೆ ಫಲಿತಾಂಶವು ಎನ್‌ಡಿಎ ಕೂಟಕ್ಕೆ ಸರಳ ಬಹುಮತ ನೀಡಿವೆಯಾದರೂ, ಬಿಜೆಪಿಗೆ ಏಕಾಂಗಿಯಾಗಿ ಬಹುಮತ ಬಾರದೇ ಇರುವುದು ವಿಪಕ್ಷಗಳ ‘ಇಂಡಿಯಾ ಕೂಟ’ದ ಆಸೆ ಚಿಗುರೊಡೆಯುವಂತೆ ಮಾಡಿದೆ.
ನವದೆಹಲಿ: ಲೋಕಸಭೆ ಫಲಿತಾಂಶವು ಎನ್‌ಡಿಎ ಕೂಟಕ್ಕೆ ಸರಳ ಬಹುಮತ ನೀಡಿವೆಯಾದರೂ, ಬಿಜೆಪಿಗೆ ಏಕಾಂಗಿಯಾಗಿ ಬಹುಮತ ಬಾರದೇ ಇರುವುದು ವಿಪಕ್ಷಗಳ ‘ಇಂಡಿಯಾ ಕೂಟ’ದ ಆಸೆ ಚಿಗುರೊಡೆಯುವಂತೆ ಮಾಡಿದೆ. ಹೀಗಾಗಿ ಎನ್‌ಡಿಎ ಸರ್ಕಾರದ ಅಸ್ತಿತ್ವಕ್ಕೆ ನಿರ್ಣಾಯಕ ಆಗಿರುವ ನಿತೀಶ್ ಕುಮಾರ್‌ರ ಜೆಡಿಯು ಹಾಗೂ ಟಿಡಿಪಿಯ ಚಂದ್ರಬಾಬು ನಾಯ್ಡು ಅವರನ್ನು ಸೆಳೆಯಲು ಇಂಡಿಯಾ ಕೂಟದ ನಾಯಕರು ಯತ್ನ ಆರಂಭಿಸಿದ್ದಾರೆ.
ನಿತೀಶ್ ಕುಮಾರ್‌ಗೆ ಉಪಪ್ರಧಾನಿ ಹುದ್ದೆ ನೀಡುವುದು ಹಾಗೂ ಆಂಧ್ರಕ್ಕೆ ‘ವಿಶೇಷ ಸ್ಥಾನಮಾನ’ ನೀಡುವುದು ಇಂಡಿಯಾ ಕೂಟದ ಇರಾದೆಯಾಗಿದ್ದು, ತನ್ಮೂಲಕ ಇಬ್ಬರನ್ನೂ ಸೆಳೆಯಲು ಇಂಡಿಯಾ ಕೂಟ ಪ್ಲಾನ್ ಮಾಡಿದೆ.
ಈ ಬಗ್ಗೆ ಎನ್‌ಸಿಪಿ (ಎಸ್ಸಿಪಿ) ನಾಯಕ ಶರದ್ ಪವಾರ್ ಹಾಗೂ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಅವರು ನಿತೀಶ್, ನಾಯ್ಡು ಜತೆ ಮಂಗಳವಾರ ಸಂಜೆ ಮತಎಣಿಕೆ ಟ್ರೆಂಡ್ ತಿಳಿಯುತ್ತಿದ್ದಂತೆಯೇ ಫೋನ್‌ನಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ನಿತೀಶ್ ಕುಮಾರ್ ಇಂಡಿಯಾ ಕೂಟದ ನಿರ್ಮಾತೃರಾದರೂ ಕೆಲವು ತಿಂಗಳ ಹಿಂದೆ ಒಕ್ಕೂಟದಿಂದ ನಿರ್ಗಮಿಸಿ ಬಿಜೆಪಿ ಜತೆ ಕೈಜೋಡಿಸಿದ್ದರು.
ಎನ್‌ಡಿಎಗೆ ನಮ್ಮ ಬೆಂಬಲ: ಜೆಡಿಯು ಭರವಸೆ
ನವದೆಹಲಿ: ನಾವು ಎನ್‌ಡಿಎನಲ್ಲಿದ್ದೇವೆ, ಅದರಲ್ಲೇ ಮುಂದುವರೆಯುತ್ತೇವೆ. ಇದು ನಮ್ಮ ಅಂತಿಮ ನಿರ್ಧಾರವಾಗಿದೆ. ಇದನ್ನು ಬದಲಿಸುವ ಮಾತೇ ಇಲ್ಲ ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಮಂಗಳವಾರ ತಿಳಿಸಿದ್ದಾರೆ.
ಮತ ಎಣಿಕೆಯ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನ ಮುಂದಿನ ನಡೆ ಏನು ಎಂಬುದರ ಬಗ್ಗೆ ಉಂಟಾಗಿರುವ ಊಹಾಪೋಹಗಳ ನಡುವೆ ತ್ಯಾಗಿ ತನ್ನ ಪಕ್ಷದ ನಿರ್ಧಾರ ಏನು ಎಂಬುದನ್ನು ತಿಳಿಸಿದ್ದಾರೆ.ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ. ಅದು ಗೆದ್ದ ಮೇಲೆ ಬಹುಮತದ ಕೊರತೆ ಎದುರಾಗಲಿದೆ. ಆದ್ದರಿಂದ ಮಿತ್ರ ಪಕ್ಷಗಳ ಬೆಂಬಲ ಅವಶ್ಯಕತೆ ಇದೆ. ನಾವು ಇಂಡಿಯಾ ಮೈತ್ರಿಕೂಟಕ್ಕೆ ಹಿಂದಿರುಗುವ ಮಾತೇ ಇಲ್ಲ. ಇದು ನಮ್ಮ ಅಂತಿಮ ನಿರ್ಧಾರವೆಂದು ತಿಳಿಸಿದ್ದಾರೆ.ಚುನಾವಣೆಯಲ್ಲಿ ಜನರ ತೀರ್ಪು ಅತಿಮುಖ್ಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದರು.