ರಾಮಮಂದಿರಕ್ಕೆ ಬರ್ತಾನಂತೆ ಕೈಲಾಸಾಧಿಪತಿ ನಿತ್ಯಾನಂದ!

| Published : Jan 22 2024, 02:17 AM IST / Updated: Jan 22 2024, 07:53 AM IST

ಸಾರಾಂಶ

ರಾಮಮಂದಿರ ಉದ್ಘಾಟನೆಗೆ ಬರುವುದಾಗಿ ಕೈಲಾಸ ದೇಶದಲ್ಲಿರುವ ಅತ್ಯಾಚಾರಿ ಆರೋಪಿ ನಿತ್ಯಾನಂದ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ. ಇದರ ಜೊತೆಗೆ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮಸೀದಿಗೆ ಪ್ರವಾದಿ ಮೊಹಮ್ಮದರ ತಂದೆ ಅಬ್ದುಲ್ಲ ಹೆಸರನ್ನು ನಾಮಕರಣ ಮಾಡುವುದಾಗಿ ಸಮಿತಿ ಘೋಷಿಸಿದೆ.

ನವದೆಹಲಿ: ಸನಾತನ ಧರ್ಮಪ್ರಚಾರಕ, ಸ್ವಯಂಘೋಷಿತ ದೇವಮಾನವ, ಅತ್ಯಾಚಾರ ಪ್ರಕರಣದ ಆರೋಪಿ ಸ್ವಾಮಿ ನಿತ್ಯಾನಂದ ಪ್ರಾಣಪ್ರತಿಷ್ಠಾಪನೆಗಾಗಿ ಅಯೋಧ್ಯೆ ರಾಮಮಂದಿರಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾನೆ. 

ಈ ಕುರಿತು ತನ್ನ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ನಿತ್ಯಾನಂದ, ‘ಅಯೋಧ್ಯೆಯಲ್ಲಿ ಜರುಗುವ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯನ್ನು ಯಾರೂ ತಪ್ಪಿಸಿಕೊಳ್ಳಬೇಡಿ.

ಅಲ್ಲಿಗೆ ಸನಾತನ ಧರ್ಮಪ್ರಚಾರಕನಾದ ನನಗೂ ಸಹ ಆಗಮಿಸುವಂತೆ ಆಹ್ವಾನ ನೀಡಲಾಗಿದೆ. ಅಲ್ಲಿಗೆ ಬಂದು ಸಕಲ ಭಕ್ತಾದಿಗಳನ್ನೂ ಆಶೀರ್ವದಿಸುತ್ತೇನೆ’ ಎಂದು ಉದ್ಗರಿಸಿದ್ದಾನೆ. 

ಬೆಂಗಳೂರಿನ ಬಿಡದಿ ಬಳಿ ಆಶ್ರಮ ಹೊಂದಿರುವ ಸ್ವಾಮಿ ನಿತ್ಯಾನಂದನ ಮೇಲೆ 2010ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿ ಜೈಲಿಗೆ ತೆರಳಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ. 

ನಂತರ 2020ರಲ್ಲಿ ಆತ ದೇಶವನ್ನು ಬಿಟ್ಟು ಪರಾರಿಯಾಗಿದ್ದು, ನಿಗೂಢ ಸ್ಥಳದಲ್ಲಿ ದ್ವೀಪವೊಂದನ್ನು ಖರೀದಿಸಿ ಕೈಲಾಸ ಎಂಬ ಹೆಸರಿನಲ್ಲಿ ರಾಜ್ಯಭಾರ ನಡೆಸುತ್ತಿದ್ದಾನೆ.

ಅಯೋಧ್ಯೆ ನೂತನ ಮಸೀದಿಗೆ ಪ್ರವಾದಿ ಮೊಹಮ್ಮದ್‌ ತಂದೆ ಅಬ್ದುಲ್ಲಾ ಹೆಸರು ನಾಮಕರಣ
ಬಾಬ್ರಿ ಮಸೀದಿಯ ಬದಲಾಗಿ ಅಯೋಧ್ಯೆಯ ಧನ್ನಿಪುರದಲ್ಲಿ ಕಟ್ಟುತ್ತಿರುವ ಮತ್ತೊಂದು ಮಸೀದಿಗೆ ಪ್ರವಾದಿ ಮೊಹಮ್ಮದ್ ಅವರ ತಂದೆ ಮೊಹಮ್ಮದ್‌ ಬಿನ್‌ ಅಬ್ದುಲ್ಲಾ ಎಂದು ಹೆಸರಿಡಲು ನಿರ್ಧರಿಸಿರುವುದಾಗಿ ಮಸೀದಿ ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ಹಾಜಿ ಅರ್ಫತ್‌ ಶೇಖ್‌ ತಿಳಿಸಿದರು.

ಈ ಕುರಿತು ಮಾತನಾಡುತ್ತಾ, ‘ಧನ್ನಿಪುರದಲ್ಲಿ 11 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಕಟ್ಟುತ್ತಿರುವ ಮಸೀದಿಗೆ ಪ್ರವಾದಿ ಮೊಹಮ್ಮದರ ತಂದೆ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಲಾಗಿದೆ. 

ಈ ಮಸೀದಿ ಸಂಕೀರ್ಣಕ್ಕೆ ಸರ್ವಧರ್ಮೀಯರೂ ಆಗಮಿಸುವ ರೀತಿಯಲ್ಲಿ ದವಾ-ದುವಾ(ಔಷಧ-ಶಿಕ್ಷಣ) ಸಮನ್ವಯ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ’ ಎಂದು ತಿಳಿಸಿದರು. 

ಹಾಗೆಯೇ 5 ಗುಮ್ಮಟಗಳಿರುವ ಮಸೀದಿಯ ನಿರ್ಮಾಣ ಕಾಮಗಾರಿ 2030ರೊಳಗೆ ಮುಕ್ತಾಯವಾಗುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ಡಿಜಿಟಲ್‌ ದೇಣಿಗೆ ಅಭಿಯಾನ ಆರಂಭಿಸುವುದಾಗಿ ತಿಳಿಸಿದರು.