ಸಾರಾಂಶ
ಹಾಲಿ 4 ಸ್ತರದಲ್ಲಿರುವ ಜಿಎಸ್ಟಿ ದರವನ್ನು ಕೇವಲ 2ಕ್ಕೆ ಇಳಿಸುವ ಪ್ರಸ್ತಾಪದಿಂದ ಆದಾಯ ಕುಸಿತದ ಆತಂಕದಲ್ಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಭಯ ನೀಡಿದೆ.
ನವದೆಹಲಿ : ಹಾಲಿ 4 ಸ್ತರದಲ್ಲಿರುವ ಜಿಎಸ್ಟಿ ದರವನ್ನು ಕೇವಲ 2ಕ್ಕೆ ಇಳಿಸುವ ಪ್ರಸ್ತಾಪದಿಂದ ಆದಾಯ ಕುಸಿತದ ಆತಂಕದಲ್ಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಭಯ ನೀಡಿದೆ. ಜಿಎಸ್ಟಿಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಸಮ ಪಾಲುದಾರರು. ಮುಂದಿನ ದಿನಗಳಲ್ಲಿ ಹೊಸ ಜಿಎಸ್ಟಿ ನೀತಿಯಿಂದ ಬಳಕೆ ಹೆಚ್ಚಾಗಿ ಹೆಚ್ಚಿನ ತೆರಿಗೆ ಆದಾಯ ಹರಿದುಬರಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿದೆ.
ತೆರಿಗೆ ಸ್ತರ ಬದಲಾವಣೆಯಿಂದ ಆರಂಭಿಕ ಹಂತದಲ್ಲಿ ಒಟ್ಟಾರೆ 50000 ಕೋಟಿ ರು.ನಷ್ಟು ತೆರಿಗೆ ಸಂಗ್ರಹ ಕಡಿತವಾಗಬಹುದಾದರೂ, ಅದನ್ನು ಸುಲಭವಾಗಿ ನಿರ್ವಹಿಸಬಹುದು ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ ಎನ್ನಲಾಗಿದೆ.
ಹಾಲಿ ನಿಯಮಗಳ ಅನ್ವಯ ಒಟ್ಟು ತೆರಿಗೆ ಸಂಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಮಪಾಲು ಹೊಂದಿವೆ. ಜೊತೆಗೆ ಕೇಂದ್ರದ ಹಂಚಿಕೆ ಮಾಡಬಹುದಾದ ಆದಾಯದಲ್ಲಿ ಶೆ.41ರಷ್ಟು ರಾಜ್ಯಗಳಿಗೆ ನೀಡಲಾಗುತ್ತದೆ. ಆದರೆ ಹೊಸ ಸ್ತರದಿಂದ ಒಟ್ಟಾರೆ ಆದಾಯ ಕುಂಠಿತವಾಗಿ ತಮ್ಮ ಮೇಲೂ ಪರಿಣಾಮ ಬೀರಬಹುದು ಎಂಬುದು ರಾಜ್ಯಗಳ ಆತಂಕ.
ಪ್ರಸಕ್ತ ಒಟ್ಟು ಜಿಎಸ್ಟಿ ತೆರಿಗೆ ಆದಾಯದಲ್ಲಿ ಶೇ.5ರಷ್ಟು ಸ್ತರದಿಂದ ಶೇ.7, ಶೇ.12ರ ಸ್ತರದ ಉತ್ಪನ್ನಗಳಿಂದ ಶೇ.5, ಶೇ.18ರ ಸ್ತರದಿಂದ ಶೇ.65 ಮತ್ತು ಶೇ.28ರಷ್ಟು ಸ್ತರದಿಂದ ಶೇ.11ರಷ್ಟು ಸಂಗ್ರಹವಾಗುತ್ತಿದೆ. ಆದರೆ ಇದೀಗ ಸರ್ಕಾರ ಶೇ.5 ಮತ್ತು ಶೇ.18ರ ಸ್ತರ ಮಾತ್ರ ಉಳಿಸುವ ಸಾಧ್ಯತೆ ಕಾರಣ ರಾಜ್ಯಗಳಿಗೆ ಆದಾಯದ ಕೊರತೆ ಆತಂಕ ಎದುರಾಗಿದೆ.