ಅಸ್ಸಾಂ ವಿಧಾನಸಭೆಯಲ್ಲಿ ಶಾಸಕರಿಗೆ ನೀಡುತ್ತಿದ್ದ 2 ಗಂಟೆಗಳ ನಮಾಜ್‌ ವಿರಾಮ ಸ್ಥಗಿತ

| N/A | Published : Feb 21 2025, 11:48 PM IST / Updated: Feb 22 2025, 06:59 AM IST

ಸಾರಾಂಶ

ಅಸ್ಸಾಂ ವಿಧಾನಸಭೆಯಲ್ಲಿ ಅಧಿವೇಶನ ಸಂದರ್ಭದಲ್ಲಿ ಶಾಸಕರಿಗೆ ನೀಡುತ್ತಿದ್ದ 2 ಗಂಟೆಗಳ ಶುಕ್ರವಾರದ ನಮಾಜ್‌ ವಿರಾಮವನ್ನು ಬರೋಬ್ಬರಿ 88 ವರ್ಷ ಬಳಿಕ ಇದೇ ಮೊದಲ ಬಾರಿ ಸ್ಥಗಿತಗೊಳಿಸಲಾಗಿದೆ.

 ಗುವಾಹಟಿ: ಅಸ್ಸಾಂ ವಿಧಾನಸಭೆಯಲ್ಲಿ ಅಧಿವೇಶನ ಸಂದರ್ಭದಲ್ಲಿ ಶಾಸಕರಿಗೆ ನೀಡುತ್ತಿದ್ದ 2 ಗಂಟೆಗಳ ಶುಕ್ರವಾರದ ನಮಾಜ್‌ ವಿರಾಮವನ್ನು ಬರೋಬ್ಬರಿ 88 ವರ್ಷ ಬಳಿಕ ಇದೇ ಮೊದಲ ಬಾರಿ ಸ್ಥಗಿತಗೊಳಿಸಲಾಗಿದೆ.

ರಾಜ್ಯದ ಬಿಜೆಪಿ ಸರ್ಕಾರದ ಆಶಯದ ಮೇರೆಗೆ ನಮಾಜ್‌ ವಿರಾಮವನ್ನು ಸ್ಥಗಿತಗೊಳಿಸುವ ನಿರ್ಣಯವನ್ನು ಕಳೆದ ಆಗಸ್ಟ್‌ನಲ್ಲಿಯೇ ತೆಗೆದುಕೊಳ್ಳಲಾಗಿತ್ತು. ಆದರೆ ಪ್ರಸಕ್ತ ಅಧಿವೇಶನದಿಂದ ಜಾರಿಗೆ ಬಂದಿದೆ.

ಇದಕ್ಕೆ ಮುಸ್ಲಿಂ ಶಾಸಕರು ವಿರೋಧ ವ್ಯಕ್ತಪಡಿದ್ದಾರೆ. ‘ವಿಧಾನಸಭೆಯಲ್ಲಿ ಸುಮಾರು 30 ಮುಸ್ಲಿಂ ಶಾಸಕರಿದ್ದು, ಈ ಕ್ರಮವನ್ನು ವಿರೋಧಿಸಿದ್ದರು. ಆದರೂ ಬಿಜೆಪಿ ಸಂಖ್ಯಾಬಲ ಹೊಂದಿದೆ ಎನ್ನುವ ಕಾರಣಕ್ಕೆ ಆ ನಿರ್ಧಾರ ಹೇರಿದೆ’ ಎಂದು ಕಿಡಿಕಾರಿದ್ದಾರೆ.

ಆದರೆ ಇದಕ್ಕೆ ತಿರುಗೇಟು ನೀಡಿರುವ ಸ್ಪೀಕರ್‌ ಬಿಸ್ವಜಿತ್‌ ದೈಮಾರಿ, ‘ಸಂವಿಧಾನದ ಜಾತ್ಯತೀತ ತತ್ವಕ್ಕೆ ಅನುಸಾರವಾಗಿ ಈ ಕ್ರಮ ಜರುಗಿಸಲಾಗಿದೆ. ಇತರ ದಿನಗಳಂತೆ ಶುಕ್ರವಾರವೂ ಯಾವುದೇ ನಮಾಜ್‌ ಬ್ರೇಕ್‌ ಇಲ್ಲದೇ ಸದನ ನಡೆಯಲಿದೆ’ ಎಂದರು.

ಈ ಕ್ರಮವನ್ನು ಸ್ವಾಗತಿಸಿದ ಸಿಎಂ ಹಿಮಂತ ಬಿಸ್ವ ಶರ್ಮ, ‘1937ರಲ್ಲಿ ಮುಸ್ಲಿಂ ಲೀಗ್‌ ನಾಯಕ ಸಯ್ಯದ್‌ ಸಾದುಲ್ಲಾ ಈ ಪದ್ಧತಿಗೆ ನಾಂದಿ ಹಾಡಿದ್ದರು’ ಎಂದು ಕಿಡಿಕಾರಿದರು.

ಏನಿದು ನಮಾಜ್‌ ಬ್ರೇಕ್‌?

ಅಧಿವೇಶನ ನಡೆಯುವಾಗ ಶುಕ್ರವಾರದಂದು 2 ತಾಸು ನಮಾಜ್‌ ವಿರಾಮ ನೀಡಿ, ಕಲಾಪವನ್ನೇ ಸ್ಥಗಿತಗೊಳಿಸಲಾಗುತ್ತಿತ್ತು. 1937ರಿಂದ ಈ ಪದ್ಧತಿ ಇತ್ತು. ಇದು ಈಗ ಸ್ಥಗಿತ.