ಸಾರಾಂಶ
ಭಾರತೀಯ ಸೇನೆ ನಡೆಸಿದ್ದ ಏರ್ ಸ್ಟ್ರೈಕ್ (ಸರ್ಜಿಕಲ್ ಸ್ಟ್ರೈಕ್) ಅನ್ನು ಪಂಜಾಬ್‌ನ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಸಂಸದ ಚರಣಜಿತ್ ಸಿಂಗ್ ಚನ್ನಿ ಅನುಮಾನಿಸಿದ್ದಾರೆ.
ನವದೆಹಲಿ: ಪಹಲ್ಗಾಂ ಉಗ್ರದಾಳಿಯ ಬಳಿಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ಭಾರತೀಯ ಸೇನೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ, 2019ರಲ್ಲಿ ನಡೆದ ಪುಲ್ವಾಮಾ ಉಗ್ರದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ್ದ ಏರ್ ಸ್ಟ್ರೈಕ್ (ಸರ್ಜಿಕಲ್ ಸ್ಟ್ರೈಕ್) ಅನ್ನು ಪಂಜಾಬ್‌ನ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಸಂಸದ ಚರಣಜಿತ್ ಸಿಂಗ್ ಚನ್ನಿ ಅನುಮಾನಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೆನ್ನಿ, ‘ಸರ್ಜಿಕಲ್ ದಾಳಿಯನ್ನು ಯಾರೂ ನೋಡಿಲ್ಲ. ಅದು ಪಾಕಿಸ್ತಾನದ ಯಾವ ಭಾಗದಲ್ಲಿ ನಡೆಯಿತು ಎಂದು ಯಾರಿಗೂ ಗೊತ್ತಿಲ್ಲ. ದಾಳಿ ಸಂಬಂಧ ನಾನು ಸಾಕ್ಷ್ಯಗಳನ್ನು ಕೇಳುತ್ತಲೇ ಇದ್ದೇನೆ’ ಎಂದರು. ’ಅಂತೆಯೇ, ‘ಪಹಲ್ಗಾಂ ದಾಳಿಯಾಗಿ 10 ದಿನವಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. 56 ಇಂಚಿನ ಎದೆಯಿರುವ(ಪ್ರಧಾನಿ ಮೋದಿ)ವರ ಪ್ರತಿಕ್ರಿಯೆಗೆ ದೇಶ ಕಾಯುತ್ತಿದೆ’ ಎಂದು ಕುಟುಕಿದರು.
ಬಿಜೆಪಿ ತಿರುಗೇಟು:
ಚನ್ನಿ ಹೇಳಿಕೆಗೆ ತಿರುಗೇಟು ನೀಡಿರುವ ದೆಹಲಿ ಸಚಿವ ಮಜಿಂದರ್ ಸಿಂಗ್ ಸಿರ್ಸಾ, ‘ಇದು ಕಾಂಗ್ರೆಸ್ ಮತ್ತು ಗಾಂಧಿ ಪರಿವಾರದ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ. ಇವರೆಲ್ಲ ದೇಶದ ಸೇನೆಯ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಜಿಕಲ್ ದಾಳಿಯಿಂದ ಭಾರತ ನಮಗೆ ಅಪಾರ ಹಾನಿ ಮಾಡಿದೆ ಎಂದು ಪಾಕಿಸ್ತಾನವೇ ಹೇಳುತ್ತಿದೆ. ಇದಕ್ಕೆ ಸಾಕ್ಷಿ ಬೇಕಿದ್ದಲ್ಲಿ ರಾಹುಲ್ ಗಾಂಧಿ ಜತೆ ಪಾಕಿಸ್ತಾನಕ್ಕೇ ಹೋಗಿ’ ಎಂದಿದ್ದಾರೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಾತನಾಡಿ, ‘ಹೊರಗಿಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಂತೆ ಕಂಡರೂ ಅದು ಪಾಕಿಸ್ತಾನ ಕಾರ್ಯಕಾರಿ ಸಮಿತಿ. ಅದು ಪಾಕಿಸ್ತಾನಿ ಸೇನೆ, ಉಗ್ರರಿಗೆ ಆಮ್ಲಜನಕ ಪೂರೈಸಿ ನೈತಿಕ ಸ್ಥೈರ್ಯ ತುಂಬುವ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ’ ಎಂದು ಟೀಕಿಸಿದ್ದಾರೆ.