ಸಾರಾಂಶ
- ಹತ್ಯೆಗೀಡಾದ ಮೆಹ್ದಿ ಸೋದರ ಅಬ್ದೆಲ್ಫತಾ ಆಗ್ರಹ
- ಸದ್ಯಕ್ಕೆ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಮುಂದೂಡಿಕೆನವದೆಹಲಿ: ಕೇರಳ ಮೂಲದ ನರ್ಸ್ ನಿಮಿಷಪ್ರಿಯಾ ಅಪರಾಧ ಮಾಡಿದ್ದಾರೆ. ಹೀಗಾಗಿ ಅವರು ಮಾಡಿರುವ ಅಪರಾಧಕ್ಕೆ ಯಾವುದೇ ವಿನಾಯ್ತಿ ನೀಡಬಾರದು. ನಮಗೆ ಯಾವುದೇ ಮಧ್ಯಸ್ಥಿಕೆ ಬೇಕಿಲ್ಲ ಎಂದು ನಿಮಿಷಪ್ರಿಯಾರಿಂದ ಹತ್ಯೆಗೀಡಾದ ಯೆಮೆನ್‌ನ ತಲಾಲ್ ಅಬ್ದೋ ಮೆಹ್ದಿ ಸೋದರ ಅಬ್ದೆಲ್‌ಫತಾ ಮೆಹ್ದಿ ಹೇಳಿದ್ದಾರೆ.
2017ರಲ್ಲಿ ನಡೆದಿದ್ದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಿಮಿಷಾ ಪ್ರಿಯಾಗೆ ಜು.16ರಂದು ಗಲ್ಲುಶಿಕ್ಷೆ ವಿಧಿಸಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಮತ್ತು ಕೇರಳದ ಕಾಂತಾಪುರಂನ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್, ಇತರರ ಮಧ್ಯಪ್ರವೇಶದಿಂದಾಗಿ ಸದ್ಯಕ್ಕೆ ನಿಮಿಷಾ ಪ್ರಿಯಾಗೆ ವಿಧಿಸಿರುವ ಗಲ್ಲು ಶಿಕ್ಷೆ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ಹತ್ಯೆಗೀಡಾದ ಅಬ್ದೋ ಮೆಹ್ದಿ ಸೋದರನ ಈ ಹೇಳಿಕೆ ನಿಮಿಷಪ್ರಿಯಾಗೆ ಕ್ಷಮಾದಾನ ಕೊಡಿಸುವ ಪ್ರಯತ್ನಕ್ಕೆ ಕೊಂಚ ಹಿನ್ನಡೆಯುಂಟು ಮಾಡಿದಂತಾಗಿದೆ.ಬಿಬಿಸಿಗೆ ಸಂದರ್ಶನ ನೀಡಿರುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಬೆದುಕೊಂಡಿರುವ ಅಬ್ದೆಲ್‌ಫತಾ ಮೆಹ್ದಿ, ನಿಮಿಷಪ್ರಿಯಾ ಪ್ರಕರಣದಲ್ಲಿ ಭಾರತೀಯ ಮಾಧ್ಯಮಗಳು ಪ್ರಕಟಿಸುತ್ತಿರುವ ಸುದ್ದಿ ಕುರಿತೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಗಲ್ಲು ವಿಳಂಬದಿಂದ ನಮಗೆ ಆಘಾತವಾಗಿದೆ. ನಮಗೆ ಯಾವುದೇ ಮಧ್ಯಸ್ಥಿಕೆ ಬೇಕಿಲ್ಲ. ನಿಮಿಷ ಪ್ರಿಯಾಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡಬಾರದು, ಆಕೆಯನ್ನು ಗಲ್ಲಿಗೇರಿಸಬೇಕು. ಆಕೆಯನ್ನು ಸಂತ್ರಸ್ತೆ ಎಂದು ಬಿಂಬಿಸುವುದು ತಪ್ಪು. ನಮಗೆ ನ್ಯಾಯ ಮಾತ್ರ ಬೇಕು.’ ಎಂದು ಆಗ್ರಹಿಸಿದ್ದಾರೆ.
ಸರ್ವ ಪ್ರಯತ್ನ:ಸೌದಿ ಅರೇಬಿಯಾದಲ್ಲಿರುವ ಏಜೆನ್ಸಿಗಳು, ಭಾರತ ಸರ್ಕಾರ, ಕೇರಳದ ಮೌಲ್ವಿ ಸೇರಿ ಹಲವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ನಿಮಿಷಾ ಪ್ರಿಯಾಗೆ ವಿಧಿಸಲಾಗಿರುವ ಗಲ್ಲುಶಿಕ್ಷೆ ತಡೆಯಲು ಯತ್ನಿಸುತ್ತಿದ್ದಾರೆ.
ಕೇರಳದ ಸಿಪಿಎಂ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು ಕಾಂತಾಪುರಂನ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಜತೆಗೆ ಬುಧವಾರ ಮಾತುಕತೆ ನಡೆಸಿದ್ದಾರೆ. ಮುಸ್ಲಿಯಾರ್ ಅವರು ಯೆಮೆನ್‌ನ ಶೂರಾ ಕೌನ್ಸಿಲ್ (ಬುಡಕಟ್ಟು ಕೌನ್ಸಿಲ್) ನಲ್ಲಿರುವ ಗೆಳೆಯನಿಗೆ ನಿಮಿಷಪ್ರಿಯಾ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಿದ್ದಾರೆ.ಬ್ಲಡ್ ಮನಿ ಪಡೆಯಲು ಭಿನ್ನಾಭಿಪ್ರಾಯ:
ಈ ನಡುವೆ, ಕೇರಳದ ಶ್ರೀಮಂತ ಉದ್ಯಮಿ ಎಂ.ಎ.ಯೂಸುಫ್ ಆಲಿ ಅವರು ನಿಮಿಷಪ್ರಿಯಾಗೆ ಕ್ಷಮಾದಾನ ಕೊಡಿಸಲು ಆರ್ಥಿಕವಾಗಿ ನೆರವು ನೀಡುವ ಭರವಸೆ ನೀಡಿದ್ದಾರೆ. ಆದರೆ, ಬ್ಲಡ್ ಮನಿ ಅಂದರೆ ಕ್ಷಮಾದಾನಕ್ಕೆ ಪರ್ಯಾಯವಾಗಿ ಹಣ ಪಡೆಯುವ ವಿಚಾರವಾಗಿ ಮೆಹ್ದಿ ಕುಟುಂಬ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಹಣದ ವಿಚಾರದಲ್ಲಿ ಅವರ ಕುಟುಂಬದ ನಡುವೆಯೇ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿದೆ. ಈ ಕುರಿತು ಅವರ ಮನವೊಲಿಕೆಗೆ ಮಾತುಕತೆ ಮುಂದುವರಿದಿದೆ.