ಸಾರಾಂಶ
ಶಿಮ್ಲಾ: ಅಭೂತಪೂರ್ವ ಕ್ರಮವೊಂದರಲ್ಲಿ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅನರ್ಹಗೊಂಡ ಶಾಸಕರ ಪಿಂಚಣಿ ನಿಲ್ಲಿಸುವ ತಿದ್ದುಪಡಿ ಮಸೂದೆಯನ್ನು ಹಿಮಾಚಲ ಪ್ರದೇಶ ವಿಧಾನಸಭೆ ಬುಧವಾರ ಅಂಗೀಕರಿಸಿದೆ.
ಪಕ್ಷಾಂತರಿಗಳ ಮೇಲಿನ ಮೂಗುದಾರವನ್ನು ಬಿಗಿಗೊಳಿಸಲು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಹಿಮಾಚಲ ಪ್ರದೇಶ ವಿಧಾನಸಭೆ (ಸದಸ್ಯರ ಭತ್ಯೆ ಮತ್ತು ಪಿಂಚಣಿ) ತಿದ್ದುಪಡಿ ಮಸೂದೆ, 2024 ಅನ್ನು ಮಂಡಿಸಿದರು. ‘ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ-ವಿರೋಧಿ ಕಾನೂನು) ಅಡಿಯಲ್ಲಿ ಶಾಸಕ ಅನರ್ಹಗೊಂಡರೆ ಅವರು ಪಿಂಚಣಿಗೆ ಅರ್ಹರಾಗಿರುವುದಿಲ್ಲ.
ಅಲ್ಲದೆ, ಅನರ್ಹಗೊಂಡಿರುವ ಶಾಸಕರಿಂದ ಪಡೆದ ಪಿಂಚಣಿ ಹಣ ವಸೂಲಿಗೂ ಸರ್ಕಾರಕ್ಕೆ ಅಧಿಕಾರವಿದೆ’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.ರಾಜ್ಯದಲ್ಲಿ 5 ವರ್ಷದ ಅವಧಿಗೆ ಶಾಸಕರಾದವರಿಗೆ 36 ಸಾವಿರ ರು. ಪಿಂಚಣಿ ಲಭಿಸುತ್ತದೆ. ಪ್ರತಿ ವರ್ಷ ಪಿಂಚಣಿ ಪ್ರಮಾಣ 1 ಸಾವಿರ ರು.ನಷ್ಟು ಏರುತ್ತದೆ.ಕೆಲವು ತಿಂಗಳ ಹಿಂದೆ 6 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿಕೊಂಡಿದ್ದರು. ಅವರನ್ನು ಸದಸ್ಯತ್ವದಿಂದ ಅನರ್ಹ ಮಾಡಲಾಗಿತ್ತು. ಅದರ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.