ಸಾರಾಂಶ
7200 ಕೋಟಿ ರು.ನಷ್ಟು ಭಾರೀ ಮೊತ್ತದ ವಿದ್ಯುತ್ ಬಿಲ್ ಬಾಕಿಯನ್ನು ನ.7ರೊಳಗೆ ಪಾವತಿ ಮಾಡದೇ ಹೋದಲ್ಲಿ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತ ಮಾಡುವುದಾಗಿ ನೆರೆ ದೇಶಕ್ಕೆ ಅದಾನಿ ಪವರ್ ಕಂಪನಿ ಎಚ್ಚರಿಕೆ ನೀಡಿದೆ.
ನವದೆಹಲಿ: 7200 ಕೋಟಿ ರು.ನಷ್ಟು ಭಾರೀ ಮೊತ್ತದ ವಿದ್ಯುತ್ ಬಿಲ್ ಬಾಕಿಯನ್ನು ನ.7ರೊಳಗೆ ಪಾವತಿ ಮಾಡದೇ ಹೋದಲ್ಲಿ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತ ಮಾಡುವುದಾಗಿ ನೆರೆ ದೇಶಕ್ಕೆ ಅದಾನಿ ಪವರ್ ಕಂಪನಿ ಎಚ್ಚರಿಕೆ ನೀಡಿದೆ. ಹೀಗಾಗಿ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬಾಂಗ್ಲಾ ಮತ್ತಷ್ಟು ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದೆ.
ಈಗಾಗಲೇ ಅ.31ರಿಂದ ಭಾಗಶಃ ವಿದ್ಯುತ್ ಕಡಿತವನ್ನು ಅದಾನಿ ಪವರ್ ಆರಂಭಿಸಿದೆ. ನ.7ರೊಳಗೆ ಬಿಲ್ ಕಟ್ಟದಿದ್ದರೆ ಪೂರ್ತಿ ಕಡಿತ ಮಾಡುವುದಾಗಿ ಅದು ಹೇಳಿದೆ.ಈಗ ಭಾಗಶಃ ಪೂರೈಕೆ ಕಡಿತದ ಕಾರಣ ಬಾಂಗ್ಲಾದೇಶ ಗುರುವಾರ ಮತ್ತು ಶುಕ್ರವಾರದ ನಡುವೆ ರಾತ್ರಿ 1,600 ಮೆಗಾ ವ್ಯಾಟ್ ಗಿಂತ ಹೆಚ್ಚಿನ ವಿದ್ಯುತ್ ಕೊರತೆಯನ್ನು ವರದಿ ಮಾಡಿದೆ. ಹೀಗಾಗಿ ಈಗಾಗಲೇ ಕಡಿತದ ಎಫೆಕ್ಟ್ ದೇಶದಲ್ಲಿ ಆರಂಭವಾಗಿದ್ದು, ಹಲವಾರು ಗಂಟೆ ವಿದ್ಯುತ್ ಖೋತಾ ಆಗುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಬಿಕ್ಕಟ್ಟು ಏನು?:ಬಾಂಗ್ಲಾದೇಶಕ್ಕೆ ಜಾರ್ಖಂಡ್‌ನಲ್ಲಿರುವ ತನ್ನ ತಲಾ 800 ಮೆ.ವ್ಯಾ. ಸಾಮರ್ಥ್ಯದ 2 ಘಟಕಗಳ ಮೂಲಕ ಅದಾನಿ ಪವರ್, ವಿದ್ಯುತ್ ಪೂರೈಸುತ್ತದೆ. ಈಗ ಒಂದು ಘಟಕ ಪೂರ್ತಿ ವಿದ್ಯುತ್ ನಿಲ್ಲಿಸಿದ್ದು, ಇನ್ನೊಂದು ಘಟಕ ಕೇವಲ 500 ಮೆ.ವ್ಯಾ. ಮಾತ್ರ ಪೂರೈಸುತ್ತಿದೆ. ಹೀಗಾಗಿ ಅದಾನಿ 1100 ಮೆ.ವ್ಯಾ. ಪೂರೈಕೆ ನಿಲ್ಲಿಸಿದಂತಾಗಿದೆ.
ಈ ಮೊದಲು ಅ.31ರೊಳಗೆ ಬಾಕಿ ಪಾವತಿ ಮಾಡುವಂತೆ ಮತ್ತು ಹೊಸದಾಗಿ ವಿದ್ಯುತ್ ಪೂರೈಕೆಗೆ 1500 ರು. ಕೋಟಿ ಮೊತ್ತದ ಖಾತರಿ ನೀಡುವಂತೆ ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್‌ಗೆ ಅದಾನಿ ಪವರ್ ಸೂಚಿಸಿತ್ತು. ಆದರೆ ಆ ಗಡುವಿನೊಳಗೆ ಹಣ ಪಾವತಿ ಮಾಡದ ಕಾರಣ, ಈಗಾಗಲೇ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ಅದಾನಿ ಪವರ್ ಭಾಗಶಃ ಕಡಿತ ಮಾಡಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ನ.7ರ ಗಡುವು ನೀಡಿದ್ದು, ಅಷ್ಟರಲ್ಲಿ ಹಣ ಪಾವತಿ ಮಾಡದೇ ಹೋದಲ್ಲಿ ಪೂರ್ತಿ ವಿದ್ಯುತ್ ಪೂರೈಕೆಯನ್ನೇ ಸ್ಥಗಿತ ಮಾಡುವ ಎಚ್ಚರಿಕೆ ನೀಡಿದೆ.ಈ ನಡುವೆ, ಸಮಸ್ಯೆ ಇತ್ಯರ್ಥಕ್ಕೆ ಮಾತುಕತೆಗಳೂ ನಡೆದಿದವೆ ಎಂದು ಮೂಲಗಳು ಹೇಳಿವೆ.