ಸಾರಾಂಶ
ಎಸ್‌ಸಿ, ಎಸ್ಟಿ ಮೀಸಲಿನಲ್ಲಿ ಕೆನೆಪದರ ಜಾರಿ ಕುರಿತು ಇತ್ತೀಚೆಗೆ ಸುಪ್ರೀಂಕೋರ್ಟ್ ಸಲಹೆ ಬೆನ್ನಲ್ಲೇ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಇಂಥ ಪ್ರಸ್ತಾಪಕ್ಕೆ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ನವದೆಹಲಿ: ಎಸ್‌ಸಿ, ಎಸ್ಟಿ ಮೀಸಲಿನಲ್ಲಿ ಕೆನೆಪದರ ಜಾರಿ ಕುರಿತು ಇತ್ತೀಚೆಗೆ ಸುಪ್ರೀಂಕೋರ್ಟ್ ಸಲಹೆ ಬೆನ್ನಲ್ಲೇ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಇಂಥ ಪ್ರಸ್ತಾಪಕ್ಕೆ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಪರೋಕ್ಷವಾಗಿ ಕೆನೆಪದರ ಜಾರಿಯ ಪರ ತಾನು ಇಲ್ಲ ಎಂಬ ಸಂದೇಶ ರವಾನಿಸಿದೆ.
ಇತ್ತೀಚಿನ ಸುಪ್ರೀಂಕೋರ್ಟ್ ಸಲಹೆ ಕುರಿತು ಬಿಜೆಪಿ ಸಂಸದರ ನಿಯೋಗವೊಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು. ಇಂಥ ಯಾವುದೇ ನೀತಿ ಜಾರಿ ಸಮುದಾಯದ ಅಭ್ಯುದಯಕ್ಕೆ ಮಾರಕ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು.ಅದರ ಬೆನ್ನಲ್ಲೇ ಶುಕ್ರವಾರ ಸಂಜೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ.
ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್, ‘ಎಸ್‌ಸಿ, ಎಸ್ಟಿ ಮೀಸಲಿನ ಕುರಿತು ಇತ್ತೀಚೆಗೆ ಸುಪ್ರೀಂಕೋರ್ಟ್ ವ್ಯಕ್ತಪಡಿಸಿದ ಕೆಲ ಅಭಿಪ್ರಾಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಎಸ್‌ಸಿ, ಎಸ್ಟಿ ಮೀಸಲಿನಲ್ಲಿ ಕೆನೆಪದರಕ್ಕೆ ಯಾವುದೇ ಅವಕಾಶ ಇಲ್ಲ. ಹೀಗಾಗಿ ಸಂವಿಧಾನದಲ್ಲಿನ ಅವಕಾಶಗಳನ್ನು ಪಾಲನೆ ಮಾಡಲು ಎನ್‌ಡಿಎ ಸರ್ಕಾರ ಬದ್ಧ ಎಂಬ ನಿಲುವಿಗೆ ಸಚಿವ ಸಂಪುಟ ಸಭೆ ಬಂದಿದೆ’ ಎಂದು ತಿಳಿಸಿದ್ದಾರೆ.
ಸಂಪುಟ ಸಭೆಯಲ್ಲಿ ಸಚಿವ ರಾಮದಾಸ್ ಅಠಾವಳೆ ಈ ವಿಷಯ ಪ್ರಸ್ತಾಪಿಸಿದರೇ ಎಂಬ ಸುದ್ದಿಗಾರರ ಪ್ರಶ್ನೆಗೆ ನೇರ ಉತ್ತರ ನೀಡದ ಸಚಿವ ವೈಷ್ಣವ್, ಇದು ಇಡೀ ಸಂಪುಟದ ಅಭಿಪ್ರಾಯವಾಗಿದೆ ಎಂದಷ್ಟೇ ಹೇಳಿದರು.