ಸಾರಾಂಶ
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದ ವಕೀಲ ರಾಜೇಶ್ ಕಿಶೋರ್ ಮೊದಲ ಬಾರಿ ಮಾತನಾಡಿದ್ದು, ತಮ್ಮ ಕ್ರಮಗಳಿಗೆ ವಿಷಾದ ಹಾಗೂ ಪಶ್ಚಾತ್ತಾಪವಿಲ್ಲ ಎಂದಿದ್ದಾರೆ. ಅಲ್ಲದೆ, ತಾವೂ ದಲಿತ ಎಂದು ಹೇಳಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಖಜುರಾಹೋದಲ್ಲಿ ಭಗ್ನಗೊಂಡ ವಿಷ್ಣುಮೂರ್ತಿಗಳ ಮರುಸ್ಥಾಪನೆಗೆ ಕೋರಿ ಸೆ.16ರಂದು ಪಿಐಎಲ್ ಸಲ್ಲಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಸಿದವನ್ನನೇ ಸಿಜೆಐ ಅಪಹಾಸ್ಯ ಮಾಡಿ, ‘ಮೂರ್ತಿ ಮರುಸ್ಥಾಪನೆ ಆಗಬೇಕೆಂದರೆ ವಿಷ್ಣುವನ್ನೇ ಹೋಗಿ ಕೇಳಿ. ಇಲ್ಲೇಕೆ ಬಂದಿರಿ?’ ಎಂದರು. ಅಂದಿನಿಂದ ನನಗೆ ನಿದ್ದೆಯೇ ಬರಲಿಲ್ಲ. ಆಗಲು ನಾನು ಏನೋ ಮಾಡಬೇಕು ಎಂದು ನಿರ್ಧರಿಸಿದ್ದೆ’ ಎಂದರು.
‘ನಮ್ಮ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಷಯ ಬಂದಾಗ, ಸುಪ್ರೀಂ ಕೋರ್ಟ್ ಅಂತಹ ಆದೇಶಗಳನ್ನು ನೀಡುತ್ತದೆ. ನೀವೇನೂ ಅರ್ಜಿದಾರರಿಗೆ ಪರಿಹಾರ ನೀಡಬೇಡಿ, ಆದರೆ ಹಾಗಂತ ಅವರನ್ನು ಅಪಹಾಸ್ಯ ಮಾಡಬೇಡಿ... ನನಗೆ ನೋವಾಯಿತ್ತು. ನಾನೇನೂ ಕುಡಿದಿರಲಿಲ್ಲ. ಅವರ (ನ್ಯಾ। ಗವಾಯಿ) ಕ್ರಮಕ್ಕೆ ಇದು ನನ್ನ ಪ್ರತಿಕ್ರಿಯೆಯಾಗಿತ್ತು... ನನಗೇನೂ ಭಯವಿಲ್ಲ. ವಿಷಾದವೂ ಇಲ್ಲ’ ಎಂದರು.
ನಾನೂ ದಲಿತ:
‘ನನ್ನ ಹೆಸರು ಡಾ. ರಾಕೇಶ್ ಕಿಶೋರ್. ಯಾರಾದರೂ ನನ್ನ ಜಾತಿಯನ್ನು ಹೇಳಬಹುದೇ? ಬಹುಶಃ ನಾನು ಕೂಡ ದಲಿತನೇ. ಅವರು (ಸಿಜೆಐ ಗವಾಯಿ) ದಲಿತರು ಎಂಬ ಅಂಶವನ್ನು ನೀವು (ಮಾಧ್ಯಮದವರು) ಬಳಸಿಕೊಳ್ಳುತ್ತಿರುವುದು ಏಕಪಕ್ಷೀಯ. ಅವರು ದಲಿತರಲ್ಲ. ಅವರು ಮೊದಲು ಸನಾತನ ಹಿಂದು. ನಂತರ ಅವರು ತಮ್ಮ ನಂಬಿಕೆಯನ್ನು ತ್ಯಜಿಸಿ ಬೌದ್ಧಧರ್ಮವನ್ನು ಅನುಸರಿಸಿದರು. ಬೌದ್ಧಧರ್ಮವನ್ನು ಅನುಸರಿಸಿದ ನಂತರ ಅವರು ಹಿಂದು ಧರ್ಮದಿಂದ ಹೊರಬಂದಿದ್ದಾರೆಂದು ಭಾವಿಸಿದರೆ, ಅವರು ಇನ್ನೂ ದಲಿತರಾಗಿರುವುದು ಹೇಗೆ? ಅದು ಅವರ ಮನಃಸ್ಥಿತಿ’ ಎಂದೂ ಪ್ರಶ್ನಿಸಿದರು.
ಸಿಜೆಐ ನಡೆ ಖಂಡಿಸಿ ಅವರ ಮೇಲೆ ಶೂ ಎಸೆದಿದ್ದರೂ, ನ್ಯಾ। ಗವಾಯಿ ಸೂಚನೆ ಮೇರೆಗೆ ಕಿಶೋರ್‌ರನ್ನು ಜೈಲಿಗೆ ಹಾಕದೇ ಬಿಟ್ಟು ಕಳಿಸಲಾಗಿತ್ತು.
ಸನಾತನ ಧರ್ಮದ ಕುರಿತ ಅರ್ಜಿಗಳಿಗೆ ನ್ಯಾಯಾಲಯ ಪರಿಹಾರ ನೀಡಲು ಸಾಧ್ಯವಾಗದಿದ್ದರೂ ಧರ್ಮದ ಅಪಹಾಸ್ಯ ಸರಿಯಲ್ಲ
ವಿಷ್ಣುಮೂರ್ತಿ ಮರುಸ್ಥಾಪನೆ ಕೋರಿದ್ದ ಅರ್ಜಿದಾರನ ಬಗ್ಗೆ ನ್ಯಾ.ಗವಾಯಿ ಹೇಳಿಕೆ ನೀಡಿದ ದಿನದಿಂದಲೂ ನನಗೆ ನಿದ್ದೆ ಬಂದಿರಲಿಲ್ಲ
ಅವರಿಗೆ ಏನಾದರೂ ಮಾಡಬೇಕು ಎಂದು ನಾನು ನಿರ್ಧರಿಸಿದ್ದೆ. ದಾಳಿ, ಅವರ ಕ್ರಮಕ್ಕೆ ನನ್ನ ಪ್ರತಿಕ್ರಿಯೆ ಆಗಿತ್ತು. ಆ ಬಗ್ಗೆ ನನಗೆ ವಿಷಾದವಿಲ್ಲ
ಸಿಜೆಐ ದಲಿತ ಎಂದು ಏಕಪಕ್ಷೀಯವಾಗಿ ಬಳಕೆ ಸರಿಯಲ್ಲ. ನನ್ನ ಹೆಸರು ರಾಜೇಶ್ ಕಿಶೋರ್. ಬಹುಷಃ ನಾನು ಕೂಡಾ ದಲಿತನೇ.==