ಸಾರಾಂಶ
ಕುಕನೂರು:
ಸಂಗೀತ ಕ್ಷೇತ್ರದ ದಿಗ್ಗಜ ಪುಟ್ಟರಾಜ ಗವಾಯಿಗಳು ಅಂಧ, ಅನಾಥ ಮಕ್ಕಳಿಗೆ ಸಂಗೀತ ಕಲೆ ನೀಡಿ ಅವರ ಬದುಕಿಗೆ ದಾರಿದೀಪವಾದರು. ಪ್ರತಿಯೊಬ್ಬ ಕಲಾವಿದನ ಹೃದಯ ಮಂದಿರದಲ್ಲಿ ಶಾಶ್ವತವಾಗಿ ಅವರು ನೆಲೆಸಿದ್ದಾರೆ ಎಂದು ವಕೀಲ ಬಸವರಾಜ ಜಂಗ್ಲಿ ಹೇಳಿದರು.ಪಟ್ಟಣದ 8ನೇ ವಾರ್ಡಿನ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀಪಂಚಾಕ್ಷರಿ ಸಂಗೀತ, ಸಾಹಿತ್ಯ, ಕ್ರೀಡೆ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶ್ರೀಪಂಚಾಕ್ಷರಿ ಸಂಗೀತ ಪಾಠಶಾಲೆ, ತಾಲೂಕು ಘಟಕದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಲಿಂ. ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ 15ನೇ ಪುಣ್ಯಸ್ಮರಣೆ ನಿಮಿತ್ತ ಜರುಗಿದ ಸಂಗೀತ ಕಾರ್ಯಕ್ರಮ ಹಾಗೂ ಚುಟುಕು ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ದೇಶ ಹಾಗೂ ವಿದೇಶದಲ್ಲಿ ಪುಟ್ಟರಾಜ ಗವಾಯಿಗಳವರ ಶಿಷ್ಯರು ಹಾಗೂ ಭಕ್ತರು ಇದ್ದಾರೆ. ಅವರು ಕಲಿಸಿದ ಸಂಗೀತದಿಂದ ನಾಡಿನಾದ್ಯಂತ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡುತ್ತಾ ಗುರು-ಶಿಷ್ಯರ ಪರಂಪರೆ ಮುಂದುವರಿಸಿಕೊಂಡು ನಡೆದಿದ್ದಾರೆ. ಕನ್ನಡ ನಾಡಿಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಶರಣಪ್ಪ ಕೊಪ್ಪದ ಮಾತನಾಡಿ, ಪುಟ್ಟರಾಜ ಗವಾಯಿಗಳವರು ನಡೆದು ಬಂದ ದಾರಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಹಾಗೂ ತಬಲಾ ಕಲಾವಿದ ಖಾದಿರಸಾಬ್ ಸಿದ್ನೆಕೊಪ್ಪ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಂದ ಕವಿಗೋಷ್ಠಿ ನಡೆಯಿತು.ಈ ವೇಳೆ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಪತ್ರಕರ್ತ ಕನಕರಾಯ ಭಜಂತ್ರಿ, ಲಕ್ಷ್ಮಣ ಕಾಳಿ, ರವಿಕುಮಾರ ಹಿರೇಮನಿ, ಶಾವಮ್ಮ ಭಜಂತ್ರಿ, ಕಲಾವಿದ ಬಸವರಾಜ ಭಜಂತ್ರಿ, ಚಂದ್ರಶೇಖರ ಭಜಂತ್ರಿ, ಮಲ್ಲಪ್ಪ ವಡ್ಡಟ್ಟಿ, ಸುಮಂತ್ ಭಜಂತ್ರಿ, ಶಂಕ್ರಪ್ಪ ಬಡಿಗ್ಯಾರ್, ಪದ್ಮಾವತಿ ಭಜಂತ್ರಿ, ಶೋಭಾ ವಡ್ಡಟ್ಟಿ, ಜಾನಕಿ ಕಿತ್ತೂರ, ಭೂಮಿಕಾ ಭಜಂತ್ರಿ ಇದ್ದರು.