ಸಾರಾಂಶ
ತನ್ನ ಮಧ್ಯಸ್ಥಿಕೆಯಲ್ಲಿ ಹಮಾಸ್-ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿದ್ದು, ಸೋಮವಾರದಿಂದ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ತಾನು ಶಾಂತಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವುದಿಲ್ಲವೆಂದು ಹಮಾಸ್ ಕ್ಯಾತೆ
ಗಾಜಾ: ತನ್ನ ಮಧ್ಯಸ್ಥಿಕೆಯಲ್ಲಿ ಹಮಾಸ್-ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿದ್ದು, ಸೋಮವಾರದಿಂದ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ತಾನು ಶಾಂತಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವುದಿಲ್ಲವೆಂದು ಹಮಾಸ್ ಕ್ಯಾತೆ ತೆಗೆದಿದೆ.
ಶನಿವಾರ ಈ ಬಗ್ಗೆ ಮಾತನಾಡಿದ ಹಮಾಸ್ ರಾಜಕೀಯ ಬ್ಯೂರೋ ಸದಸ್ಯ ಹೊಸಮ್ ಬದ್ರಾನ್, ‘ಒಪ್ಪಂದಕ್ಕೆ ಅಧಿಕೃತ ಸಹಿ ಹಾಕುವ ವಿಚಾರದಲ್ಲಿ ನಾವು ಭಾಗವಹಿಸುವುದಿಲ್ಲ. ಅಧ್ಯಕ್ಷ ಟ್ರಂಪ್ ಅವರ ಶಾಂತಿ ಯೋಜನೆ ಅಸಂಬದ್ಧ. ಪ್ಯಾಲೆಸ್ತೀನಿಯರನ್ನು ಅವರ ನೆಲದಿಂದ ಹೊರಹಾಕುವುದು, ಅವರು ಹಮಾಸ್ ಸದಸ್ಯರು ಆಗಿರಲಿ ಅಲ್ಲದಿರಲಿ, ಅದು ಅಸಂಬದ್ಧ ಮತ್ತು ಮೂರ್ಖತನ. ಮತ್ತೆ ಯುದ್ಧ ಆರಂಭವಾದರೆ ಆಕ್ರಮಣಕಾರರನ್ನು ಹಿಮ್ಮೆಟ್ಟಿಸುತ್ತೇವೆ’ ಎಂದಿದ್ದಾರೆ.
ಇದೇ ವೇಳೆ, ಶಸ್ತ್ರಾಸ್ತ್ರ ತ್ಯಾಗದ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರಸ್ತಾವಿತ ಶಸ್ತ್ರಾಸ್ತ್ರಗಳ ಹಸ್ತಾಂತರವು ಪ್ರಶ್ನೆಯಿಂದ ಹೊರಗಿದೆ ಮತ್ತು ಮಾತುಕತೆಗೆ ಒಳಪಡುವುದಿಲ್ಲ’ ಎಂದು ಹೇಳಿದ್ದಾರೆ.
ಈಜಿಪ್ಟ್‌ನಲ್ಲಿಂದು ಗಾಜಾ ಶಾಂತಿ ಸಮ್ಮೇಳನ: ಮೋದಿಗೆ ಆಹ್ವಾನ
ನವದೆಹಲಿ: ಗಾಜಾ ಸಂಘರ್ಷಕ್ಕೆ ಅಂತ್ಯ ಹಾಡುವ ಸಂಬಂಧ ಈಜಿಪ್ಟ್‌ನ ಶರಮ್‌ಎಲ್- ಶೇಖ್‌ನಲ್ಲಿ ಸೋಮವಾರ ಆಯೋಜಿಸಿರುವ ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಹ ಅಲ್ ಸಿಸಿ ಅವರು ಪ್ರಧಾನಿ ಮೋದಿ ಅವರಿಗೂ ಆಹ್ವಾನ ನೀಡಿದ್ದಾರೆ. ಮೂಲಗಳ ಪ್ರಕಾರ ಕೊನೇ ಕ್ಷಣದಲ್ಲಿ ಉಭಯ ನಾಯಕರು ಶನಿವಾರ ಮೋದಿ ಅವರಿಗೆ ಈ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಮತ್ತು ಭಾರತದ ಪರವಾಗಿ ಭಾರತದ ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ಕೀರ್ತಿವರ್ಧನ್ ಸಿಂಗ್ ಭಾಗಿಯಾಗಲಿದ್ದಾರೆ. 20ಕ್ಕೂ ಹೆಚ್ಚು ದೇಶಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.