ಸಾರಾಂಶ
ಬಜೆಟ್‌ನಲ್ಲಿ ರಾಜ್ಯವಾರು ಅನುದಾನ ಘೋಷಣೆಯಾಗಿಲ್ಲ ಎನ್ನುವ ವಿಪಕ್ಷಗಳ ಆರೋಪಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದು, ‘ವಿಪಕ್ಷಗಳು ಸುಳ್ಳು ಆರೋಪಗಳ ಮೂಲಕ ಸದನದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿವೆ.
ಪಿಟಿಐ ನವದೆಹಲಿ
ಬಜೆಟ್‌ನಲ್ಲಿ ರಾಜ್ಯವಾರು ಅನುದಾನ ಘೋಷಣೆಯಾಗಿಲ್ಲ ಎನ್ನುವ ವಿಪಕ್ಷಗಳ ಆರೋಪಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದು, ‘ವಿಪಕ್ಷಗಳು ಸುಳ್ಳು ಆರೋಪಗಳ ಮೂಲಕ ಸದನದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿವೆ. ಬಜೆಟ್‌ನಲ್ಲಿ ರಾಜ್ಯದ ಹೆಸರು ಹೇಳಿಲ್ಲವೆಂದರೆ ಅನುದಾನ ಹಂಚಿಕೆ ಆಗಿಲ್ಲ ಎನ್ನುವ ಅರ್ಥವಲ್ಲ. ಯಾವುದೇ ರಾಜ್ಯಕ್ಕೂ ಬಜೆಟ್ ಹಣ ನಿರಾಕರಿಸಿಲ್ಲ’ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಯುಪಿಎ ಸರ್ಕಾರದ ಅವಧಿಯಲ್ಲಿನ ಬಜೆಟ್ ಪ್ರಸ್ತಾಪಿಸಿ ವಿಪಕ್ಷಗಳಿಗೆ ತಿರುಗೇಟು ನೀಡಿದರು. ‘ನಾನು 2004-2005, 2005-2006, 2006-2007, 2007-2008ರ ಅವಧಿಯ ಬಜೆಟ್‌ಗಳನ್ನು ತೆಗೆದುಕೊಂಡಿದ್ದೇನೆ. 2004-2005ರ ಬಜೆಟ್‌ನಲ್ಲಿ 17 ರಾಜ್ಯಗಳ ಹೆಸರುಗಳನ್ನು ತೆಗೆದುಕೊಂಡಿಲ್ಲ. ಆ ಸಂದರ್ಭದಲ್ಲಿ ಯುಪಿಎ ಸರ್ಕಾರವಿತ್ತು. ಹಾಗಿದ್ದರೆ ಆ 17 ರಾಜ್ಯಗಳಿಗೆ ಅನುದಾನ ಹೋಗಿರಲಿಲ್ಲವೇ? ಅವರು ಅನುದಾನ ನಿಲ್ಲಿಸಿದ್ದರೇ? ’ ಎಂದು ಪ್ರಶ್ನಿಸಿದರು.‘ಬಜೆಟ್‌ನಲ್ಲಿ ರಾಜ್ಯಗಳ ಹೆಸರಿದೆ ಎಂದರಷ್ಟೇ ಹಣ ನೀಡಲಾಗಿದೆ ಎಂದರ್ಥ ಎಂಬ ಅಪಪ್ರಚಾರ ಸಲ್ಲದು. ನಿಮ್ಮ ಆರೋಪ ನಮಗೆ ನೋವು ತರುತ್ತಿದೆ. ಹೀಗಾಗೇ ರಾಜ್ಯಗಳಿಗೆ ತೆರಳಿ ಆಯಾ ರಾಜ್ಯದ ಪಾಲೇನು ಎಂದು ಕೇಂದ್ರ ಸಚಿವರು ವಿವರಿಸುತ್ತಾರೆ’ ಎಂದರು.
ಅಲ್ಲದೆ ವಿವಿಧ ವರ್ಗಗಳಿಗೆ ಅನುದಾನ ನೀಡಿಲ್ಲ ಎಂಬ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪ ನಿರಾಕರಿಸಿದ ಅವರು, ‘ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗೆ 2013-2014ರಲ್ಲಿ ಕೇವಲ ₹ 21,934 ಕೋಟಿ ಮೀಸಲಿಟ್ಟಿದ್ದು, 2024-2025ರಲ್ಲಿ ₹ 1.23 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು 5 ಪಟ್ಟು ಅಧಿ. ಪಿಎಂ ಕಿಸಾನ್ ಪ್ರಾರಂಭವಾದಾಗಿನಿಂದ 11 ಕೋಟಿಗೂ ಹೆಚ್ಚು ರೈತರಿಗೆ ₹ 3.2 ಲಕ್ಷ ಕೋಟಿಗಿಂತ ಹೆಚ್ಚು ವಿತರಿಸಲಾಗಿದೆ’ ಎಂದು ವಿವರಿಸಿದರು.ಹಲ್ವಾ ಭಾವನಾತ್ಮಕ ವಿಷಯ:
ಈ ನಡುವೆ ಬಜೆಟ್ ಹಲ್ವಾ ಪ್ರಸ್ತಾಪಿಸಿ ಬಜೆಟ್ಟನ್ನು ಟೀಕಿಸಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಅವರು, ‘ಅಧಿಕಾರಿಗಳಿಗೆ ಬಜೆಟ್ ಭಾವನಾತ್ಮಕ ವಿಚಾರ’ ಎಂದರು.