ಉಷ್ಣಮಾರುತ: ದಿಲ್ಲಿಯಲ್ಲಿ 20 ಜನ ಬಲಿ, ಉತ್ತರ ಭಾರತ ತತ್ತರ

| Published : Jun 20 2024, 01:05 AM IST / Updated: Jun 20 2024, 04:20 AM IST

ಉಷ್ಣಮಾರುತ: ದಿಲ್ಲಿಯಲ್ಲಿ 20 ಜನ ಬಲಿ, ಉತ್ತರ ಭಾರತ ತತ್ತರ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯುತ್‌ ಪೂರೈಸಲಾಗದೆ ಹಲವೆಡೆ ಪರದಾಟ ಆರಂಭವಾಗಿದ್ದು, ಕೆಲವೆಡೆ ನೀರಿಗೂ ಸಮಸ್ಯೆ ಎದುರಾಗಿದೆ. ಎ.ಸಿ. ಇಲ್ಲದೆಡೆ ಬದುಕು ನಡೆಸುವುದೇ ಹರಸಾಹಸ ಎನ್ನುವಂತಾಗಿದೆ.

ನವದೆಹಲಿ: ಉಷ್ಣ ಮಾರುತದ ಹೊಡೆತದಿಂದ ಉತ್ತರ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 20 ಮಂದಿ ಸಾವನ್ನಪ್ಪಿದ್ದಾರೆ. ವಿದ್ಯುತ್‌ ಹಾಗೂ ನೀರಿಗೆ ಕೆಲವೆಡೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಎ.ಸಿ. ಇಲ್ಲದ ಮನೆ ಹಾಗೂ ಆಸ್ಪತ್ರೆಗಳಲ್ಲಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಉತ್ತರ ಭಾರತದಾದ್ಯಂತ ಬುಧವಾರವೂ ಸುಮಾರು 45 ಡಿಗ್ರಿ ತಾಪಮಾನ ದಾಖಲಾಗಿದೆ. ತಾಪಮಾನ ಏರಿಕೆಯಿಂದ ಹಾಗೂ ಉಷ್ಣಮಾರುತದಿಂದ ಎಸಿ, ಫ್ಯಾನ್‌ನಂಥ ಹವಾನಿಯಂತ್ರಿತ ಸಾಧನಗಳ ಬಳಕೆ ಹಾಗೂ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಭಾರಿ ಎನ್ನಬಹುದಾದ 89.4 ಗಿಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆ ಸೃಷ್ಟಿಯಾಗಿ ಉತ್ತರ ಭಾರತದ ಅನೇಕ ಕಡೆ ವಿದ್ಯುತ್‌ ಲೈನ್‌ ಹಲವೆಡೆ ವಿದ್ಯುತ್‌ ಲೈನ್‌ ಟ್ರಿಪ್ಪಿಂಗ್‌ ಆಗಿವೆ. ದಿಲ್ಲಿಯಲ್ಲಿ ಬುಧವಾರ 8656 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ ಬಂದಿದ್ದು ಸಾರ್ವಕಾಲಿಕ ಗರಿಷ್ಠವಾಗಿದೆ.

ಇದೇ ವೇಳೆ ಬಿಸಿಲ ಬೇಗೆ ತಾಳದೇ ದಿಲ್ಲಿಯಲ್ಲಿ 24 ತಾಸಿನಲ್ಲಿ 20 ಜನ ಅಸುನೀಗಿದ್ದಾರೆ. ಇದರ ಬೆನ್ನಲ್ಲೇ ಉಷ್ಣಮಾರುತದಿಂದ ಬಳಲಿದ ರೋಗಿಗಳಿಗೆ ಆದ್ಯತೆ ನೀಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.

ಬೇಸಿಗೆ ಕಾರಣ ದಿಲ್ಲಿಯಲ್ಲಿ ನೀರಿನ ಹಾಹಾಕಾರ ಉಂಟಾಗಿದ್ದು, ನೀರು ಪೂರೈಕೆ ಸಂಬಂಧ ಕೇಂದ್ರದ ಬಿಜೆಪಿ ಹಾಗೂರಾಜ್ಯದ ಆಪ್‌ ಸರ್ಕಾರಗಳು ಸಂಘರ್ಷದಲ್ಲಿ ತೊಡಗಿವೆ. ದಿಲ್ಲಿ ನೀರಿನ ಸಮಸ್ಯೆ ಬಗೆಹರಿಯದಿದ್ದರೆ ಜೂ.21ರಿಂದ ಆಮರಣ ಉಪವಾಸ ಮಾಡುತ್ತೇನೆ ಎಂದು ದಿಲ್ಲಿ ಸಚಿವೆ ಆತಿಶಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಇದರ ನಡುವೆ ಬಿರುಬೇಸಿಗೆ ಕಾರಣ ಅನೇಕ ಕೆಲಸದ ಸ್ಥಳಗಳಲ್ಲಿ ನೌಕರರಿಗೆ ನಿರ್ಜಲೀಕರಣ ಸಮಸ್ಯೆ, ಮೂರ್ಛೆ ಹೋಗುವ ಘಟನೆಗಳು ಸಂಭವಿಸಿವೆ. ಇದರಿಂದ ಕಾರ್ಖಾನೆಗಳು, ಉದ್ದಿಮೆಗಳ ಕೆಲಸದ ಮೇಲೆ ದುಷ್ಪರಿಣಾಮ ಬೀರಿದೆ.

-----

ಏನೇನು ಸಮಸ್ಯೆ?- ಉತ್ತರ ಭಾರತದಾದ್ಯಂತ ಬುಧವಾರ 45 ಡಿಗ್ರಿ ತಾಪಮಾನ- ಎ.ಸಿ., ಫ್ಯಾನ್‌ನಂತಹ ಹವಾನಿಯಂತ್ರಣ ಸಾಧನಕ್ಕೆ ತೀವ್ರ ಬೇಡಿಕೆ- ಎ.ಸಿ. ಪೂರೈಸಲಾಗದೆ ವಿದೇಶಗಳಿಂದ ಬಿಡಿಭಾಗಗಳ ಆಮದು- ವಿದ್ಯುತ್‌ ಬೇಡಿಕೆ ತೀವ್ರ ಹೆಚ್ಚಳವಾಗಿ ವಿದ್ಯುತ್‌ ಮಾರ್ಗ ಟ್ರಿಪ್ಪಿಂಗ್‌- ನೀರಿನ ಬೇಡಿಕೆಯೂ ಹೆಚ್ಚಳ: ನೀರಿನ ಪೂರೈಕೆ ವ್ಯತ್ಯಯ, ಸಂಕಷ್ಟ- ಆಸ್ಪತ್ರೆಗಳಿಗೆ ಹೀಟ್‌ ಸ್ಟ್ರೋಕ್‌ನಿಂದ ಬರುವ ರೋಗಿಗಳ ಸಂಖ್ಯೆ ಏರಿಕೆ- ಕೆಲಸದ ಸ್ಥಳದಲ್ಲಿ ನಿರ್ಜಲೀಕರಣ, ಮೂರ್ಛೆ ಹೋಗುವ ಸಮಸ್ಯೆ ಹೆಚ್ಚಳ