ಸಾರಾಂಶ
- ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ
- ಟೀವಿಯಲ್ಲಿ ವಿಜ್ಞಾನ ಸಂಬಂಧಿ ಕಾರ್ಯಕ್ರಮಗಳಿಂದ ಪ್ರಸಿದ್ಧಿಪುಣೆ: ಖ್ಯಾತ ಖಗೋಳಶಾಸ್ತ್ರಜ್ಞ, ವಿಜ್ಞಾನ ಬರಹಗಾರ, ದೂರದರ್ಶನ ಕಾರ್ಯಕ್ರಮಗಳಲ್ಲಿ ಖಗೋಳ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧರಾಗಿದ್ದ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಜಯಂತ್ ನಾರ್ಲಿಕರ್ ( 87) ಪುಣೆಯ ತಮ್ಮ ನಿವಾಸದಲ್ಲಿ ಮಂಗಳವಾರ ಮುಂಜಾನೆ ಮಲಗಿದ್ದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.ಪುಣೆಯಲ್ಲಿ ನೆಲೆಸಿದ್ದ ಅವರು ಇತ್ತೀಚೆಗಷ್ಟೇ ಸೊಂಟದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಮಂಗಳವಾರ ಇದ್ದಕ್ಕಿದ್ದಂತೆ ನಿಧನರಾಗಿದ್ದಾರೆ. ಅವರು ಮೂವರು ಪುತ್ರಿಯರನ್ನು ಅಗಲಿದ್ದಾರೆ. 1938, ಜು.19ರಂದು ಜನಿಸಿದ ನಾರ್ಲಿಕರ್ ಬನಾರಸ್ ಹಿಂದೂ ವಿವಿ, ಕೆಂಬ್ರಿಡ್ಜ್ ವಿವಿಯಲ್ಲಿ ಪದವಿ ಪೂರೈಸಿದ್ದರು. ಬಳಿಕ 1972ರಲ್ಲಿ ಟಾಟಾ ಸಂಸ್ಥೆಗೆ ಕೆಲಸಕ್ಕೆ ಸೇರಿದ ಅವರು 1989ರ ತನಕ ಅಲ್ಲಿಯೇ ಉದ್ಯೋಗದಲ್ಲಿದ್ದರು. ಆ ಬಳಿಕ ಅವರು ಐಯುಸಿಎಎ ಸ್ಥಾಪಕ ನಿರ್ದೇಶಕರಾಗಿದ್ದರು. ತಮ್ಮ ನಿವೃತ್ತಿಯ ತನಕ ಅಂದರೆ 2003ರ ತನಕ ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು.ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಯ ಜೊತೆಗೆ ಪುಸ್ತಕಗಳು, ಲೇಖನಗಳು ಬರೆದಿದ್ದಾರೆ. ರೆಡಿಯೋ/ಟೀವಿ ಕಾರ್ಯಕ್ರಮಗಳಲ್ಲಿ, ದೂರದರ್ಶನಗಳಲ್ಲಿ ವಿಜ್ಞಾನ ಸಂವಹನಕಾರರಾಗಿಯೂ ಪ್ರಸಿದ್ಧರಾಗಿದ್ದರು, ವೈಜ್ಞಾನಿಕ ಕಥೆಗಾರರಾಗಿಯೂ ಜನಪ್ರಿಯತೆ ಪಡೆದಿದ್ದಾರೆ.
26ರ ಹರೆಯದಲ್ಲೇ ಪದ್ಮಭೂಷಣ:ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದು 1996ರಲ್ಲಿ ಯುನೆಸ್ಕೋ ವತಿಯಿಂದ ಕಳಿಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಮ್ಮ 26ನೇ ಸಣ್ಣ ಪ್ರಾಯದಲ್ಲಿ 1965ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು, 2004 ಪದ್ಮವಿಭೂಷಣ, 2011ರಲ್ಲಿ ಮಹಾರಾಷ್ಟ್ರ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮಹಾರಾಷ್ಟ್ರ ಭೂಷಣ, 2014ರಲ್ಲಿ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.