ಉಕ್ರೇನ್‌- ರಷ್ಯಾ ಸಂಧಾನಕ್ಕೆ ದೋವಲ್‌ ಮಧ್ಯಸ್ಥಿಕೆ?

| Published : Sep 09 2024, 01:32 AM IST

ಸಾರಾಂಶ

‘ರಷ್ಯಾ- ಉಕ್ರೇನ್‌ ಸಂಘರ್ಷಕ್ಕೆ ಕೊನೆಹಾಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬಹುದು’ ಎಂಬ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿಕೆ ಬೆನ್ನಲ್ಲೇ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ರಷ್ಯಾ ಭೇಟಿ ಆಯೋಜನೆಗೊಂಡಿದೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ನವದೆಹಲಿ: ‘ರಷ್ಯಾ- ಉಕ್ರೇನ್‌ ಸಂಘರ್ಷಕ್ಕೆ ಕೊನೆಹಾಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬಹುದು’ ಎಂಬ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿಕೆ ಬೆನ್ನಲ್ಲೇ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ರಷ್ಯಾ ಭೇಟಿ ಆಯೋಜನೆಗೊಂಡಿದೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

‘ಮಾಸ್ಕೋದಲ್ಲಿ ನಡೆಯಲಿರುವ ಬ್ರಿಕ್ಸ್ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಭಾಗಿಯಾಗಲು ದೋವಲ್‌ ಇದೇ ವಾರ ರಷ್ಯಾಕ್ಕೆ ತೆರಳುತ್ತಿದ್ದಾರೆ. ಆದರೂ ಈ ಭೇಟಿ ವೇಳೆ ಅವರು ರಷ್ಯಾ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆ ಉಕ್ರೇನ್‌ ಬಿಕ್ಕಟ್ಟು ಇತ್ಯರ್ಥ ಸಂಬಂಧ ಮಾತುಕತೆ ನಡೆಸಲಿದ್ದಾರೆ. ರಷ್ಯಾ- ಉಕ್ರೇನ್‌ ಸಂಧಾನಕ್ಕೆ ವೇದಿಕೆ ಸಿದ್ಧಪಡಿಸುವ ಯೋಜನೆ ಭಾಗವಾಗಿ ಈ ಸಭೆ ನಡೆಯಲಿದೆ’ ಎಂದು ಮೂಲಗಳು ತಿಳಿಸಿವೆ.

ಎರಡೂವರೆ ತಿಂಗಳ ಹಿಂದಷ್ಟೇ ರಷ್ಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಆಗಲೂ ರಷ್ಯಾ- ಉಕ್ರೇನ್‌ ಸಂಘರ್ಷ ಅಂತ್ಯದ ಬಗ್ಗೆ ಮಾತನಾಡಿದ್ದರು. ಅದರ ಬೆನ್ನಲ್ಲೇ ಕಳೆದ ವಾರ ಉಕ್ರೇನ್‌ಗೆ ಭೇಟಿ ನೀಡಿದಾಗಲೂ ಶೀಘ್ರ ಯುದ್ಧ ಕೊನೆಗಾಣಿಸಲು ಕರೆ ನೀಡುವ ಜೊತೆಗೆ, ಇದಕ್ಕೆ ಅಗತ್ಯವಾದ ನೆರವು ನೀಡಲು ಸಿದ್ಧ ಎಂದು ಹೇಳಿದ್ದರು.

ಅದರ ಬೆನ್ನಲ್ಲೇ ಪುಟಿನ್‌ ಕೂಡಾ ಕಳೆದ ವಾರ ‘ಭಾರತದಲ್ಲಿನ ನಮ್ಮ ವಿಶ್ವಾಸಾರ್ಹ, ನಂಬಿಕಸ್ಥ ನಾಯಕತ್ವ ಬಿಕ್ಕಟ್ಟು ಇತ್ಯರ್ಥದ ಸಾಮರ್ಥ್ಯ ಹೊಂದಿದೆ’ ಎಂದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ದೋವಲ್‌ ರಷ್ಯಾ ಭೇಟಿ ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮತ್ತು ನಿರೀಕ್ಷೆಗೆ ಕಾರಣವಾಗಿದೆ.

ಭಾರತದ ಮಧ್ಯಸ್ಥಿಕೆಗೆ ಮೆಲೋನಿ ಬ್ಯಾಟಿಂಗ್‌:

ಈ ನಡುವೆ, ನರೇಂದ್ರ ಮೋದಿ ಅವರಿಗೆ ಆಪ್ತರಾಗಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೇಲೋನಿ ಕೂಡ, ‘ಭಾರತ ಮತ್ತು ಚೀನಾದಂಥ ದೇಶಗಳು ರಷ್ಯಾ- ಉಕ್ರೇನ್‌ ಯುದ್ಧ ತಡೆಯಬಲ್ಲ ಸಾಮರ್ಥ್ಯ ಹೊಂದಿವೆ’+ ಎಂದು ಹೇಳಿದ್ದಾರೆ.