ನೀಟ್‌ ಟಾಪರ್‌ಗಳ ಸಂಖ್ಯೆ 67ರಿಂದ 61ಕ್ಕೆ ಇಳಿಕೆ

| Published : Jul 02 2024, 01:30 AM IST / Updated: Jul 02 2024, 06:21 AM IST

ಸಾರಾಂಶ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ನೀಟ್‌- ಯುಜಿ ಮರು ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ ಹಾಗೂ ರ್‍ಯಾಂಕ್‌ ಪಟ್ಟಿಯನ್ನೂ ಪರಿಷ್ಕರಿಸಲಾಗಿದೆ.

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ನೀಟ್‌- ಯುಜಿ ಮರು ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ ಹಾಗೂ ರ್‍ಯಾಂಕ್‌ ಪಟ್ಟಿಯನ್ನೂ ಪರಿಷ್ಕರಿಸಲಾಗಿದೆ. ಈ ಮುಂಚೆ 67 ಇದ್ದ ಟಾಪರ್‌ಗಳ ಸಂಖ್ಯೆ ಈಗ 61ಕ್ಕೆ ಇಳಿದಿದೆ. ಅಲ್ಲದೆ, ಮರುಪರೀಕ್ಷೆ ಬರೆದ ಯಾರಿಗೂ ಪೂರ್ಣ ಅಂಕ ಲಭಿಸಿಲ್ಲ

ನೀಟ್‌ ಪರೀಕ್ಷಾ ಗ್ರೇಸ್ ಅಂಕ ಗೊಂದಲದ ಕಾರಣ ಗ್ರೇಸ್‌ ಅಂಕ ಪಡೆದಿದ್ದ 1563 ಜನರಿಗೆ ಮರುಪರೀಕ್ಷೆಗೆ ಸೂಚಿಸಲಾಗಿತ್ತು. ಆದರೆ ಅದು ಐಚ್ಛಿಕ ಪರೀಕ್ಷೆ ಆದ ಕಾರಣ 813 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು. ಅವರ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಮೂಲಗಳ ಪ್ರಕಾರ ಈ ಹಿಂದೆ ಟಾಪರ್‌ ಆಗಿ ಹೊರಹೊಮ್ಮಿದ್ದ 6 ಜನರ ಪೈಕಿ ಯಾರೂ ಈ ಬಾರಿ ಟಾಪರ್‌ ಆಗಿ ಹೊರಹೊಮ್ಮಿಲ್ಲ. ಆದರೆ 6ರ ಪೈಕಿ 5 ಜನರು ಪರೀಕ್ಷೆ ಬರೆದಿದ್ದು ಅವರೆಲ್ಲಾ 680ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದಾರೆ ಎನ್ನಲಾಗಿದೆ.

ಈ ಹಿಂದಿನ ನೀಟ್‌ ಫಲಿತಾಂಶದಲ್ಲಿ ದಾಖಲೆಯ 67 ಜನರು 720ಕ್ಕೆ 720 ಅಂಕ ಪಡೆದ ಟಾಪರ್‌ ಆಗಿ ಹೊರಹೊಮ್ಮಿದ್ದರು. ಈಗ ಟಾಪರ್‌ಗಳ ಸಂಖ್ಯೆ 67ರಿಂದ 61ಕ್ಕೆ ಇಳಿದಿದೆ. ಹೀಗೆ ಟಾಪರ್‌ ಸಂಖ್ಯೆ ಕಡಿಮೆಯಾದ ಕಾರಣ ಒಟ್ಟಾರೆ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರೀ ಏರಿಳಿಕೆಯಾಗಲಿದೆ.

ಏನಿದು ವಿವಾದ?:

ಮೇ 5ರಂದು ವಿವಿಧ ರಾಜ್ಯಗಳಲ್ಲಿ ನಡೆದ ನೀಟ್‌ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಗೊಂದಲದ ಕಾರಣ ಕೆಲ 1563 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯದ ಜೊತೆಗೆ ಗ್ರೇಸ್‌ ಅಂಕಗಳನ್ನು ನೀಡಲಾಗಿತ್ತು. ಜೊತೆಗೆ ಫಲಿತಾಂಶವನ್ನು ಪೂರ್ವ ನಿಗದಿತ ಜೂ.14ರ ಬದಲಾಗಿ, ಯಾವುದೇ ಪೂರ್ವಮಾಹಿತಿ ನೀಡದೇ ಲೋಕಸಭಾ ಚುನಾವಣಾ ಫಲಿತಾಂಶದ ಸಂಜೆ ದಿಢೀರನೆ ಘೋಷಿಸಿದ ಕಾರಣ ಇದರಲ್ಲಿ ಏನೋ ಅಕ್ರಮ ಇದೆ ಅನುಮಾನ ವ್ಯಕ್ತವಾಗಿತ್ತು. ಆದರೆ ಈ ಆರೋಪ ನಿರಾಕರಿಸಿದ್ದ ನೀಟ್‌ ಪರೀಕ್ಷೆ ಆಯೋಜಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, ಈ ಬಾರಿ ಟಾಪರ್‌ ಆಗಿ ಹೊರಹೊಮ್ಮಿದ 67 ಜನರ ಪೈಕಿ 6 ಜನರು ಮಾತ್ರವೇ ಗ್ರೇಸ್‌ ಅಂಕ ಪಡೆದವರು ಎಂದು ಸ್ಪಷ್ಟಪಡಿಸಿತ್ತು.

ಆದರೆ ಪರೀಕ್ಷೆಯ ಕುರಿತು ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರೇಸ್ ಅಂಕ ಪಡೆದವರಿಗೆ ಮರು ಪರೀಕ್ಷೆಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದರನ್ವಯ 1563 ಜನರಿಗೆ ಹೊಸದಾಗಿ ಪರೀಕ್ಷೆ ಬರೆಯುವ ಇಲ್ಲವೇ, ಹೆಚ್ಚುವರಿಯಾಗಿ ನೀಡಲಾಗಿದ್ದ ಗ್ರೇಸ್‌ ಅಂಕವನ್ನು ಕಡಿತಗೊಳಿಸಿದ ಬಳಿಕ ಸಿಗುವ ಅಂಕ ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

==

ನೀಟ್‌ ಚರ್ಚೆಗೆ ಆಗ್ರಹ: ವಿಪಕ್ಷಗಳಿಂದ ಸಭಾತ್ಯಾಗ

ನವದೆಹಲಿ: ನೀಟ್‌ ಅಕ್ರಮದ ಕುರಿತಾದ ಚರ್ಚೆಗೆ ಸರ್ಕಾರ ಒಂದು ಪ್ರತ್ಯೇಕ ದಿನವನ್ನು ಮೀಸಲಿರಿಸಬೇಕು. ಸರ್ಕಾರ ಈ ಬಗ್ಗೆ ಸ್ಪಷ್ಟ ಭರವಸೆ ನೀಡುವಂತೆ ಒತ್ತಾಯಿಸಿ ವಿಪಕ್ಷ ನಾಯಕರು ಸೋಮವಾರ ಸಂಸತ್‌ನಲ್ಲಿ ಸಭಾತ್ಯಾಗ ಮಾಡಿದ್ದಾರೆ.ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ವಿಚಾರವಾಗಿ ಧ್ವನಿ ಎತ್ತಿ, ‘ನೀಟ್‌ ಕುರಿತು ಚರ್ಚಿಸಲು ಒಂದು ಪ್ರತ್ಯೇಕ ದಿನದ ಅಗತ್ಯವಿದೆ’ ಎಂದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿ,‘ ಅಧ್ಯಕ್ಷರ ಭಾಷಣದ ಮೇಲಿನ ವಂದನಾ ನಿರ್ಣಯದ ಬಳಿಕ ಪ್ರಸ್ತಾಪಿಸಬಹುದು’ ಎಂದರು. ಆದರೆ ಸ್ಪೀಕರ್ ಓಂ ಬಿರ್ಲಾ ‘ ವಂದನಾ ನಿರ್ಣಯದ ವೇಳೆ ಈ ರೀತಿ ಚರ್ಚಿಸುವ ಸಂಪ್ರದಾಯವಿಲ್ಲ’ ಎಂದರು. ಹೀಗಾಗಿ ವಿಪಕ್ಷಗಳು ಸರ್ಕಾರ ಸ್ಪಷ್ಟ ಭರವಸೆ ನೀಡುವಂತೆ ಆಗ್ರಹಿಸಿ ಸಭಾತ್ಯಾಗ ಮಾಡಿದರು.