ನೀಟ್ ಪರೀಕ್ಷೆಯನ್ನು ದೋಷರಹಿತವಾಗಿ ನಡೆಸಲು ಸಿಸಿಟೀವಿ ಅಳವಡಿಕೆ, ಅಣಕು ಕಾರ್ಯಾಚರಣೆ, ಪರೀಕ್ಷಾ ಕೇಂದ್ರಗಳ ಸಂಪೂರ್ಣ ಪರಿಶೀಲನೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ. ಜೊತೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಇಡೀ ಪ್ರಕ್ರಿಯೆ ಮೇಲೆ ನಿಗಾ ಇರಿಸಿದ್ದಾರೆ ಎಂದು ಹೇಳಿದೆ.
ನವದೆಹಲಿ: ನೀಟ್ ಪರೀಕ್ಷೆಯನ್ನು ದೋಷರಹಿತವಾಗಿ ನಡೆಸಲು ಸಿಸಿಟೀವಿ ಅಳವಡಿಕೆ, ಅಣಕು ಕಾರ್ಯಾಚರಣೆ, ಪರೀಕ್ಷಾ ಕೇಂದ್ರಗಳ ಸಂಪೂರ್ಣ ಪರಿಶೀಲನೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ. ಜೊತೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಇಡೀ ಪ್ರಕ್ರಿಯೆ ಮೇಲೆ ನಿಗಾ ಇರಿಸಿದ್ದಾರೆ ಎಂದು ಹೇಳಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ
ಎನ್‌ಟಿಎ ಸುಪ್ರೀಂಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ದೋಷರಹಿತವಾಗಿ ಪರೀಕ್ಷೆ ನಡೆಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ‘ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಡ್ಡಾಯ ಅಳವಡಿಕೆ, ಕನಿಷ್ಠ 90 ದಿನಗಳವರೆಗೆ ದೃಶ್ಯಗಳನ್ನು ಉಳಿಸಿಡುವುದು, ಅಣಕು ಕಾರ್ಯಾಚರಣೆಗಳು, ಹವಾಮಾನ ಸಂಬಂಧಿ ತಯಾರಿ, ತುರ್ತು ವೈದ್ಯಕೀಯ ನೆರವು ಮತ್ತು ಪರೀಕ್ಷೆಗೆ ಮುಂಚಿತವಾಗಿ ಕೇಂದ್ರಗಳ ಸಂಪೂರ್ಣ ಪರಿಶೀಲನೆ ಮಾಡಲಾಗುತ್ತದೆ. ಪರೀಕ್ಷೆ ಬಳಿಕ ಸಿಸಿಟಿವಿ ದೃಶ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿ ಸಂದೇಹಾಸ್ಪದ ಚಟುವಟಿಕೆಗಳನ್ನು ಪತ್ತೆ ಹಚ್ಚಲಾಗುತ್ತದೆ’ ಎಂದು ತಿಳಿಸಿದೆ.
‘ಎನ್‌ಟಿಎನಲ್ಲಿ 16 ಹೊಸ ಹುದ್ದೆಗಳನ್ನು ರಚಿಸಲಾಗಿದೆ. ರಾಜ್ಯಗಳೊಂದಿಗೆ ಉತ್ತಮ ಸಮನ್ವಯಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಪೊಲೀಸ್, ಗುಪ್ತಚರ ಇಲಾಖೆ, ಸ್ಥಳೀಯ ಆಡಳಿತ ಮತ್ತು ಎನ್‌ಟಿಎ ಅಧಿಕಾರಿಗಳು ಇರುತ್ತಾರೆ’ ಎಂದು ಮಾಹಿತಿ ನೀಡಿದೆ.
ಇನ್ನು ಕಂಪ್ಯೂಟರ್ ಪರೀಕ್ಷೆ:
‘ಎನ್‌ಟಿಎ ನಡೆಸುವ ದೊಡ್ಡ ಪರೀಕ್ಷೆಗಳಲ್ಲಿ ನೀಟ್ ಮಾತ್ರ ಕೈಬರಹದಲ್ಲಿ ನಡೆಯುತ್ತದೆ. ಉಳಿದ ಎಲ್ಲಾ ಮುಖ್ಯ ಪರೀಕ್ಷೆಗಳನ್ನು ಈಗಾಗಲೇ ಕಂಪ್ಯೂಟರ್ ಆಧರಿತ (ಸಿಬಿಟಿ) ವಿಧಾನದಲ್ಲಿ ನಡೆಸಲಾಗುತ್ತಿದೆ. ತಜ್ಞರ ಉನ್ನತ ಮಟ್ಟದ ಸಮಿತಿ (ಎಚ್‌ಎಲ್‌ಸಿಇ) ನೀಟ್ ಅನ್ನು ಕಂಪ್ಯೂಟರ್ ಆಧರಿತ ವಿಧಾನಕ್ಕೆ ಬದಲಾಯಿಸಲು ಶಿಫಾರಸು ಮಾಡಿದೆ. ಮುಂದಿನ ವರ್ಷದಿಂದಲೇ ಈ ಬದಲಾವಣೆ ಜಾರಿಗೆ ತರಲಾಗುತ್ತದೆ’ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂ ಕೇಂದ್ರ ಸರ್ಕಾರ ಹಾಗೂ ಎನ್‌ಟಿಎಯಿಂದ ಪ್ರತಿಕ್ರಿಯೆ ಕೇಳಿತ್ತು. ಅದಕ್ಕೆ ಅದು ಈ ಉತ್ತರ ನೀಡಿದೆ.
