ಮೈಸೂರು ಬಾಗ್ಮತಿ ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿ ಬಿದ್ದ ದುರಂತ ಉದ್ದೇಶಪೂರ್ವಕ ಕೃತ್ಯ!

| Published : Oct 20 2024, 01:50 AM IST / Updated: Oct 20 2024, 05:02 AM IST

ಸಾರಾಂಶ

ಮೈಸೂರಿನಿಂದ ಬಿಹಾರದ ದರ್ಭಂಗಾಕ್ಕೆ ಅ.11ರಂದು ತೆರಳುತ್ತಿದ್ದ ಬಾಗ್ಮತಿ ಎಕ್ಸ್‌ಪ್ರೆಸ್‌ ರೈಲು, ಮುಖ್ಯ ಮಾರ್ಗ ಬದಲಿಸಿ ಪಕ್ಕದ ಮಾರ್ಗದಲ್ಲಿ ನಿಂತಿದ್ದ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದ್ದರ ಹಿಂದೆ ವಿಧ್ವಂಸಕ ಕೃತ್ಯ ಅಡಗಿದೆ ಎಂಬ ಆತಂಕಕಾರಿ ಸಂಗತಿ ಪತ್ತೆಯಾಗಿದೆ.

ಚೆನ್ನೈ: ಮೈಸೂರಿನಿಂದ ಬಿಹಾರದ ದರ್ಭಂಗಾಕ್ಕೆ ಅ.11ರಂದು ತೆರಳುತ್ತಿದ್ದ ಬಾಗ್ಮತಿ ಎಕ್ಸ್‌ಪ್ರೆಸ್‌ ರೈಲು, ಮುಖ್ಯ ಮಾರ್ಗ ಬದಲಿಸಿ ಪಕ್ಕದ ಮಾರ್ಗದಲ್ಲಿ ನಿಂತಿದ್ದ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದ್ದರ ಹಿಂದೆ ವಿಧ್ವಂಸಕ ಕೃತ್ಯ ಅಡಗಿದೆ ಎಂಬ ಆತಂಕಕಾರಿ ಸಂಗತಿ ರೈಲ್ವೆ ಇಲಾಖೆಯ ತನಿಖೆ ವೇಳೆ ಪತ್ತೆಯಾಗಿದೆ.

ರೈಲು ದುರಂತ ಸಂಭವಿಸಿದ ಕವರೈಪೇಟೆ ನಿಲ್ದಾಣದ ಬಳಿ ರೈಲು ಹಳಿಗೆ ಅಳವಡಿಸಲಾಗಿದ್ದ ನಟ್‌ಗಳು ಹಾಗೂ ಬೋಲ್ಟ್‌ಗಳನ್ನು ಉದ್ದೇಶಪೂರ್ವಕವಾಗಿ ಕಳಚಲಾಗಿತ್ತು ಎಂಬ ಸಂಗತಿ ಬಯಲಾಗಿದೆ.

ಬೆಂಗಳೂರಿನ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ಅವರ ಎದುರು ವಿಚಾರಣೆಗೆ ಹಾಜರಾದ ಟ್ರ್ಯಾಕ್‌ಮ್ಯಾನ್‌, ಲೋಕೋಪೈಲಟ್‌, ಸ್ಟೇಷನ್‌ ಮಾಸ್ಟರ್‌ ಸೇರಿದಂತೆ 15 ರೈಲ್ವೆ ಸಿಬ್ಬಂದಿ, ಈ ದುರಂತದ ಹಿಂದೆ ಯಾವುದೇ ತಾಂತ್ರಿಕ ದೋಷವಿಲ್ಲ ಎಂದು ತಿಳಿಸಿದರು. ಆದರೆ ಹಳಿಗೆ ಅಳವಡಿಸಲಾಗಿದ್ದ ನಟ್‌ಗಳು ಹಾಗೂ ಬೋಲ್ಟ್‌ಗಳನ್ನು ಉದ್ದೇಶಪೂರ್ವಕವಾಗಿ ಕಳಚಿದ್ದ ಸಂಗತಿಯನ್ನು ಬಹಿರಂಗಪಡಿಸಿದರು.

‘ರೈಲ್ವೆ ಹಳಿಯಿಂದ 6 ಬೋಲ್ಟ್‌ಗಳು ಹಾಗೂ ನಟ್‌ಗಳನ್ನು ತೆಗೆಯಲಾಗಿತ್ತು. ಹೀಗಾಗೇ ರೈಲು ಗ್ರೀನ್‌ ಸಿಗ್ನಲ್‌ ಇದ್ದರೂ ಮುಖ್ಯ ಮಾರ್ಗ ಬದಲಿಸಿ ಪಕ್ಕದ ಲೂಪ್‌ ಮಾರ್ಗಕ್ಕೆ ನುಗ್ಗಿದೆ. ನಟ್‌-ಬೋಲ್ಟ್‌ ತೆಗೆಯಲು ಅನುಭವಿ ವ್ಯಕ್ತಿಗೆ 30 ನಿಮಿಷ ಬೇಕಾಗುತ್ತದೆ. ಮಷಿನ್‌ಗಳನ್ನು ಬಳಸಿದರೂ 15ರಿಂದ 20 ನಿಮಿಷಗಳು ಬೇಕಾಗುತ್ತವೆ. ಈ ದುರಂತದಲ್ಲಿ ಅತ್ಯಂತ ನಿಖರವಾಗಿ ವಿಧ್ವಂಸಕ ಕೃತ್ಯವನ್ನು ನಡೆಸಲಾಗಿದೆ. ಹಾನಿ ಮಾಡುವ ಉದ್ದೇಶ ಸ್ಪಷ್ಟವಿದೆ’ ಎಂದು ರೈಲ್ವೆ ಪೊಲೀಸ್‌ ಇಲಾಖೆಯ ಸಹಾಯಕ ಆಯುಕ್ತ ಕರ್ಣನ್‌ ತಿಳಿಸಿದ್ದಾರೆ.

ದುರಂತ ನಡೆದ ದಿನ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಟ್ರ್ಯಾಕ್‌ಮ್ಯಾನ್‌ ಕರ್ತವ್ಯದಲ್ಲಿದ್ದ. ಆ ವೇಳೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆದಿಲ್ಲ. ಆದರೆ ರಾತ್ರಿ 8.26ರ ವೇಳೆ ಈ ಕೃತ್ಯ ನಡೆದಿರುವಂತಿದೆ. ಏಕೆಂದರೆ ಆ ವೇಳೆಗೆ ಒಂದು ಎಮು ರೈಲು ಅದೇ ಮಾರ್ಗದಲ್ಲಿ ಹಾದು ಹೋಗಿದೆ. ಇದರಿಂದ ಹಳಿ ಮತ್ತಷ್ಟು ಸಡಿಲವಾಗಿವೆ. ಅದಾದ 12 ನಿಮಿಷದಲ್ಲೇ ಬಾಗ್ಮತಿ ಎಕ್ಸ್‌ಪ್ರೆಸ್‌ ರೈಲು ಆಗಮಿಸಿ ದುರಂತ ಸಂಭವಿಸಿದೆ.

‘ಬಾಗ್ಮತಿ ಎಕ್ಸ್‌ಪ್ರೆಸ್‌ಗೆ ಮುಖ್ಯ ಮಾರ್ಗದಲ್ಲಿ ಸಾಗಲು ಹಸಿರು ಸಿಗ್ನಲ್‌ ತೋರಲಾಗಿತ್ತು. ಆದರೆ ಅದು ಹೇಗೆ ಪಕ್ಕದ ಲೂಪ್‌ಲೈನ್‌ಗೆ ಹೋಯಿತು ಎಂದು ಗೊತ್ತಾಗಿಲ್ಲ’ ಎಂದು ಲೋಕೋಪೈಲಟ್‌ ತಿಳಿಸಿದ್ದರೆ, ‘ನಾನು ಕೂಡ ಮುಖ್ಯ ಹಳಿಯಲ್ಲಿ ಸಾಗಲು ಹಸಿರು ಸಿಗ್ನಲ್‌ ನೀಡಿದ್ದೆ. ಆದರೂ ರೈಲು ಹೇಗೆ ಲೂಪ್‌ಲೈನ್‌ಗೆ ಹೋಯಿತು ಎಂದು ಗೊತ್ತಿಲ್ಲ’ ಎಂದು ಸ್ಟೇಷನ್‌ ಮಾಸ್ಟರ್‌ ತಿಳಿಸಿದ್ದಾರೆ.

ಮುಖ್ಯ ಹಳಿಯ ಬದಲು ಲೂಪ್‌ಲೈನ್‌ಗೆ ಬಾಗ್ಮತಿ ಎಕ್ಸ್‌ಪ್ರೆಸ್‌ ಅ.11ರಂದು ನುಗ್ಗಿದ್ದರಿಂದ 12 ಬೋಗಿಗಳು ಹಳಿ ತಪ್ಪಿ 20 ಮಂದಿಗೆ ಗಾಯಗಳಾಗಿದ್ದವು.