ಸಾರಾಂಶ
ಒಡಿಶಾದ ಪುರಿ ಜಿಲ್ಲೆಯಲ್ಲಿ 15 ವರ್ಷದ ಹುಡುಗಿಯೊಬ್ಬಳ ಮೈಗೆ ಅಪರಿಚಿತರು ಬೆಂಕಿ ಹಚ್ಚಿ ಪರಾರಿಯಾದ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ.
ಭುವನೇಶ್ವರ: ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಒಡಿಶಾದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಲ್ಲೇ ಮೈಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದ ಘಟನೆ ತಣ್ಣಗಾಗುವ ಮೊದಲೇ, ಒಡಿಶಾದ ಪುರಿ ಜಿಲ್ಲೆಯಲ್ಲಿ 15 ವರ್ಷದ ಹುಡುಗಿಯೊಬ್ಬಳ ಮೈಗೆ ಅಪರಿಚಿತರು ಬೆಂಕಿ ಹಚ್ಚಿ ಪರಾರಿಯಾದ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ.
ಸಂತ್ರಸ್ತೆಯ ದೇಹದ ಶೇ.70ರಷ್ಟು ಭಾಗ ಸುಟ್ಟುಹೋಗಿದ್ದು, ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗಿದ್ದೇನು?: ಪುರಿ ಜಿಲ್ಲೆಯ ಬಯಬರ್ ಗ್ರಾಮದ ನುಗೋಪಾಲಪುರ ಬಸ್ತಿಯ ಬಾಲಕಿ 8ನೇ ತರಗತಿ ಬಳಿಕ ಶಾಲೆ ಬಿಟ್ಟಿದ್ದಳು. ಆಕೆಯ ತಂದೆ ಸ್ಥಳೀಯ ವಾಹನ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕಿ ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ತನ್ನ ಗೆಳತಿಯ ಮನೆಗೆ ತೆರಳುತ್ತಿದ್ದಳು. ಆಗ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಆಕೆಯನ್ನು ಅಡ್ಡಗಟ್ಟಿ ಬೆದರಿಸಿ ಒತ್ತಾಯದಿಂದ ಭಾರ್ಗವಿ ನದಿ ದಡಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವಳ ದೇಹದ ಮೇಲೆ ಪೆಟ್ರೋಲ್ ಸಿಂಪಡಿಸಿ, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆಕೆಯ ಮನೆಯಿಂದ ಕೇವಲ 1.5 ಕಿ.ಮೀ. ದೂರದಲ್ಲಿ ಘಟನೆ ನಡೆದಿದೆ. ಬೆಂಕಿಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಪಿಪಿಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಾಲಕಿಯ ಬೆನ್ನು, ಹೊಟ್ಟೆ ಹಾಗೂ ಇತರ ಭಾಗಗಳು ಸುಟ್ಟಿವೆ. ಆದರೆ ಮಾತಾಡುವ ಸ್ಥಿತಿಯಲ್ಲಿದ್ದಾಳೆ. ಆಕೆಯ ಪಾಲಕರು ನೀಡಿದ ದೂರಿನನ್ವಯ ಬಾಲಂಗಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣದ ತನಿಖೆಗೆ 2 ತಂಡಗಳನ್ನು ರಚಿಸಲಾಗಿದ್ದು, ತನಿಖೆ ಈಗಾಗಲೇ ಆರಂಭವಾಗಿದೆ. ಅಪರಾಧಿಗಳಿಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ದುಷ್ಕರ್ಮಿಗಳು 15 ವರ್ಷದ ಬಾಲಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸುದ್ದಿ ಕೇಳಿ ನನಗೆ ದುಃಖ ಮತ್ತು ಆಘಾತವಾಯಿತು. ಬಾಲಕಿಯ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸಲಿದೆ. ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಒಡಿಶಾ ಉಪಮುಖ್ಯಮಂತ್ರಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಪ್ರವತಿ ಪರಿದಾ ತಿಳಿಸಿದ್ದಾರೆ. ವಿರೋಧ ಪಕ್ಷ ಬಿಜೆಡಿ ಮತ್ತು ಕಾಂಗ್ರೆಸ್ ನಿಯೋಗವು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಕುಟುಂಬಸ್ಥರು ಮತ್ತು ವೈದ್ಯರನ್ನು ಭೇಟಿ ಮಾಡಿದೆ.
ಒಡಿಶಾ ವಿದ್ಯಾರ್ಥಿನಿಯರ ಸುರಕ್ಷತೆಗೆ ‘ಶಕ್ತಿಶ್ರೀ’ ಸ್ಕೀಂ
ಭುವನೇಶ್ವರ: ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಾಹುತಿ ಮಾಡಿಕೊಂಡ ಬೆನ್ನಲ್ಲೇ ಎಚ್ಚೆತ್ತ ಒಡಿಶಾ ಸರ್ಕಾರ, ವಿದ್ಯಾರ್ಥಿನಿಯರ ಸುರಕ್ಷತೆಗೆ ‘ಶಕ್ತಿಶ್ರೀ’ ಯೋಜನೆ ಪ್ರಕಟಿಸಿದೆ,‘ರಾಜ್ಯದ 16 ವಿವಿಗಳು, 730 ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಯೋಜನೆ ಜಾರಿಯಾಗಲಿದೆ. ಶಕ್ತಿಶ್ರೀ ಸಬಲೀಕರಣ ಸೆಲ್, ಶಕ್ತಿಶ್ರೀ ಮೊಬೈಲ್ ಆ್ಯಪ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ನೀತಿ ಸಂಹಿತೆ, ಮಹಿಳಾ ಸಬಲೀಕರಣಕ್ಕಾಗಿ ಶಕ್ತಿಶ್ರೀ ಕ್ರಮಗಳು, ವಾರ್ಷಿಕ ಕ್ಯಾಂಪಸ್ ಸುರಕ್ಷತಾ ವರದಿ, ಸಿಸಿಟಿವಿ ಕಣ್ಗಾವಲು, ಲೈಂಗಿಕ ಕಿರುಕುಳ ತಡೆ ಕಾಯ್ದೆ, 2013 ಮತ್ತು ಯುಜಿಸಿ ನಿಯಮಗಳ ಕುರಿತು ಆನ್‌ಲೈನ್ ಕೋರ್ಸ್‌ಗಳು ಮತ್ತು ಶಕ್ತಿ ಸ್ವರೂಪಿಣಿ ಎಂಬ 8 ಉಪಕ್ರಮಗಳನ್ನು ಯೋಜನೆಯು ಒಳಗೊಂಡಿರುತ್ತದೆ’ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.
ಪ್ರಾಧ್ಯಾಪಕರ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ಪಿಟಿಐ ನೋಯ್ಡಾಒಡಿಶಾದಲ್ಲಿ ಕಾಲೇಜು ಪ್ರಾಧ್ಯಾಪಕರ ಲೈಂಗಿಕ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಘಟನೆ ಬೆನ್ನಲ್ಲೇ ಯುಪಿಯಲ್ಲಿಯೂ ಅಂತಹದ್ದೇ ಘಟನೆ ನಡೆದಿದೆ. ನೋಯ್ಡಾದ ಶಾರದಾ ವಿವಿ ವಿದ್ಯಾರ್ಥಿನಿಯೊಬ್ಬಳು ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮಾನಸಿಕ ಕಿರುಕುಳ ನೀಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿವಿಯಲ್ಲಿ ದ್ವಿತೀಯ ವರ್ಷದ ದಂತ ಶಸ್ತ್ರಚಿಕಿತ್ಸೆ (ಬಿಡಿಎಸ್) ಓದುತ್ತಿದ್ದ ಹರ್ಯಾಣದ ಗುರುಗ್ರಾಮ ಮೂಲದ ಜ್ಯೋತಿ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಶುಕ್ರವಾರ ರಾತ್ರಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಆಕೆ ಕಾಲೇಜಿನ ಇಬ್ಬರು ಪ್ರಾಧ್ಯಾಪಕರ ವಿರುದ್ಧ ನಿಂದನೆ ಮತ್ತು ಕಿರುಕುಳದ ಆರೋಪವನ್ನು ಮಾಡಿ ತಮ್ಮ ಸಾವಿಗೆ ಅವರೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು. ‘ ಅವರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಅವರು ನನ್ನನ್ನು ಅವಮಾನಿಸಿದ್ದಾರೆ. ಅವರಿಂದ ನಾನು ಹಲವು ಸಮಯದಿಂದ ಒತ್ತಡಕ್ಕೆ ಒಳಗಾಗಿದ್ದೇನೆ. ಅವರಿಂದ ನಾನು ಪದೇ ಪದೇ ಅದನ್ನು ಎದುರಿಸುತ್ತಿದ್ದೇನೆ. ಈ ರೀತಿ ಬದುಕುವುದಕ್ಕೆ ಸಾಧ್ಯವಿಲ್ಲ. ಕ್ಷಮಿಸಿ’ ಎಂದು ಸಾವಿಗೂ ಮುನ್ನ ನೋವು ತೋಡಿಕೊಂಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.