ವಿಮಾನ ವಿಳಂಬ, ಮಾರ್ಗ ಬದಲು : ಜಮ್ಮು ಕಾಶ್ಮೀರ ಸಿಎಂ ಓಮರ್‌ ಅಬ್ದುಲ್ಲಾ ಆಕ್ರೋಶ

| N/A | Published : Apr 21 2025, 12:49 AM IST / Updated: Apr 21 2025, 06:19 AM IST

ಸಾರಾಂಶ

ತಾವು ಪ್ರಯಾಣಿಸುತ್ತಿದ್ದ ವಿಮಾನ ವಿಳಂಬವಾಗಿ, ದೆಹಲಿಯಲ್ಲಿ ಇಳಿಯುವುದಕ್ಕೂ ಮುನ್ನ ರನ್‌ ವೇ ಸಮಸ್ಯೆ ಕಾರಣ ಮಾರ್ಗ ಬದಲಿಸಿ ಜೈಪುರಕ್ಕೆ ತೆರಳಿದ್ದರಿಂದ ಅಸಮಾಧಾನಗೊಂಡ ಜಮ್ಮು ಕಾಶ್ಮೀರ ಸಿಎಂ ಓಮರ್‌ ಅಬ್ದುಲ್ಲಾ, ದೆಹಲಿ ವಿಮಾನ ನಿಲ್ದಾಣದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ತಾವು ಪ್ರಯಾಣಿಸುತ್ತಿದ್ದ ವಿಮಾನ ವಿಳಂಬವಾಗಿ, ದೆಹಲಿಯಲ್ಲಿ ಇಳಿಯುವುದಕ್ಕೂ ಮುನ್ನ ರನ್‌ ವೇ ಸಮಸ್ಯೆ ಕಾರಣ ಮಾರ್ಗ ಬದಲಿಸಿ ಜೈಪುರಕ್ಕೆ ತೆರಳಿದ್ದರಿಂದ ಅಸಮಾಧಾನಗೊಂಡ ಜಮ್ಮು ಕಾಶ್ಮೀರ ಸಿಎಂ ಓಮರ್‌ ಅಬ್ದುಲ್ಲಾ, ದೆಹಲಿ ವಿಮಾನ ನಿಲ್ದಾಣದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಜಮ್ಮುವಿನಿಂದ ಹೊರಟ 3 ತಾಸಿನ ಬಳಿಕ ವಿಮಾನವನ್ನು ಜೈಪುರಕ್ಕೆ ತಿರುಗಿಸಲಾಯಿತು.

 ರಾತ್ರಿ 1 ಗಂಟೆಗೆ ನಾನು ಜೈಪುರದಲ್ಲಿದ್ದೇನೆ. ಇಲ್ಲಿಂದ ಎಷ್ಟು ಗಂಟೆಗೆ ಹೊರಡುತ್ತೇವೆಂಬುದು ಗೊತ್ತಿಲ್ಲ’ ಎಂದು, ತಾವು ವಿಮಾನದ ಮೆಟ್ಟಿಲುಗಳ ಮೇಲೆ ನಿಂತಿರುವ ಫೋಟೋವನ್ನೂ ಪೋಸ್ಟ್‌ ಮಾಡಿದ್ದಾರೆ. ಬಳಿಕ 3 ಗಂಟೆ ಸುಮಾರಿಗೆ ದೆಹಲಿ ತಲುಪಿದೆ ಎಂದು ಓಮರ್‌ ಮಾಹಿತಿ ನೀಡಿದ್ದಾರೆ. ಓಮರ್‌ ಅವರಿಗಾದ ತೊಂದರೆಗೆ ದೆಹಲಿ ವಿಮಾನ ನಿಲ್ದಾಣ ನಿರ್ವಾಹಕರು(ಡಿಐಎಎಲ್‌) ವಿಷಾದ ವ್ಯಕ್ತಪಡಿಸಿದ್ದು, ‘ಪೂರ್ವ ಮಾರುತ ಮತ್ತು ನವೀಕರಣಕ್ಕಾಗಿ 10/28 ರನ್‌ವೇಅನ್ನು ಏ.8ರಿಂದ ಮುಚ್ಚಲಾಗಿರುವುದರಿಂದ, ಪ್ರಯಾಣಿಕರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನದ ಮಾರ್ಗ ಬದಲಾಯಿಸಲಾಯಿತು’ ಎಂದು ತಿಳಿಸಿದೆ.

ವಕ್ಫ್‌ನಿಂದ ಜನರ ವಿಭಜನೆಗೆ ಬಿಜೆಪಿ ಆರೆಸ್ಸೆಸ್‌ ತಂತ್ರ: ಖರ್ಗೆ

ಬಕ್ಸರ್‌ (ಬಿಹಾರ): ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಕ್ಫ್‌ ಹೆಸರಿನಲ್ಲಿ ಜನರನ್ನು ಒಡೆಯುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಅಲ್ಲದೇ, ಸಂಘ ಪರಿವಾರ ಸಮಾಜವನ್ನು ಒಡೆಯುವ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಒಡೆಯುವುದರಲ್ಲಿ ನಂಬಿಕೆ ಇರಿಸಿದೆ ಎಂದು ದೂಷಿಸಿದರು.

ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಜನರ ಒಳಿತಿನ ಬಗ್ಗೆ ಯೋಚನೆಯೂ ಇಲ್ಲ. ಅವರು ಕೇವಲ ಜನರನ್ನು ವಿಭಜಿಸುವುದರಲ್ಲಿಯೇ ಇರುತ್ತಾರೆ. ಸಂಸತ್‌ನಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆಯೂ ಸಹ ಜನರ ನಡುವೆ ಒಡಕು ತರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಂಚು ಎಂದು ಕಿಡಿಕಾರಿದರು.ಜೊತೆಗೆ ಕಾಂಗ್ರೆಸ್‌ ಪಕ್ಷವು ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ್‌ ಅಂಬೇಡ್ಕರ್‌ ತತ್ವ ಸಿದ್ಧಾಂತದ ಆಧಾರದ ಮೇಲೆ ರಚಿಸಲಾಗಿದ್ದು, ಹೀಗಾಗಿ ಗಟ್ಟಿಯಾಗಿ ನಿಂತಿದೆ ಎಂದು ಗುಡುಗಿದರು.

ಇದಲ್ಲದೆ, ಕುರ್ಚಿಗಾಗಿ ಮೈತ್ರಿನಿಷ್ಠೆಯನ್ನೇ ಬದಲಿಸುವ ವ್ಯಕ್ತಿ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಎಂದು ಖರ್ಗೆ ಟೀಕಿಸಿದರು.

ಕಿಯಾ ಮೋಟರ್ಸ್‌ನಲ್ಲಿ 900 ಎಂಜಿನ್‌ ಕದ್ದ 9 ಜನ ಸರೆ

ಪೆನುಕೊಂಡ: ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿರುವ ಕಿಯಾ ಮೋಟರ್ಸ್‌ ಸ್ಥಾವರದಿಂದ 900 ಎಂಜಿನ್‌ಗಳನ್ನು ಕದ್ದಿದ್ದ 9 ಮಂದಿಯನ್ನು ಬಂಧಿಸಲಾಗಿದೆ.‘ಕಳೆದ 5 ವರ್ಷದಲ್ಲಿ 90 ಎಂಜಿನ್‌ ಕದಿಯಲಾಗಿತ್ತು. ಲೆಕ್ಕ ಪರಿಶೋಧನೆ ವೇಳೆ ಇದು ಬೆಳಕಿಗೆ ಬಂದಿದೆ’ ಎಂದು ಕಿಯಾ ಇತ್ತೀಚೆಗೆ ದೂರು ನೀಡಿತ್ತು. ಆಟೋ ಉದ್ಯಮವನ್ನೇ ಈ ಕಳ್ಳತನ ಬೆಚ್ಚಿ ಬೀಳಿಸಿತ್ತು. ಇದರ ಬೆನ್ನಲ್ಲೇ 9 ಜನರನ್ನು ಬಂಧಿಸಿ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಪೊಲೀಸರು, ‘ಶೇ.10ರಷ್ಟು ತನಿಖೆ ಮಾತ್ರ ಪೂರ್ಣಗೊಂಡಿದೆ. 9 ಜನರನ್ನು ಬಂಧಿಸಿದ್ದೇವೆ, ಕದ್ದ ಎಂಜಿನ್‌ಗಳನ್ನು ಭಾರತದ ಹಲವಾರು ರಾಜ್ಯಕ್ಕೆ ಕಳ್ಳಸಾಗಣೆ ಮಾಡಿ ಮಾರಲಾಗುತ್ತಿದೆ, ಆಂಧ್ರದ ಗಡಿ ಮೀರಿ ವ್ಯಾಪಕವಾದ ಅಕ್ರಮ ಜಾಲ ಕಾರ್ಯನಿರ್ವಹಿಸುತ್ತಿದೆ ’ ಎಂದಿದ್ದಾರೆ.