ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಒಮರ್‌ ಅಬ್ದುಲ್ಲಾ ಪ್ರಮಾಣ ವಚನ

| Published : Oct 16 2024, 12:48 AM IST / Updated: Oct 16 2024, 05:07 AM IST

ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಒಮರ್‌ ಅಬ್ದುಲ್ಲಾ ಪ್ರಮಾಣ ವಚನ
Share this Article
  • FB
  • TW
  • Linkdin
  • Email

ಸಾರಾಂಶ

ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಪಕ್ಷದ ಮುಖ್ಯಸ್ಥ ಒಮರ್‌ ಅಬ್ದುಲ್ಲಾ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಪಕ್ಷದ ಮುಖ್ಯಸ್ಥ ಒಮರ್‌ ಅಬ್ದುಲ್ಲಾ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿಂಗ್‌, ಒಮರ್‌ ಅಬ್ದುಲ್ಲಾಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. 

ಅವರು ಈ ಗದ್ದುಗೆ ಏರುತ್ತಿರುವುದು ಇದು ಎರಡನೇ ಬಾರಿ. ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್‌, ಆಪ್‌ ಮುಖ್ಯಸ್ಥ ಕೇಜ್ರಿವಾಲ್‌, ಆರ್‌ಜೆಡಿ ನಾಯಕ ಲಾಲು ಯಾದವ್‌, ಎನ್‌ಸಿಪಿ ನಾಯಕ ಶರದ್‌ ಪವಾರ್‌, ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಸೇರಿದಂತೆ ಇನ್ನಿತರರಿಗೆ ಆಹ್ವಾನ ನೀಡಲಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿ- ಕಾಂಗ್ರೆಸ್‌ ಮೈತ್ರಿಕೂಟ 90 ಸ್ಥಾನಗಳ ಪೈಕಿ 49 ಸ್ಥಾನ ಗೆದ್ದಿತ್ತು. ಬಿಜೆಪಿ 27 ಸ್ಥಾನ ಗೆದ್ದಿತ್ತು.

ದಿಲ್ಲಿ ಬಳಿಕ ಆಪ್‌ ಆಡಳಿತದ ಪಂಜಾಬ್‌ನಲ್ಲೂ ಪಟಾಕಿ ಬಳಕೆಗೆ ಭಾಗಶಃ ನಿರ್ಬಂಧ

ನವದೆಹಲಿ: ದೆಹಲಿ ನಂತರ ಇದೀಗ ಆಮ್‌ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬ್‌ ಸರ್ಕಾರ ಸಹ ದೀಪಾವಳಿ ವೇಳೆ ಪಟಾಕಿ ಪಟಾಕಿಗೆ ನಿಷೇಧ ಹೇರಿದೆ. ಆದರೆ ಪಂಜಾಬ್‌ ಪಟಾಕಿಗಳ ಮೇಲೆ ಪೂರ್ಣ ನಿಷೇಧದ ಬದಲಾಗಿ ಭಾಗಶಃ ನಿರ್ಬಂಧ ಹೇರಿದೆ. ಕಡಿಮೆ ಮಾಲಿನ್ಯಕಾರಕದ ಹಸಿರು ಪಟಾಕಿಗಳ ಬಳಕೆಗೆ ಪಂಜಾಬ್‌ ಅನುಮತಿಸಿದೆ. ಶಬ್ದ ಪ್ರಮಾಣ ಹೆಚ್ಚಿರುವ ಪಟಾಕಿಗಳ ಸಂಗ್ರಹ, ಪ್ರದರ್ಶನ, ಮಾರಾಟವನ್ನು ನಿರ್ಬಂಧಿಸಲಾಗಿದೆ ಎಂದು ಪಂಜಾಬ್‌ ಸರ್ಕಾರ ಹೇಳಿದೆ. 2025ರ ಜನವರಿ 1ರ ವರೆಗೆ ದೆಹಲಿ ಪಟಾಕಿಯನ್ನು ನಿರ್ಬಂಧಿಸಿದೆ.

ರಾಷ್ಟ್ರೀಯ ಸೈಬರ್‌ ಕ್ರೈಮ್‌ ಕೇಂದ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ರಾಯಭಾರಿ

ನವದೆಹಲಿ: ಭಾರತೀಯ ಸೈಬರ್‌ ಅಪರಾಧ ಸಮನ್ವಯ ಕೇಂದ್ರದ ರಾಷ್ಟ್ರೀಯ ರಾಯಭಾರಿಯಾಗಿ ಕನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರನ್ನು ಆರಿಸಲಾಗಿದೆ. ಈ ಕೇಂದ್ರವು, ಕೇಂದ್ರದ ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. ವರ್ಷದ ಆರಂಭದಲ್ಲಿ ಜಾಲತಾಣದಲ್ಲಿ ತಮ್ಮ ಡೀಪ್‌ಫೇಕ್‌ ವಿಡಿಯೋನಿಂದ ಸುದ್ದಿಯಾಗಿದ್ದ ಮಂದಣ್ಣ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ‘ನಮ್ಮ ಆನ್‌ಲೈನ್‌ ಜಗತ್ತಿನ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಮುಂದಿನ ಪೀಳಿಗೆ ಮತ್ತು ನಮಗಾಗಿ ಸುರಕ್ಷಿತ ಜಾಲತಾಣ ನಿರ್ಮಾಣಕ್ಕೆ ಎಲ್ಲರೂ ಒಂದಾಗಬೇಕು. ರಾಯಭಾರಿಯಾಗಿ ಸಾಧ್ಯವಾದಷ್ಟು ಜಾಗೃತಿ ಮೂಡಿಸುತ್ತೇನೆ’ ಎಂದು ಹೇಳಿದ್ದಾರೆ.

ಜಿಯೋದಿಂದ 1099 ರು.ಗೆ 4ಜಿ ಮೊಬೈಲ್‌ ಬಿಡುಗಡೆ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 2024ನೇ ಸಾಲಿನ ಇಂಡಿಯಾ ಮೊಬೈಲ್ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ರಿಲಯನ್ಸ್‌ ಜಿಯೋ ವತಿಯಿಂದ 4ಜಿ ಫೀಚರ್ಸ್‌ ಹೊಂದಿರುವ 1099 ರು. ಬೆಲೆಯ 2 ಹೊಸ ಫೋನ್‌ಗಳು ಬಿಡುಗಡೆಯಾಗಿವೆ. ಜಿಯೋ ಭಾರತ್‌ ಸರಣಿ ಅಡಿಯಲ್ಲಿ ವಿ3 ಮತ್ತು ವಿ4 ಮೊಬೈಲ್‌ ಫೋನ್‌ಗಳಾಗಿದ್ದು, ಇವು 1099 ರು.ಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜಿಯೋ ಭಾರತ್‌ ಸರಣಿಯ ವಿ2 ಮಾದರಿಯನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. ಕಂಪನಿಯ ಪ್ರಕಾರ, ಲಕ್ಷಾಂತರ 2ಜಿ ಗ್ರಾಹಕರು ಈ ಸ್ಮಾರ್ಟ್‌ಫೋನ್‌ಗಳ ಮೂಲಕ 4ಜಿಗೆ ಬದಲಾಗಿದ್ದಾರೆ. ಈ 4ಜಿ ಮೊಬೈಲ್‌ಗಳು 1000ಎಂಎಎಚ್‌ ಬ್ಯಾಟರಿ, 128 ಜಿಬಿ ಮೆಮೊರಿ ಹೊಂದಿದೆ. ತಿಂಗಳಿಗೆ 123 ರು. ರಿಚಾರ್ಜ್‌ ಮಾಡಿದರೆ, ಅನ್‌ಲಿಮಿಟೆಡ್‌ ಕರೆ ಜೊತೆಗೆ 14 ಜಿಬಿ ಡೇಟಾ ಸಹ ಲಭ್ಯವಿದೆ.

ಇರಾನ್‌ ಅಣು ಘಟಕಗಳ ಮೇಲೆ ದಾಳಿ ನಡೆಸಲ್ಲ: ಅಮೆರಿಕಕ್ಕೆ ಇಸ್ರೇಲ್‌

ವಾಷಿಂಗ್ಟನ್‌: ಇರಾನ್‌ನ ಪರಮಾಣು , ತೈಲ ಬಾವಿಗಳ ಮೇಲೆ ದಾಳಿ ನಡೆಸುವುದಿಲ್ಲ ಎನ್ನುವ ಭರವಸೆಯನ್ನು ಇಸ್ರೇಲ್‌ ಸರ್ಕಾರ ಬೈಡೆನ್ ಸರ್ಕಾರಕ್ಕೆ ನೀಡಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ಇಸ್ರೇಲ್‌ ಮೇಲೆ ಇರಾನ್‌ 180ಕ್ಕೂ ಹೆಚ್ಚು ಕ್ಷಿಪಣಿ, ರಾಕೆಟ್‌ ಬಳಸಿ ದಾಳಿ ನಡೆಸಿತ್ತು. ಅದಕ್ಕೆ ಪ್ರತೀಕಾವಾಗಿ ಇರಾನ್‌ನ ಪರಮಾಣು ಘಟಕ ಮತ್ತು ತೈಲ ಭಾವಿಗಳ ಮೇಲೆ ಇಸ್ರೇಲ್ ದಾಳಿ ನಡೆಸಬಹುದು ಎಂಬ ಆತಂಕ ಹೆಚ್ಚಾಗಿತ್ತು. ಅಮೆರಿಕ ಕೂಡಾ ಇಂಥದ್ದೊಂದು ಸಾಧ್ಯತೆ ಇದೆ ಎಂದು ಎಚ್ಚರಿಸಿತ್ತು. ಹೀಗಾಗಿ ಜಾಗತಿಕ ಮಟ್ಟದಲ್ಲಿ ಭಾರೀ ಆತಂಕ ಎದುರಾಗಿತ್ತು. ಆದರೆ ಇದೀಗ ಅಂಥ ದಾಳಿ ನಡೆಸಲ್ಲ ಎಂಬ ಸಮಾಧಾನಕರ ಸಂಗತಿಯನ್ನು ಇಸ್ರೇಲ್‌ ನೀಡಿದೆ.