ಸಾರಾಂಶ
ಭೋಪಾಲ್: ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಆರೋಪಿ, ತನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಪೊಲೀಸ್ ಠಾಣೆಗೆ ಬಂದು ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿ ರಾಷ್ಟ್ರಧ್ವಜಕ್ಕೆ ಮಂಗಳವಾರ 21 ಸಲ ನಮಿಸಿದ್ದಾನೆ.ಕಳೆದ ವಾರ ಮಧ್ಯ ಪ್ರದೇಶ ಹೈಕೋರ್ಟ್, ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಫೈಜಾನ್ ಎಂಬಾತನಿಗೆ ಜಾಮೀನು ನೀಡುವ ವೇಳೆ ಷರತ್ತಿನ ರೂಪದಲ್ಲಿ ಈ ರೀತಿಯ ಶಿಕ್ಷೆ ನೀಡಿತ್ತು. ಪ್ರತಿ ತಿಂಗಳ ಎರಡನೇ ಮತ್ತು 4 ನೇ ಭಾನುವಾರ ಮಿಸ್ರೋಡ್ ಪೊಲೀಸ್ ಠಾಣೆಗೆ ಬರಬೇಕು ಹಾಗೂ ಭಾರತ್ ಮಾತಾ ಕೀ ಘೋಷಣೆ ಕೂಗಿ, 21 ಸಲ ರಾಷ್ಟ್ರಧ್ವಜಕ್ಕೆ ನಮಿಸಬೇಕು ಎಂದು ಸೂಚಿಸಿತ್ತು. ಅದರಂತೆ ಅಕ್ಟೋಬರ್ ತಿಂಗಳ ನಾಲ್ಕನೆ ಮಂಗಳವಾರವಾದ 22ರಂದು ಫೈಜಾನ್ ಕೋರ್ಟ್ ನಿಯಮ ಪಾಲಿಸಿದ್ದಾನೆ.
ಫೈಜಾನ್‌ಗೆ ರೀಲ್ಸ್ ಮಾಡುವ ಹುಚ್ಚು ಇದೆ. ಇದೇ ಭರದಲ್ಲಿ ಆತ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದ. ‘ಇದು ನನ್ನ ಜೀವನದ ದೊಡ್ಡ ತಪ್ಪು. ಪಶ್ಚಾತ್ತಾಪ ಆಗುತ್ತಿದೆ’ ಎಂದು ಫೈಜಾನ್ ಈಗ ಹೇಳಿದ್ದಾನೆ.==
ಸೆನ್ಸೆಕ್ಸ್ 930 ಅಂಕ ಕುಸಿತ: 2 ತಿಂಗಳ ಕನಿಷ್ಠಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಎರಡನೇ ದಿನವೂ ಕುಸಿತ ಕಂಡಿದ್ದು, ಮಂಗಳವಾರ 930 ಅಂಕ ಇಳಿದು 80,220 ಅಂಕಗಳಲ್ಲಿ ಮುಕ್ತಾಯವಾಗಿದೆ. ಮತ್ತೊಂದೆಡೆ ನಿಫ್ಟಿ ಕೂಡಾ 309 ಅಂಕ ಕುಸಿದು 24,472 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದರೊಂದಿಗೆ ಎರಡೂ ಸೂಚ್ಯಂಕಗಳು 2 ತಿಂಗಳ ಕನಿಷ್ಠಕ್ಕೆ ತಲುಪಿವೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚು ಷೇರುಗಳ ಮಾರಾಟಕ್ಕೆ ತೊಡಗಿದ್ದರಿಂದ ಹಾಗೂ ವಿದೇಶೀ ಪೇಟೆಗಳು ಮಂಕಾಗಿದ್ದರಿಂದ ಭಾರತದ ಪೇಟೆ ಕುಸಿದಿದೆ ಎಂದು ತಜ್ಞರು ಹೇಳಿದ್ದಾರೆ.ಮಂಗಳವಾರದ ಭಾರೀ ಕುಸಿತದ ಪರಿಣಾಮ ಒಂದೇ ದಿನ ಹೂಡಿಕೆದಾರರ ಸಂಪತ್ತು 9.19 ಲಕ್ಷ ಕೋಟಿ ರು.ನಷ್ಟು ಕರಗಿದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹಿಂದ್ರಾ ಅ್ಯಂಡ್ ಮಹಿಂದ್ರಾ, ಟಾಟಾ ಮೋಟರ್ ಸೇರಿ ಹಲವು ಕಂಪನಿಗಳ ಷೇರುಗಳು ಭಾರೀ ಕುಸಿತ ಕಂಡಿದೆ.
==ಸೆಬಿ ಮುಖ್ಯಸ್ಥೆ ಮಾಧವಿಗೆ ಕೇಂದ್ರದ ಕ್ಲೀನ್‌ಚಿಟ್?
ನವದೆಹಲಿ: ಷೇರು ಮಾರುಕಟ್ಟೆಯ ನಿಯಂತ್ರಣಾ ಸಂಸ್ಥೆಯಾದ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬಚ್ ವಿರುದ್ಧ ಕೇಳಿಬಂದಿದ್ದ ಹಿತಾಸಕ್ತಿಯ ವೈರುದ್ಧ್ಯದ ಆರೋಪಗಳ ಸಂಬಂಧ ತನಿಖೆ ನಡೆಸಿದ್ದ ಕೇಂದ್ರ ಸರ್ಕಾರ, ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ಸಿಕ್ಕದ ಹಿನ್ನೆಲೆಯಲ್ಲಿ ಅವರಿಗೆ ಕ್ಲೀನ್‌ಚಿಟ್ ನೀಡಿದೆ ಎಂದು ಮೂಲಗಳು ತಿಳಿಸಿವೆ.ಹೀಗಾಗಿ ಅವರು ತಮ್ಮ ಪೂರ್ವ ನಿಗದಿತ ಅವಧಿಯಾದ 2025ರ ಫೆಬ್ರುವರಿವರೆಗೂ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಅವು ತಿಳಿಸಿವೆ.ಮಾಧವಿ ಅವರು ಸೆಬಿ ಮುಖ್ಯಸ್ಥೆ ಆದ ಮೇಲೂ ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಅಮೆರಿಕ ಮೂಲದ ಹಿಂಡನ್‌ಬರ್ಗ್ ಸಂಸ್ಥೆ ಆರೋಪ ಮಾಡಿತ್ತು. ಮತ್ತೊಂದೆಡೆ ಸೆಬಿ ಮುಖ್ಯಸ್ಥೆಯಾದ ಬಳಿಕ ಮಾಧವಿ ಅವರು ಐಸಿಐಸಿಐ ಬ್ಯಾಂಕ್‌ನಿಂದ ಆದಾಯ ಪಡೆಯುತ್ತಿದ್ದಾರೆ. ಸೆಬಿಯಿಂದ ತನಿಖೆಗೆ ಒಳಪಟ್ಟ ಸಂಸ್ಥೆಗೆ ಕಟ್ಟಡ ಬಾಡಿಗೆ ನೀಡಿದ್ದಾರೆ ಎಂದು ಆರೋಪಿಸಿತ್ತು. ಈ ಕುರಿತು ಜೆಪಿಸಿ ತನಿಖೆಗೂ ಆಗ್ರಹಿಸಿತ್ತು. ಆದರೆ ಎರಡೂ ಆರೋಪಗಳನ್ನು ಮಾಧವಿ ಮತ್ತು ಅವರ ಪತಿ ಧವಳ್ ಬುಚ್ ನಿರಾಕರಿಸಿದ್ದರು. ಅದಾನಿ ಸಮೂಹದಲ್ಲಿ ಮಾಡಿದ ಹೂಡಿಕೆ ಸೆಬಿ ಅಧ್ಯಕ್ಷೆ ಆಗುವುದಕ್ಕಿಂತ 2 ವರ್ಷ ಮೊದಲ ಮಾಡಿದ್ದು ಎಂದು ಸ್ಪಷ್ಟಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕುರಿತು ತನಿಖೆ ನಡೆಸಿದ್ದು, ಅದರಲ್ಲಿ ಅವರು ತಪ್ಪು ಮಾಡಿರುವ ಯಾವುದೇ ಅಂಶಗಳೂ ಕಂಡುಬಂದಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
==ದಿಲ್ಲಿ, ತೆಲಂಗಾಣದ 3 ಸಿಆರ್‌ಪಿಎಫ್ ಶಾಲೆಗಳಿಗೆ ಬೆದರಿಕೆ ಇ-ಮೇಲ್
ನವದೆಹಲಿ: ದೆಹಲಿ ಹಾಗೂ ತೆಲಂಗಾಣದಲ್ಲಿರುವ 3 ಸಿಆರ್‌ಪಿಎಫ್ ಶಾಲೆಗಳನ್ನು ಮಂಗಳವಾರ ಬೆಳಗ್ಗೆ 11ರ ಸುಮಾರಿಗೆ ಸ್ಫೋಟಿಸುವ ಬೆದರಿಕೆ ಸಂದೇಶವನ್ನು ಇ-ಮೇಲ್ ಮೂಲಕ ಸೋಮವಾರ ರಾತ್ರಿ ಕಳಿಸಲಾಗಿದೆ. ಆದರೆ ತಪಾಸಣೆ ಬಳಿಕ ಇದು ಹುಸಿ ಬೆದರಿಕೆ ಎಂದು ಸಾಬೀತಾಗಿದೆ.ಭಾನುವಾರ ದಿಲ್ಲಿ ಸಿಆರ್‌ಪಿಎಫ್ ಶಾಲೆ ಹೊರಗೆ ಬಾಂಬ್ ಸ್ಫೋಟವಾಗಿತ್ತು. ಅದರ ಬೆನ್ನಲ್ಲೇ ಸುಧಾರಿತ ಸ್ಫೋಟಕಗಳನ್ನು ಬಳಸಿ ಸ್ಫೋಟಿಸುವ ಬೆದರಿಕೆ ಬಂದಿವೆ. ಈ ಸಂದೇಶದಲ್ಲಿ ತಮಿಳುನಾಡು ರಾಜಕೀಯದ ಕುರಿತೂ ಕೆಲ ಉಲ್ಲೇಖಗಳಿದ್ದು, ಇದರ ಸೃಷ್ಟಿಕರ್ತರ ಪತ್ತೆಗೆ ತನಿಖೆ ನಡೆಯುತ್ತಿದೆ.ಬೆದರಿಕೆಗೆ ಒಳಗಾಗಿದ್ದ ದಿಲ್ಲಿಯ ರೋಹಿಣಿ ಹಾಗೂ ದ್ವಾರಕಾ ಮತ್ತು ಹೈದರಾಬಾದ್ ಸಮೀಪದ ಮಡ್ಚಲ್‌ನಲ್ಲಿರುವ ಶಾಲೆಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ದೊರೆಕಿಲ್ಲ. ಅವು ಅವು ಸುರಕ್ಷಿತವಾಗಿವೆ ಹಾಗೂ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.