ನಟ ಸೈಫ್ ಅಲಿಖಾನ್ ಮೇಲಿನ ದಾಳಿಗೆ ಬಾಂಗ್ಲಾ ದೂಷಣೆ ಸಲ್ಲದು : ಫಾರೂಖ್‌ ಅಬ್ದುಲ್ಲಾ

| Published : Jan 23 2025, 12:51 AM IST / Updated: Jan 23 2025, 04:29 AM IST

ಸಾರಾಂಶ

  ‘ನಟ ಸೈಫ್ ಅಲಿಖಾನ್ ಇರಿತ ಪ್ರಕರಣದಲ್ಲಿ ಬಂಧಿತ ಆರೋಪಿ ಬಾಂಗ್ಲಾದೇಶಿ ಆಗಿರುವ ಮಾತ್ರಕ್ಕೆ, ಆ ದಾಳಿಗೆ ಇಡೀ ರಾಷ್ಟ್ರವನ್ನು ದೂಷಿಸಲಾಗದು’ ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.

ನವದೆಹಲಿ: ‘ನಟ ಸೈಫ್ ಅಲಿಖಾನ್ ಇರಿತ ಪ್ರಕರಣದಲ್ಲಿ ಬಂಧಿತ ಆರೋಪಿ ಬಾಂಗ್ಲಾದೇಶಿ ಆಗಿರುವ ಮಾತ್ರಕ್ಕೆ, ಆ ದಾಳಿಗೆ ಇಡೀ ರಾಷ್ಟ್ರವನ್ನು ದೂಷಿಸಲಾಗದು’ ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ. ಅಲ್ಲದೆ, ಅಮೆರಿಕಕ್ಕೆ ವಲಸೆ ಹೋಗುವ ಭಾರತೀಯರೂ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಉದಾಹರಿಸಿದ್ದಾರೆ.

ಟೀವಿ ಸಂವಾದದಲ್ಲಿ ಮಾತನಾಡಿದ ಅವರು, ‘ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಬಾಂಗ್ಲಾದೇಶಿಯಾಗಿದ್ದರೆ, ನಾವು ಇಡೀ ರಾಷ್ಟ್ರವನ್ನು ದೂಷಿಸಲು ಸಾಧ್ಯವಿಲ್ಲ. ಒಬ್ಬ ಭಾರತೀಯನು ಅಮೆರಿಕ ಅಥವಾ ಕೆನಡಾದಲ್ಲಿ ಏನಾದರೂ ತಪ್ಪು ಮಾಡಿದರೆ, ಅದಕ್ಕೆ ನಾವು ಭಾರತವನ್ನು ದೂಷಿಸಬಹುದೇ?’ ಎಂದರು.

‘ಅಮೆರಿಕದಲ್ಲಿಯೂ ಅಕ್ರಮ ಭಾರತೀಯರಿದ್ದಾರೆ. ಟ್ರಂಪ್ ಸಂಖ್ಯೆಗಳನ್ನು ನೀಡಿದ್ದಾರೆ. ಜೀವನೋಪಾಯಕ್ಕಾಗಿ ಯಾರು ಬೇಕಾದರೂ ಏನನ್ನೂ ಆಶ್ರಯಿಸಬಹುದು. ಭಾರತೀಯರು ಕೂಡ ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗುತ್ತಿದ್ದಾರೆ’ ಎಂದರು.