ಸಾರಾಂಶ
‘ಉಗ್ರರಿಗೆ ಮತ್ತು ಭಾರತದ ವೈರಿಗಳಿಗೆ ಸುರಕ್ಷಿತ ನೆಲೆಯೇ ಇಲ್ಲವೆಂಬುದು ಆಪರೇಷನ್ ಸಿಂದೂರದಿಂದ ಜಗಜ್ಜಾಹಿರವಾಗಿದೆ. ಸಾರ್ವಭೌಮತ್ವಕ್ಕೆ ಧಕ್ಕೆಯಾದಾಗ ಭಾರತ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದೂ ಈಗ ಎಲ್ಲರಿಗೂ ಗೊತ್ತಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚೋಳಾಪುರಂ (ತ.ನಾ.) : ‘ಉಗ್ರರಿಗೆ ಮತ್ತು ಭಾರತದ ವೈರಿಗಳಿಗೆ ಸುರಕ್ಷಿತ ನೆಲೆಯೇ ಇಲ್ಲವೆಂಬುದು ಆಪರೇಷನ್ ಸಿಂದೂರದಿಂದ ಜಗಜ್ಜಾಹಿರವಾಗಿದೆ. ಸಾರ್ವಭೌಮತ್ವಕ್ಕೆ ಧಕ್ಕೆಯಾದಾಗ ಭಾರತ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದೂ ಈಗ ಎಲ್ಲರಿಗೂ ಗೊತ್ತಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇತಿಹಾಸಪ್ರಸಿದ್ಧ ರಾಜೇಂದ್ರ ಚೋಳ-Iರ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ಆಪರೇಷನ್ ಸಿಂದೂರವು ದೇಶದಲ್ಲಿ ಹೊಸ ಅರಿವು ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದೆ. ಜಗತ್ತಿಗೂ ಭಾರತದ ಶಕ್ತಿ ಅರ್ಥವಾಗಿದೆ. ನಾನಿಲ್ಲಿಗೆ ಬಂದಿಳಿಯುತ್ತಿದ್ದಾಗಲೂ 3-4 ಕಿ.ಮೀ. ಉದ್ದಕ್ಕೂ ಸಿಂದೂರಕ್ಕೆ ಜಯಕಾರ ಕೂಗಲಾಗುತ್ತಿತ್ತು’ ಎಂದು ಅವರು ಹೇಳಿದರು.
‘ರಾಜರಾಜ ಚೋಳ, ರಾಜೇಂದ್ರ ಚೋಳ-Iರ ಹೆಸರುಗಳು ಭಾರತದ ಹೆಮ್ಮೆಗೆ ಸಮಾನಾರ್ಥಕವಾಗಿವೆ. ನಮ್ಮ ಐತಿಹಾಸಿಕ ಜಾಗೃತಿಯ ಆಧುನಿಕ ಸ್ತಂಭಗಳಾಗಿ ಅವರಿಬ್ಬರ ಪುತ್ಥಳಿಗಳನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಾಗುವುದು’ ಎಂದೂ ಘೋಷಿಸಿದ ಮೋದಿ, ‘ಜನ ಬ್ರಿಟನ್‌ನ ಗ್ರೇಟ್ ಚಾರ್ಟರ್ (ರಾಜ, ಸರ್ಕಾರ ಕಾನೂನಿಗಿಂತ ಹಿರಿದಲ್ಲ ಎಂಬ ತತ್ವದ ಮೊದಲ ಲಿಖಿತ ದಾಖಲೆ) ಬಗ್ಗೆ ಮಾತನಾಡುತ್ತಿದ್ದರೆ, ಚೋಳರ ಕಾಲದಲ್ಲಿ 1,000 ವರ್ಷಕ್ಕೂ ಮೊದಲೇ ಇದು ಜಾರಿಯಲ್ಲಿತ್ತು’ ಎಂದು ಪ್ರಶಂಸಿಸಿದರು.
ರೋಡ್ ಶೋ: ಕಾರ್ಯಕ್ರಮಕ್ಕೂ ಮೊದಲು ಮೋದಿ 3 ಕಿ.ಮೀ. ರೋಡ್‌ಶೋ ನಡೆಸಿದ್ದು, ಬಿಜೆಪಿ, ಎಐಎಡಿಎಂಕೆ ಕಾರ್ಯಕರ್ತರು ಸೇರಿದಂತೆ ಜನ ಅಪಾರ ಸಂಖ್ಯೆಯಲ್ಲಿ ನೆರೆದು ಪುಷ್ಪವೃಷ್ಟಿ ಮಾಡಿದರು.
ಬೃಹದೀಶ್ವರ ದೇವಸ್ಥಾನಕ್ಕೆ ಭೇಟಿ:
ಪಂಚೆ ಧರಿಸಿದ್ದ ಮೋದಿಯವರು ಚೋಳರ ಕಾಲದಲ್ಲಿ ನಿರ್ಮಿಸಲಾದ, ಯುನೆಸ್ಕೋದ ಪಾರಂಪರಿಕ ತಾಣವೂ ಆದ ಬೃಹದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ಗಂಗಾಜಲವಿದ್ದ ಕಲಶದೊಂದಿಗೆ ವೇದಘೋಷಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು.