ಸಾರಾಂಶ
ನವದೆಹಲಿ : ಉಪರಾಷ್ಟ್ರಪತಿ ಜಗದೀಪ್ ಧನಕರ್ ಪಕ್ಷಪಾತ ಧೋರಣೆ ತೋರಿಸುತ್ತಿದ್ದಾರೆ ಎಂದ ಆರೋಪಿಸಿರುವ ವಿಪಕ್ಷಗಳು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾಗಿವೆ. ಭಾರತ ಸಂವಿಧಾನದ 67(ಬಿ) ವಿಧಿಯಡಿ ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷಗಳ ಸಂಸದರು ಸಜ್ಜಾಗಿದ್ದಾರೆ. ಈ ಪ್ರಸ್ತಾವನೆಯು ಈಗಾಗಲೇ ಬಣದ ವಿವಿಧ ಪಕ್ಷಗಳ ಸಂಸದರಿಂದ 70 ಸಹಿಗಳನ್ನು ಪಡೆದುಕೊಂಡಿದೆ ಎಂದು ಮೂಲಗಳು ಹೇಳಿವೆ.ಆಗಸ್ಟ್‌ನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷವು ತನ್ನ ಸಂಸದರಿಂದ ಸಹಿಗಳನ್ನು ಸಂಗ್ರಹಿಸಿತ್ತು. ಆ ವಿಷಯದಲ್ಲಿ ಮುಂದುವರಿದಿರಲಿಲ್ಲ.
ಆದರೆ ರಾಜ್ಯಸಭೆಯಲ್ಲಿ ತಮ್ಮ ಬಗ್ಗೆ ಅವರು ಪಕ್ಷಪಾತ ತೋರಿಸುತ್ತಿದ್ದಾರೆ. ಪದೇ ಪದೇ ತಮ್ಮನ್ನು ಹೀಯಾಳಿಸಿ ಮಾತನಾಡುತ್ತಾರೆ. ವಿಶೇಷವಾಗಿ ಭಾರತ ವಿರೋಧಿ ಉದ್ಯಮಿ ಸೊರೋಸ್‌ಗೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ನಂಟು ಇದೆ ಎಂಬ ವಿಷಯವನ್ನು ಪ್ರಸ್ತಾಪಿಸಲು ಬಿಜೆಪಿಗೆ ಅವರು ಅವಕಾಶ ಮಾಡಿಕೊಟ್ಟರು. ಆದರೆ ಕಾಂಗ್ರೆಸ್ ಪಕ್ಷವು ಅದಾನಿ-ಮೋದಿ ಲಿಂಕ್ ಬಗ್ಗೆ ಮಾಡಿದ ಪ್ರಸ್ತಾಪಕ್ಕೆ ಅನುಮತಿಸಲಿಲ್ಲ ಎಂಬ ಅಸಮಾಧಾನ ವಿಪಕ್ಷ ಸದಸ್ಯರಲ್ಲಿದೆ. ಹೀಗಾಗಿ ಅವಿಶ್ವಾಸ ನಿರ್ಣಯಕ್ಕೆ ಸಜ್ಜಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಅಂಗೀಕಾರ ಅನುಮಾನ?:
‘ಅವಿಶ್ವಾಸ ನಿರ್ಣಯ ಕೇವಲ ಸಂದೇಶ ರವಾನೆಗೆ ಇರಬಹುದು. ಅದು ಪಾಸಾಗಲಿಕ್ಕಿಲ್ಲ. ಏಕೆಂದರೆ ವಿಪಕ್ಷಕ್ಕೆ ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಬಹುಮತವಿಲ್ಲ’ ಎಂದು ಮೂಲಗಳು ಹೇಳಿವೆ.
543 ಸದಸ್ಯರ ಲೋಕಸಭೆಯಲ್ಲಿ ಎನ್‌ಡಿಎಗೆ 293 ಹಾಗೂ ಇಂಡಿಯಾ ಕೂಟಕ್ಕೆ 233 ಸದಸ್ಯರ ಬೆಂಬಲವಿದೆ. ಇತರರು 17 ಜನ ಇದ್ದಾರೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಪ್ರಸ್ತುತ 231 ಸದಸ್ಯರು ಮಾತ್ರ ಇದ್ದು 14 ಸೀಟು ಖಾಲಿ ಇವೆ. ಎನ್‌ಡಿಎ 122 ಸಂಸದರನ್ನು ಹೊಂದಿದ್ದರೆ. ವಿರೋಧ ಪಕ್ಷವು 113 ಸದಸ್ಯರ ಬೆಂಬಲವನ್ನು ಹೊಂದಿದೆ.
ಅವಿಶ್ವಾಸ ಏಕೆ?
ಧನಕರ್ ರಾಜ್ಯಸಭೆಯಲ್ಲಿ ತಮ್ಮ ಬಗ್ಗೆ ಅವರು ಪಕ್ಷಪಾತ ತೋರಿಸುತ್ತಿದ್ದಾರೆ. ಪದೇ ಪದೇ ತಮ್ಮನ್ನು ಹೀಯಾಳಿಸಿ ಮಾತನಾಡುತ್ತಾರೆ. ಉದ್ಯಮಿ ಸೊರೋಸ್ ಜೊತೆ ಸೋನಿಯಾ, ರಾಹುಲ್ ನಂಟಿದೆ ಎಂಬ ವಿಷಯ ಪ್ರಸ್ತಾಪಿಸಲು ಬಿಜೆಪಿಗೆ ಅನುಮತಿ ಕೊಟ್ಟರು. ಆದರೆ ಅದಾನಿ-ಮೋದಿ ಲಿಂಕ್ ಬಗ್ಗೆ ಕಾಂಗ್ರೆಸ್ ಮಾಡಿದ ಪ್ರಸ್ತಾಪಕ್ಕೆ ಅನುಮತಿಸಲಿಲ್ಲ ಎಂಬ ಅಸಮಾಧಾನ ವಿಪಕ್ಷ ಸದಸ್ಯರಲ್ಲಿದೆ. ಹೀಗಾಗಿ ಅವಿಶ್ವಾಸ ನಿರ್ಣಯಕ್ಕೆ ಸಜ್ಜಾಗಿದ್ದಾರೆ.