ಚು.ಆಯುಕ್ತರ ವಾಗ್ದಂಡನೆಗೆ ಇಂಡಿಯಾ ಕೂಟ ಚಿಂತನೆ

| N/A | Published : Aug 19 2025, 01:00 AM IST

ಚು.ಆಯುಕ್ತರ ವಾಗ್ದಂಡನೆಗೆ ಇಂಡಿಯಾ ಕೂಟ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಖಚಿತಪಡಿಸುವ ತಮ್ಮ ಸಾಂವಿಧಾನಿಕ ಹೊಣೆ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿರುವ ವಿಪಕ್ಷಗಳು, ಅವರ ವಿರುದ್ಧ ವಾಗ್ದಂಡನೆಗೆ ಚಿಂತನೆ ನಡೆಸಿವೆ.

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಖಚಿತಪಡಿಸುವ ತಮ್ಮ ಸಾಂವಿಧಾನಿಕ ಹೊಣೆ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿರುವ ವಿಪಕ್ಷಗಳು, ಅವರ ವಿರುದ್ಧ ವಾಗ್ದಂಡನೆಗೆ ಚಿಂತನೆ ನಡೆಸಿವೆ.

ಬಿಹಾರದ ವಿಶೇಷ ಮತಪಟ್ಟಿ ಪರಿಷ್ಕರಣೆ, ಕರ್ನಾಟಕದ ಮಹದೇವಪುರ ಚುನಾವಣಾ ಅಕ್ರಮ ಸಾಬೀತುಪಡಿಸಿ ಇಲ್ಲವೇ ದೇಶದ ಕ್ಷಮೆ ಕೇಳಿ ಎಂದು ರಾಹುಲ್‌ ಗಾಂಧಿಗೆ ಸವಾಲು ಹಾಕಿದ ಮಾರನೇ ದಿನವೇ ವಿಪಕ್ಷಗಳು ಇಂಥದ್ದೊಂದು ವಿಷಯದ ಬಗ್ಗೆ ಚರ್ಚೆ ನಡೆಸಿವೆ.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಗೌರವ್‌ ಗೊಗೋಯ್‌, ‘ಮತದಾನವು, ಸಂವಿಧಾನ ಜನಸಾಮಾನ್ಯರಿಗೆ ನೀಡಿರುವ ಹಕ್ಕಾಗಿದ್ದು, ಪ್ರಜಾಪ್ರಭುತ್ವ ಅದರ ಮೇಲೆ ಅವಲಂಬಿತವಾಗಿದೆ. ಇದನ್ನು ರಕ್ಷಿಸುವುದು ಚುನಾವಣಾ ಆಯೋಗದ ಕೆಲಸ. ಆದರೆ ಆ ಆಯೋಗವು, ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ಸೇರಿದಂತೆ ವಿಪಕ್ಷಗಳು ಎತ್ತುತ್ತಿರುವ ಮಹತ್ವಪೂರ್ಣ ಪ್ರಶ್ನೆಗಳಿಗೆ ಉತ್ತರಿಸದೆ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜ್ಞಾನೇಶ್‌ ಕುಮಾರ್ ವಿರುದ್ಧ ವಾಗ್ದಂಡನೆ ಬಗ್ಗೆ ಹಲವು ನಾಯಕರು ಪ್ರಸ್ತಾಪ ಮಾಡಿದ್ದಾರೆ. ಪ್ರಸ್ತಾಪದ ಬಗ್ಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ಬಗ್ಗೆ ನಾವು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

ಮಹದೇವಪುರ ಸೇರಿದಂತೆ ದೇಶದ ಹಲವೆಡೆ ಮತಗಳವು ಆಗಿದೆ ಎಂದು ಆರೋಪಿಸಿದ್ದ ರಾಹುಲ್‌ಗೆ ತಿರುಗೇಟು ನೀಡಿದ್ದ ಜ್ಞಾನೇಶ್‌ ಕುಮಾರ್‌, ‘ಇದನ್ನು ಸಾಬೀತುಪಡಿಸಲು 7 ದಿನಗಳೊಳಗಾಗಿ ದಾಖಲೆ ನೀಡಿ ಇಲ್ಲವೇ ದೇಶದೆದುರು ಕ್ಷಮೆ ಕೇಳಿ. ಒಂದೇ ಸುಳ್ಳನ್ನು ಪದೇಪದೇ ಹೇಳಿದರೆ ಅದು ಸತ್ಯವಾಗದು. ಯಾರೋ ಹೇಳಿದರೆಂದು ವಿರುದ್ಧ ದಿಕ್ಕಿನಲ್ಲಿ ಸೂರ್ಯೋದಯ ಆಗುವುದಿಲ್ಲ’ ಎಂದಿದ್ದರು.

Read more Articles on