ಸಾರಾಂಶ
ನವದೆಹಲಿ: ಸಂಸದೀಯ ಕಲಾಪದ ವೇಳೆ ಉತ್ತಮ ಪರಿಪಾಠಕ್ಕಾಗಿ ಹಿರಿಯ ಸದಸ್ಯರನ್ನು ನೋಡಿ ಕಲಿತುಕೊಳ್ಳಿ, ಸದನದಲ್ಲಿ ಸಂಸದೀಯ ನಿಯಮಗಳನ್ನು ಸರಿಯಾಗಿ ಪಾಲಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ಸಂಸದರಿಗೆ ತಿಳಿ ಹೇಳಿದ್ದಾರೆ. ಈ ಮೂಲಕ ಸೋಮವಾರ ಲೋಕಸಭೆಯಲ್ಲಿ ಸದನ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದರು ಎಂಬ ಟೀಕೆಗೆ ಗುರಿಯಾದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ಸಂಸತ್ ಕಲಾಪಕ್ಕೂ ಮುನ್ನ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಮೊದಲ ಬಾರಿಗೆ ಕಾಂಗ್ರೆಸ್ಸೇತರ ನಾಯಕರೊಬ್ಬರು, ಅದರಲ್ಲೂ ಚಾಯ್‌ವಾಲಾ ಒಬ್ಬರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಕ್ಕೆ ವಿಪಕ್ಷಗಳು ಅಸಮಾಧಾನಗೊಂಡಿವೆ. ಗಾಂಧೀ-ನೆಹರೂ ಕುಟುಂಬ ಕೇವಲ ಪ್ರಧಾನಿ ಹುದ್ದೆ ಏರುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿತು. ತಮ್ಮ ಕುಟುಂಬದಿಂದ ಹೊರತಾದವರಿಗೆ ಮಾನ್ಯತೆ ನೀಡಲು ನಿರಾಕರಿಸಿತು’ ಎಂದು ಟೀಕಿಸಿದರು.
ಇದೇ ವೇಳೆ, ‘ನಿಮ್ಮ ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅದನ್ನು ಸದನದಲ್ಲಿ ಪ್ರಸ್ತಾಪಿಸಿ. ನಿಯಮಿತವಾಗಿ ಕಲಾಪಕ್ಕೆ ಹಾಜರಾಗಿ. ಯಾವುದೇ ವಿಷಯಗಳ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ಮುನ್ನ ಆ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳಿ. ನಿಮ್ಮ ನಿಮ್ಮ ಕ್ಷೇತ್ರದ ಮತದಾರರ ಜೊತೆಗೆ ನಿರಂತರಾಗಿ ಸಂಪರ್ಕ ಇಟ್ಟುಕೊಳ್ಳಿ, ನಿಮ್ಮನ್ನು ಗೆಲ್ಲಿಸಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸಿ ಎಂದು ಮೋದಿ ಸಂಸದರಿಗೆ ಸಲಹೆ ನೀಡಿದರು’ ಎಂದು ಸಭೆಯ ಬಳಿಕ ಸಂಸದೀಯ ಖಾತೆ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದರು.
ಈ ನಡುವೆ ಪ್ರಧಾನಿ ಮೋದಿ ಸಭೆಯಲ್ಲಿ ರಾಹುಲ್ ಗಾಂಧಿ ಬಗ್ಗೆ ನೇರವಾಗಿ ಪ್ರಸ್ತಾಪ ಮಾಡಿದರೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಅವರ ಯಾರು ಹೆಸರನ್ನೂ ನೇರವಾಗಿ ಪ್ರಸ್ತಾಪ ಮಾಡಲಿಲ್ಲ. ಆದರೆ ದೇಶದ ಪ್ರದಾನಿ ಮಾತನಾಡಿದರೆ ಆ ಸಂದೇಶ ಎಲ್ಲರಿಗೂ ಅನ್ವಯವಾಗುತ್ತದೆ’ ಎನ್ನುವ ಮೂಲಕ ಪರೋಕ್ಷವಾಗಿ ರಾಹುಲ್ ಟಾಂಗ್ ನೀಡಿದರು ಎಂಬುದನ್ನು ಸೂಚ್ಯವಾಗಿ ಹೇಳಿದರು.
18ನೇ ಲೋಕಸಭೆಯ ಮೊದಲ ಅಧಿವೇಶನ ಮುಂದೂಡಿಕೆನವದೆಹಲಿ: ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಅಂಗೀಕಾರದ ನಂತರ 18 ಲೋಕಸಭೆಯ ಮೊದಲ ಅಧಿವೇಶನವನ್ನು ಮಂಗಳವಾರ ಮುಂದೂಡಲಾಯಿತು. ಇನ್ನು ಬಜೆಟ್ ಅಧಿವೇಶನ ಜು.22ರಂದು ಆರಂಭವಾಗುವ ನಿರೀಕ್ಷೆ ಇದೆ.ಜೂ.24 ರಂದು ಆರಂಭವಾದ ಅಧಿವೇಶನವು 34 ಗಂಟೆಗಳ ಕಾಲ ಏಳು ಅಧಿವೇಶನಗಳಲ್ಲಿ ನಡೆದವು. ಸದನದ ಉತ್ಪಾದಕತೆ ಶೇ.103 ರಷ್ಟಿತ್ತು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹೇಳಿದರು.
ವಂದನಾ ನಿರ್ಣಯದ ಮೇಲಿನ ಚರ್ಚೆಗಳು 18 ಗಂಟೆಗಳ ಕಾಲ ನಡೆದಿದ್ದು, ಪ್ರಧಾನಿ ನರೇಂದ್ರ ಚರ್ಚೆಯಲ್ಲಿ ಉತ್ತರಿಸಿದರು ಎಂದು ಬಿರ್ಲಾ ತಿಳಿಸಿದರು.
ಮೋದಿ ಭಾಷಣಕ್ಕೆ ಪದೇ ಪದೇ ವಿಪಕ್ಷಗಳ ಅಡ್ಡಿ
ನವದೆಹಲಿ: 18ನೇ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 2.5 ತಾಸಿನ ಭಾಷಣ ಮಾಡುವ ವೇಳೆ ವಿಪಕ್ಷ ನಾಯಕರು ಪದೇ ಪದೇ ಅಡ್ಡಿ ಮಾಡಿದರು. ‘ಮಣಿಪುರ್ ಗೋ’, ಮಣಿಪುರ್ ವಾಂಟ್ ಜಸ್ಟಿಸ್’,‘ನೀಟ್ ಜಸ್ಟಿಸ್’, ‘ಅಗ್ನಿವೀರ್’, ‘ಚುನಾವಣಾ ಆಯೋಗ’ ಇತ್ಯಾದಿ ಘೋಷಣೆಗಳನ್ನು ಕೂಗುತ್ತಲೇ ತಮ್ಮ ಪ್ರತಿಭಟನೆ ಮುಂದುವರೆಸಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಯಾವುದಕ್ಕೂ ಗಮನ ನೀಡದೇ ತಮ್ಮ ಪಾಡಿಗೆ ತಾವು ಭಾಷಣ ಮಾಡಿದರು. ಈ ನಡುವೆ, ಮೋದಿ ಭಾಷಣಕ್ಕೆ ವಿಪಕ್ಷಗಳ ಅಡ್ಡಿ ಖಂಡಿಸಿ ಕೊನೆಗೆ ಖಂಡನಾ ಗೊತ್ತುವಳಿಯನ್ನು ಸದನ ಅಂಗೀಕರಿಸಿತು.