ಮಣಿಪುರದ 1 ಕ್ಷೇತ್ರಕ್ಕೆ 2 ಹಂತದ ಮತದಾನ!

| Published : Mar 17 2024, 02:02 AM IST / Updated: Mar 17 2024, 07:43 AM IST

ಸಾರಾಂಶ

ಚುನಾವಣಾ ಇತಿಹಾಸದಲ್ಲಿ ಅಪರೂಪದ ವಿದ್ಯಮಾನ ದಾಖಲಾಗುತ್ತಿದ್ದು ಔಟರ್‌ ಮಣಿಪುರ ಕ್ಷೇತ್ರಕ್ಕೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಹೀಗಾಗಿಯೇ 543 ಬದಲು 544 ಕ್ಷೇತ್ರಕ್ಕೆ ಮತದಾನ ಎಂದು ಪ್ರಕಟ ಮಾಡಲಾಗಿದೆ.

ನವದೆಹಲಿ: ಮಣಿಪುರದಲ್ಲಿ ಮೈತೇಯಿ ಬುಡಕಟ್ಟು ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡದ ಕಾರಣ ಕಳೆದ ವರ್ಷ ಹಿಂಸಾಚಾರ ಭುಗಿಲೆದ್ದಿದ್ದು ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. 

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಣಿಪುರವನ್ನು ಅತಿಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಅಲ್ಲಿನ ಎರಡು ಕ್ಷೇತ್ರಗಳ ಪೈಕಿ ಒಂದಕ್ಕೆ ಎರಡು ಹಂತಗಳಲ್ಲಿ ಮತದಾನ ಮಾಡಲು ನಿರ್ಧರಿಸಿದೆ. 

ಹಾಗಾಗಿ ಔಟರ್‌ ಮಣಿಪುರ ಲೋಕಸಭಾ ಕ್ಷೇತ್ರಕ್ಕೆ ಏ.19 ಮತ್ತು ಏ.26ರಂದು ಚುನಾವಣೆ ನಡೆಯಲಿದೆ. ಚುನಾವಣಾ ಇತಿಹಾಸದಲ್ಲೇ ಇಂತಹ ಅಪರೂಪದ ವಿದ್ಯಮಾನ ಅತೀ ವಿರಳವಾಗಿ ಜರುಗಿದೆ.

ಚುನಾವಣಾ ಆಯುಕ್ತರು 544 ಕ್ಷೇತ್ರಗಳಿಗೆ ಮತದಾನ ನಡೆಯುತ್ತದೆ ಎಂದು ಘೋಷಿಸಿದಾಗ ಎಲ್ಲರಲ್ಲೂ ಅಚ್ಚರಿ ಉಂಟಾಗಿತ್ತು. ಅದಕ್ಕೆ ಅವರು ಸ್ಪಷ್ಟನೆ ನೀಡಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ. 

ಬದಲಾಗಿ ಒಂದು ಕ್ಷೇತ್ರಕ್ಕೆ ಎರಡು ಹಂತದಲ್ಲಿ ಮತದಾನ ನಡೆಸಲಾಗುವುದು. ಹೀಗಾಗಿ 543ರ ಬದಲು 544 ಎಂದು ಪ್ರಕಟಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.