ಸಾರಾಂಶ
ನವದೆಹಲಿ: ದೇಶದ ವಿಮಾನಗಳಿಗೆ ಬಾಂಬ್ ಬೆದರಿಕೆ ಬರುವುದು ಮುಂದುವರೆದಿದ್ದು, ಇದೀಗ ಶನಿವಾರ ಒಂದೇ ದಿನ 30ಕ್ಕೂ ಅಧಿಕ ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ. ದೇಶೀಯ ಸಂಸ್ಥೆಗಳು ನಿರ್ವಹಿಸುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ಬಾಂಬ್ ಬೆದರಿಕೆಗೆ ಒಳಗಾಗಿವೆ.
ಏರ್ ಇಂಡಿಯಾ, ಇಂಡಿಗೋ, ಆಕಾಸಾ ಏರ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಹಾಗೂ ಅಲಯನ್ಸ್ ಏರ್ ವಿಮಾನಗಳಲ್ಲಿ ಬಾಂಬ್ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ರವಾನಿಸಲಾಗಿದೆ. ಜೊತೆಗೆ ವಿಮಾನವೊಂದರ ಶೌಚಾಲಯದಲ್ಲೂ ಬೆದರಿಕೆ ಪತ್ರ ಪತ್ತೆಯಾಗಿದೆ.
ಬೆದರಿಕೆಗೆ ಒಳಗಾದ ವಿಮಾನದಲ್ಲಿ ಕೊಚ್ಚಿ-ಬೆಂಗಳೂರು ಅಲಯನ್ಸ್ ಏರ್ ವಿಮಾನವೂ ಒಂದು. ಇದಕ್ಕೆ ಟ್ವೀಟರ್ ಮೂಲಕ ಬೆದರಿಕೆ ಕರೆ ಬಂದಿತ್ತು.
ಹೀಗಾಗಿ ಕೆಲವು ವಿಮಾನಗಳ ಹಾರಾಟ ವಿಳಂಬವಾದರೆ, ಕೆಲವು ವಿಮಾನಗಳನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಆದರೆ ತಪಾಸಣೆ ಬಳಿಕ ಎಲ್ಲ ಹುಸಿ ಬೆದರಿಕೆಗಳು ಎಂದು ಗೊತ್ತಾಗಿದೆ.
ಇದರೊಂದಿಗೆ ಈ ವಾರದಲ್ಲಿ ಒಟ್ಟು 70 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಂತಾಗಿದೆ.
ಸರ್ಕಾರದ ಸಭೆ:
ಸತತ ಬೆದರಿಕೆಗಳ ಕಾರಣ ವಾಯುಯಾನ ಸುರಕ್ಷತಾ ಸಂಸ್ಥೆಯಾದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಶನಿವಾರ ದಿಲ್ಲಿಯಲ್ಲಿ ವಿಮಾನಯಾನ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (ಸಿಇಒ) ಜತೆ ಸಭೆ ನಡೆಸಿತು.
ಈ ವೇಳೆ ಪ್ರಯಾಣಿಕರಿಗೆ ಅನಾನುಕೂಲತೆ ಮತ್ತು ವಾಹಕಗಳಿಗೆ ನಷ್ಟ ಉಂಟುಮಾಡುವ ಇಂತಹ ಬೆದರಿಕೆಗಳನ್ನು ಎದುರಿಸಲು ಪ್ರಮಾಣಿತ ಕಾರ್ಯವಿಧಾನವನ್ನು (ಎಸ್‌ಒಪಿ) ಅನುಸರಿಸಲು ಸಿಇಒಗಳಿಗೆ ಸೂಚಿಸಲಾಯಿತು. ಬೆದರಿಕೆಗಳ ಬಗ್ಗೆ ಮತ್ತು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಂಬಂಧಿಸಿದ ಎಲ್ಲರಿಗೂ ಮಾಹಿತಿ ತಿಳಿಸುವಂತೆ ಸೂಚಿಸಲಾಯಿತು.