ಸಾರಾಂಶ
- ದಕ್ಷಿಣ ಭಾರತದ ನಟ, ನಟಿಯರಿಗೂ ಇ.ಡಿ. ಸಮನ್ಸ್ ಸಾಧ್ಯತೆ ನವದೆಹಲಿ: ನೂರಾರು ಕೋಟಿ ರು. ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನಲಾದ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ 30ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಬಾಲಿವುಡ್ ನಟರಾದ ರಣಬೀರ್ ಕಪೂರ್, ಹುಮಾ ಖುರೇಷಿ, ಕಾಮಿಡಿ ಶೋ ಖ್ಯಾತಿಯ ಕಪಿಲ್ ಶರ್ಮಾ ಮುಂತಾದವರಿಗೆ ಈಗಾಗಲೇ ಸಮನ್ಸ್ ನೀಡಿರುವ ಜಾರಿ ನಿರ್ದೇಶನಾಲಯ (ಇ.ಡಿ) ಇದೀಗ ಬಾಲಿವುಡ್, ದಕ್ಷಿಣ ಭಾರತದ ಚಿತ್ರರಂಗ ಹಾಗೂ ಟಿ.ವಿ. ಇಂಡಸ್ಟ್ರಿಯ ಇನ್ನಷ್ಟು ನಟ-ನಟಿಯರನ್ನು ವಿಚಾರಣೆಗೆ ಕರೆಸಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಯುಎಇನಲ್ಲಿ ಮಹಾದೇವ್ ಬೆಟ್ಟಿಂಗ್ ಆ್ಯಪ್ ಸಂಸ್ಥೆ ‘ಸಕ್ಸಸ್ ಪಾರ್ಟಿ’ ನಡೆಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ ದುಬೈನಲ್ಲಿ ಆ್ಯಪ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್‌ನ ಮದುವೆ ಪಾರ್ಟಿ ನಡೆದಿತ್ತು. ಅವುಗಳಲ್ಲಿ ಭಾರತೀಯ ಚಿತ್ರರಂಗದಿಂದ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅವರಿಗೆ ಆ್ಯಪ್‌ನ ಪ್ರವರ್ತಕರು ಪಾವತಿಸಿರುವ ಹಣದ ಬಗ್ಗೆ ಮಾಹಿತಿ ಪಡೆಯಲು ಇ.ಡಿ. ಸಮನ್ಸ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದೇ ವೇಳೆ, ಸಮನ್ಸ್‌ಗೆ ಒಳಗಾದವರೆಲ್ಲ ಆರೋಪಿಗಳು ಎಂದೇನಲ್ಲ. ಕೆಲವು ಮಾಹಿತಿ ಪಡೆಯಲು ಅವರನ್ನು ಕರೆಯಲಾಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.