ಸಾರಾಂಶ
ನವದೆಹಲಿ: 2016-2021ರ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹಿರಿಯ ಕೈದಿಗಳನ್ನು ಇಡುವ ಸಾಮಾನ್ಯ ಜೈಲುಗಳಲ್ಲಿ 9600 ಬಾಲಾಪರಾಧಿಗಳನ್ನೂ ತಪ್ಪಾಗಿ ಇಡಲಾಗಿತ್ತು ಎಂದು ವರದಿಯೊಂದು ತಿಳಿಸಿದೆ. ಈ ಪೈಕಿ ಕರ್ನಾಟಕದ ಕಾರಾಗೃಹಗಳಲ್ಲಿ 186 ಬಾಲಾಪರಾಧಿಗಳು ಇದ್ದರು ಎಂದು ವರದಿ ಹೇಳಿದೆ.
ಕಾನೂನು ಹಕ್ಕುಗಳ ಕುರಿತು ಹೋರಾಟ ಮಾಡುವ ಸಂಸ್ಥೆ ಐಪ್ರೊಬೊನೊ ಈ ಕುರಿತು ದೇಶಾದ್ಯಂತ ಎಲ್ಲ ಕಾರಾಗೃಹಗಳಿಗೆ ಆರ್‌ಟಿಐ ಮೂಲಕ ಅರ್ಜಿ ಹಾಕಿ ದತ್ತಾಂಶದ ಮಾಹಿತಿ ಕೋರಿತ್ತು. ಅದರಲ್ಲಿ ಕೆಲವೇ ಕಾರಾಗೃಹಗಳು ಮಾಹಿತಿ ನೀಡಿದ್ದು, ಅಷ್ಟರಲ್ಲೇ ಈ ಬೃಹತ್ ಪ್ರಮಾಣದ ಬಾಲಾಪರಾಧಿಗಳು ಸಾಮಾನ್ಯ ಕಾರಾಗೃಹದಲ್ಲಿದ್ದದ್ದು ದಾಖಲಾಗಿದೆ.
ಜ.1, 2016 ರಿಂದ ಡಿ.31, 2021ರವರೆಗಿನ ಮಾಹಿತಿ ಲಭ್ಯವಾಗಿದ್ದು, ಉತ್ತರಪ್ರದೇಶದಲ್ಲಿ 2,914 ಬಾಲಾಪರಾಧಿಗಳು, ಹರ್‍ಯಾಣದಲ್ಲಿ 1621, ಜಾರ್ಖಂಡ್‌ನಲ್ಲಿ 1115, ಬಿಹಾರದಲ್ಲಿ 1518, ಛತ್ತೀಸ್‌ಗಢದಲ್ಲಿ 159, ರಾಜಸ್ಥಾನದಲ್ಲಿ 108, ಮಹಾರಾಷ್ಟ್ರದಲ್ಲಿ 34 ಬಾಲಾಪರಾಧಿಗಳು ಸಾಮಾನ್ಯ ಕಾರಾಗೃಹದಲ್ಲಿ ಇದ್ದದ್ದು ದಾಖಲಾಗಿದೆ.
ಆದರೆ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಲಡಾಖ್‌ನಲ್ಲಿ ಮಾಹಿತಿ ನೀಡಲು ನಿರಾಕರಿಸಿದ್ದರೆ, ಒಡಿಶಾ-ತಮಿಳುನಾಡಿನಲ್ಲಿ ಈ ರೀತಿ ಯಾವುದೇ ಬಾಲಾಪರಾಧಿಯನ್ನು ಸಾಮಾನ್ಯ ಕಾರಾಗೃಹದಲ್ಲಿ ಬಂಧಿಸಿ ಇಡಲಾಗಿಲ್ಲ ಎಂದು ಉತ್ತರಿಸಿವೆ.