ಡಾ। ಖರ್ಗೆಗೆ ಪೇಸ್‌ಮೇಕರ್‌ ಅಳವಡಿಕೆ: ಆರೋಗ್ಯ ಸ್ಥಿರ

| N/A | Published : Oct 03 2025, 01:07 AM IST / Updated: Oct 03 2025, 02:23 AM IST

ಸಾರಾಂಶ

ಉಸಿರಾಟದ ಸಮಸ್ಯೆಯಿಂದ ಮಂಗಳವಾರ ರಾತ್ರಿ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಎಐಸಿಸಿ ಅಧ್ಯಕ್ಷ ಡಾ। ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುಧವಾರ ಶಸ್ತ್ರಚಿಕಿತ್ಸೆ ಮೂಲಕ ಪೇಸ್‌ಮೇಕರ್‌ ಅಳವಡಿಸಲಾಗಿದೆ.

 ಬೆಂಗಳೂರು :  ಉಸಿರಾಟದ ಸಮಸ್ಯೆಯಿಂದ ಮಂಗಳವಾರ ರಾತ್ರಿ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಎಐಸಿಸಿ ಅಧ್ಯಕ್ಷ ಡಾ। ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುಧವಾರ ಶಸ್ತ್ರಚಿಕಿತ್ಸೆ ಮೂಲಕ ಪೇಸ್‌ಮೇಕರ್‌ ಅಳವಡಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.

ದಿಢೀರ್‌ ಉಸಿರಾಟದ ಸಮಸ್ಯೆಗೆ ಸಿಲುಕಿದ್ದ ಖರ್ಗೆ ಅವರು ಮಂಗಳವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತಪಾಸಣೆ ನಡೆಸಿದ್ದ ವೈದ್ಯರು ಹೃದಯ ಬಡಿತದಲ್ಲಿ ಏರುಪೇರಾಗಿರುವುದು ಪತ್ತೆ ಮಾಡಿದ್ದಾರೆ. ಬುಧವಾರ ಅವರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ, ಹೃದಯದ ಬಡಿತ ನಿಯಂತ್ರಣಕ್ಕೆ ತರುವಂಥ ಶಾಶ್ವತ ಪೇಸ್‌ಮೇಕರ್‌ ಅಳವಡಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ. ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಕುರಿತು ವೈದ್ಯರು ನಿರ್ಧರಿಸಲಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ತಿಳಿದ ನಂತರ ಗಣ್ಯರು ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಸೇರಿ ಅನೇಕರಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರೆ ಕರೆ ಮಾಡಿ ಆರೋಗ್ಯ ವಿಚಾರಿಸಿ, ಧೀರ್ಘಾಯುಷ್ಯಕ್ಕೆ ಹಾರೈಸಿದ್ದಾರೆ.

ಖರ್ಗೆ ಅವರ ಆರೋಗ್ಯದ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್‌ ಖರ್ಗೆ, ‘ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದೆ. ವಯೋಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದಾಗಿ ಅವರಿಗೆ ಪೇಸ್‌ಮೇಕರ್‌ ಅಳವಡಿಕೆಗೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಶಸ್ತ್ರಚಿಕಿತ್ಸೆ ಮೂಲಕ ಪೇಸ್‌ಮೇಕರ್‌ ಅಳವಡಿಸಲಾಗಿದೆ. ಅದನ್ನು ಹೊರತುಪಡಿಸಿ ಬೇರೆ ಸಮಸ್ಯೆಯಿಲ್ಲ. ವೈದ್ಯರು ಎರಡ್ಮೂರು ದಿನ ವಿಶ್ರಾಂತಿಗೆ ಸೂಚಿಸಿದ್ದಾರೆ. ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ.

ಖರ್ಗೆ ಆರೋಗ್ಯಕ್ಕೆ ನಮೋ ಹಾರೈಕೆ

ಖರ್ಗೆಜೀ ಅವರಿಗೆ ಕರೆ ಮಾಡಿ, ಅವರ ಆರೋಗ್ಯ ವಿಚಾರಿಸಿ, ಶೀಘ್ರ ಚೇತರಿಕೆಗೆ ಹಾರೈಸಿದೆ. ಸದಾಕಾಲ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ

- ನರೇಂದ್ರ ಮೋದಿ, ಪ್ರಧಾನಿ

Read more Articles on