ಸಾರಾಂಶ
ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ನಾಗರಿಕ ಪುರಸ್ಕಾರಕ್ಕೆ ಈ ಬಾರಿಯೂ ತೆರೆಮರೆಯ ಹಲವು ಸಾಧಕರನ್ನು ಆಯ್ಕೆ ಮಾಡಲಾಗಿದೆ.
‘ಹಸ್ತಿ ಕನ್ಯಾ’ ಎಂದೇ ಜನಪ್ರಿಯರಾಗಿರುವ ಭಾರತದ ಮೊದಲ ಮಹಿಳಾ ಮಾವುತ ಪ್ರಭಾತಿ ಬರುವಾ, ಬುಡಕಟ್ಟು ಪರಿಸರ ಪ್ರೇಮಿ ಚಾಮಿ ಮುರ್ಮು ಸೇರಿದಂತೆ 34 ಮಂದಿ ತೆರೆಮರೆಯ ಸಾಧಕರು ಈ ಬಾರಿ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಪದ್ಮಶ್ರೀ ಗೌರವ ಪಡೆದ ತೆರೆಮರೆ ಸಾಧಕರ ವಿವರ ಇಂತಿದೆ.
ಜಾಗೇಶ್ವರ್ ಯಾದವ್: ಸಮಾಜ ಸೇವೆ
ಛತ್ತೀಸ್‌ಗಢದಲ್ಲಿ ನೆಲೆಸಿರುವ ಇವರು ರಾಜ್ಯದ ಬುಡಕಟ್ಟು ಸಮುದಾಯಗಳ ಸಬಲೀಕರಣ ಮತ್ತು ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಶ್ರಮಿಸಿದ್ದಾರೆ.
ಚೆಲ್ಲಮಾಲ್: ಕೃಷಿ
ಅಂಡಮಾನ್ ನಿಕೋಬಾರ್‌ನಲ್ಲಿ 10 ಎಕರೆ ಪ್ರದೇಶದಲ್ಲಿ 150 ರೀತಿಯಲ್ಲಿ ಮಿಶ್ರತಳಿಯ ಬೆಳೆಗಳನ್ನು ಬೆಳೆದಿದ್ದಾರೆ ಮತ್ತು ಇತರರಿಗೂ ಸಾವಯವ ಕೃಷಿ ಮಾಡಲು ಪ್ರೋತ್ಸಾಹಿಸಿದ್ದಾರೆ. ಇವರು ತೆಂಗಿನ ತಾಯಿ ಎಂದೇ ಪ್ರಸಿದ್ಧರಾಗಿದ್ದಾರೆ.
ಸಂಗ್ತಾಂಕಿಮ: ಸಮಾಜ ಸೇವೆ
ಮಿಜೋರಂನಲ್ಲಿ ಮಕ್ಕಳ ಅತಿ ದೊಡ್ಡ ಅನಾಥಾಲಯವನ್ನು ನಡೆಸುತ್ತಿದ್ದಾರೆ. ಅಲ್ಲದೆ 4 ದಶಕಗಳ ಕಾಲ ವಿವಿಧ ಮಾರಣಾಂತಿಕ ರೋಗಿಗಳಿಗೆ ಚಿಕಿತ್ಸೆಗೆ ನೆರವಾಗಿದ್ದಾರೆ. ಹೇಮ್‌ಚಂದ್ ಮಾಂಜಿ: ವೈದ್ಯಕೀಯಛತ್ತೀಸ್‌ಗಢದ ಅರಣ್ಯಗಳಲ್ಲಿ ಸಿಗುವ ವೈದ್ಯಕೀಯ ಸಸ್ಯಗಳಿಂದ ಜನರಿಗೆ ಸಾಂಪ್ರದಾಯಿಕ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ನಕ್ಸಲ್ ದಾಳಿಗೆ ತುತ್ತಾದರೂ ಎದೆಗುಂದದೆ ತಮ್ಮ ಸೇವೆ ಮುಂದುವರೆಸಿದ್ದಾರೆ.
ಯಾನುಂಗ್ ಜಮೋಹ್ ಲೇಗೋ: ವೈದ್ಯಕೀಯ
ಅರುಣಾಚಲ ಪ್ರದೇಶದಲ್ಲಿ ಇವರು ಸ್ವಸಹಾಯ ಸಂಘವನ್ನು ನಡೆಸುತ್ತಿದ್ದು, 1 ಲಕ್ಷಕ್ಕೂ ಹೆಚ್ಚು ಜನರಿಗೆ ಆಯುಷ್ ಔಷಧಿಗಳ ಕುರಿತು ಶಿಕ್ಷಣ ನೀಡಿದ್ದಾರೆ.
ಉದಯ್ ವಿಶ್ವನಾಥ್ ದೇಶಪಾಂಡೆ: ಕ್ರೀಡೆ
ಮಹಾರಾಷ್ಟ್ರದಲ್ಲಿ ನೆಲೆಸಿರುವ ಇವರು, ಮಲ್ಲಕಂಬ ಕ್ರೀಡೆಯ ಕೋಚ್ ಆಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿಗೆ ಮಲ್ಲಕಂಬ ತರಬೇತಿ ನೀಡಿದ್ದಾರೆ.
ಯಾಜ್ದಿ ಮಾಣಿಕ್‌ಶಾ ಇಟಾಲಿಯಾ: ವೈದ್ಯಕೀಯ
ಗುಜರಾತ್‌ನಲ್ಲಿ ನೆಲೆಸಿರುವ ಇವರು, ಭಾರತದ ಮೊದಲ ಸಿಕಲ್ ಜೀವಕೋಶ ಅನಿಮಿಯಾ ನಿಯಂತ್ರಣ ಕಾರ್ಯಕ್ರಮದ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ.
ರತನ್ ಕಹರ್: ಕಲೆ
ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಇವರು, ಭಾಡ್ ಶೈಲಿಯ ಜಾನಪದ ಸಂಗೀತಗಾರರಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಕೊಡುಗೆ ನೀಡಿದ್ದಾರೆ.
ಬಾಲಕೃಷ್ಣನ್: ಕಲೆ
ಕೇರಳದಲ್ಲಿ ನೆಲೆಸಿರುವ ಇವರು ಕಥಕ್ಕಳಿ ನೃತ್ಯಗಾರರಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಶೇಕ್ಸ್‌ಪಿಯರ್ ನಾಟಕಗಳನ್ನು ಭಾರತದ ಸೊಗಡಿನೊಂದಿಗೆ ಅಭಿನಯಿಸಿದ್ದಾರೆ.
ಪ್ರಭಾರಿ ಬರುವಾ: ಸಾಮಾಜಿಕ ಸೇವೆ
ಅಸ್ಸಾಂನ ಭಾರತದ ಮೊದಲ ಮಹಿಳಾ ಮಾವುತಳಾಗಿರುವ ಈಕೆ 4 ದಶಕಗಳಿಂದ 3 ರಾಜ್ಯಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ್ದಾರೆ.
ಚಾಮಿ ಮುರ್ಮು: ಸಾಮಾಜಿಕ ಸೇವೆ
ಜಾರ್ಖಂಡ್‌ನಲ್ಲಿ ‘ಸಹಯೋಗಿ ಮಹಿಳಾ’ ಎಂಬ ಎನ್‌ಜಿಒ ಮೂಲಕ 40 ಗ್ರಾಮಗಳ 3 ಸಾವಿರಕ್ಕೂ ಹೆಚ್ಚು ಮಹಿಳೆಯರ ಸಹಯೋಗದಲ್ಲಿ 30 ಲಕ್ಷ ಮರಗಳ ಪೋಷಣೆ ಮಾಡಿದ್ದಾರೆ. ಜೊತೆಗೆ ಅನೇಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸಿದ್ದಾರೆ.
ಗುರ್ವಿಂದರ್ ಸಿಂಗ್: ಸಮಾಜ ಸೇವೆ
ಹರ್ಯಾಣದಲ್ಲಿ ಅಂಗವಿಕಲರು, ಮಹಿಳೆಯರು, ಅಶಕ್ತರು ಮತ್ತು ಅನಾಥರಿಗಾಗಿ ದುಡಿಯುತ್ತಿರುವ ಚೇತನವಾಗಿದ್ದಾರೆ. ಇವರು ಬಾಲ್ ಗೋಪಾಲ್ ಧಾಮ್‌ನಲ್ಲಿ 3000 ಅನಾಥ ಮಕ್ಕಳ ಲಾಲನೆ ಪೋಷಣೆ ಮಾಡಿದ್ದಾರೆ. 6 ಸಾವಿರಕ್ಕೂ ಹೆಚ್ಚು ಗರ್ಭಿಣಿಯರು ಮತ್ತು ಅಪಘಾತಗೊಂಡ ವ್ಯಕ್ತಿಗಳನ್ನು ಉಚಿತ ಆ್ಯಂಬುಲೆನ್ಸ್‌ನ ಸೇವೆ ಒದಗಿಸಿ ರಕ್ಷಣೆ ಮಾಡಿದ್ದಾರೆ.
ಸತ್ಯನಾರಾಯಣ ಬೇಲೇರಿ: ಕೃಷಿ
ಕೇರಳದ ಕಾಸರಗೋಡಿನಲ್ಲಿ ರಾಜ್ಯಕಾಮಾನೆ ಎಂಬ ಹೊಸ ಭತ್ತ ತಳಿಯನ್ನು ಅನ್ವೇಷಿಸಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಭತ್ತ ಸಂರಕ್ಷಣಾ ಅಭಿಯಾನದಲ್ಲಿ ತೊಡಗಿದ್ದಾರೆ. ಇವರು ಭತ್ತದ 650 ತಳಿಗಳನ್ನು ಸಂರಕ್ಷಿಸಿದ್ದಾರೆ.
ದುಖು ಮಜಿ: ಸಾಮಾಜಿಕ ಸೇವೆ
ಪಶ್ಚಿಮ ಬಂಗಾಳದ ಬರಡು ಭೂಮಿಯಲ್ಲಿ 5000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಸಂರಕ್ಷಣೆ ಮಾಡಿದ್ದಾರೆ. ಇವರಿಗೆ ಸದ್ಯ 78 ವರ್ಷ ವಯಸ್ಸಾಗಿದ್ದು, ಇಳಿವಯಸ್ಸಿನಲ್ಲೂ ಸೇವೆ ಮುಂದುವರೆದಿದೆ. 12ನೇ ವಯಸ್ಸಿನಿಂದಲೇ ವೃಕ್ಷಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪಾಸ್ವಾನ್ ದಂಪತಿ: ಕಲೆ
ಬಿಹಾರದಲ್ಲಿ ನೆಲೆಸಿರುವ ಶಾಂತಿದೇವಿ ಪಾಸ್ವಾನ್ ಮತ್ತು ಶಿವನ್ ಪಾಸ್ವಾನ್ ದಂಪತಿ ಗೋಡ್ನಾ ಚಿತ್ರಕಲಾಕಾರರಾಗಿದ್ದು, 20 ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ತರಬೇತುಗೊಳಿಸಿದ್ದಾರೆ.
ಅಶೋಕ್ ಕುಮಾರ್ ಬಿಸ್ವಾಸ್: ಕಲೆ
(ಬಿಹಾರ)5 ದಶಕಗಳ ಸತತ ಪರಿಶ್ರಮದಿಂದ ಮೌರ್ಯರ ಕಾಲದ ಚಿತ್ರಕಲೆಯ ಪರಂಪರೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಇವರು ಹಲವು ದೇಶಗಳಲ್ಲಿ ಚಿತ್ರ ಪ್ರದರ್ಶನ ಮಾಡಿದ್ದು, 2000 ಕ್ಕೂ ಹೆಚ್ಚು ಮಂದಿಗೆ ತರಬೇತಿಯನ್ನೂ ನೀಡಿದ್ದಾರೆ.
ಉಮಾ ಮಹೇಶ್ವರಿ: ಕಲೆ
ಆಂಧ್ರಪ್ರದೇಶದಲ್ಲಿ ನೆಲೆಸಿರುವ ಇವರು ದೇಶದಲ್ಲೇ ಮೊದಲ ಮಹಿಳಾ ಹರಿಕಥಾ ಗಾಯಕಿ ಮತ್ತು ವಾಚಕಿಯಾಗಿ ಪ್ರಸಿದ್ಧಿ ಗಳಿಸಿದ್ದಾರೆ.
ಗೋಪಿನಾಥ್ ಸ್ವೇನ್: ಕಲೆ (ಮರಣೋತ್ತರ)
ಶತಾಯುಷಿಗಳಾಗಿರುವ ಇವರು ಒಡಿಶಾದಲ್ಲಿ ನೆಲೆಸಿದ್ದು, ತಮ್ಮ ಇಡೀ ಜೀವನವನ್ನು ನಾಡಿನ ಪ್ರಾಚೀನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಡಿಪಾಗಿಟ್ಟಿದ್ದಾರೆ. ಅಖಾಡ ಶಾಲೆಗಳನ್ನು ಸ್ಥಾಪಿಸಿ ಇಳಿ ವಯಸ್ಸಿನಲ್ಲೂ ಮಕ್ಕಳಿಗೆ ಸಂಗೀತ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.
ಸನಾತನ ರುದ್ರ ಪಾಲ್: ಕಲೆ
ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಇವರು ಶಿಲ್ಪಕಲಾವಿದರಾಗಿದ್ದಾರೆ. ಇವರು ಕೆತ್ತಿರುವ ದುರ್ಗಾದೇವಿಯ ವಿಗ್ರಹಗಳು ಯುನೆಸ್ಕೋ ಮಾನ್ಯತೆಯನ್ನು ಪಡೆದಿವೆ. ಇವರು ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ.
ಮಚಿಹನ್ ಸಾಶಾ: ಕಲೆ
ಮಣಿಪುರದಲ್ಲಿ ನೆಲೆಸಿರುವ ಇವರು ಸಾಂಪ್ರದಾಯಿಕ ಲಾಂಗ್ಪಿ ಮಡಿಕೆ ತಯಾರಿಕಾ ವಿಧಾನದ ಸಂರಕ್ಷಣೆಗೆ 5 ದಶಕಗಳ ಕಾಲ ಶ್ರಮಿಸಿದ್ದಾರೆ. ಈ ವಿಧಾನದಲ್ಲಿ ಚಕ್ರದ ಬಳಕೆಯಿಲ್ಲದೆ ಮಡಿಕೆಗಳನ್ನು ಮಾಡಲಾಗುತ್ತದೆ.
ಗದ್ದಂ ಸಮ್ಮಯ್ಯ: ಕಲೆ
ತೆಲಂಗಾಣದ ಜಲಗಾಂವ್‌ನಲ್ಲಿ ನೆಲೆಸಿರುವ ಇವರು 5 ದಶಕಗಳ ಕಾಲ 19 ಸಾವಿರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಇದಕ್ಕಾಗಿ ಎರಡು ಯಕ್ಷಗಾನ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.
ದಾಸರಿ ಕೊಂಡಪ್ಪ: ಕಲೆ
ತೆಲಂಗಾಣದಲ್ಲಿ ವೀಣಾ ವಾದಕರಾಗಿರುವ ಇವರು, ತತ್ವಾಲುಗಳನ್ನು, ಬುರ್ರಾ ವೀಣಾ ವಾದನವನ್ನು 6 ದಶಕಗಳ ಕಾಲ ತೆಲುಗು ಮತ್ತು ಕನ್ನಡದಲ್ಲಿ ಹಾಡುತ್ತಾ ಈ ಕಲೆಯನ್ನು ಸಂರಕ್ಷಿಸಿದ್ದಾರೆ.
ನೇಪಾಳ್ ಚಂದ್ರ ಸೂತ್ರಧಾರ್: ಕಲೆ (ಮರಣೋತ್ತರ)
ಪಶ್ಚಿಮ ಬಂಗಾಳದಲ್ಲಿ ಇವರು ಆರು ದಶಕಗಳ ಕಾಲ ಮಣ್ಣಿನಿಂದ ಮುಖವಾಡವನ್ನು ಮಾಡುವ ಚಾವು ಕಲೆಯನ್ನು ಸಂರಕ್ಷಿಸಿ ಪೋಷಿಸುತ್ತಿದ್ದಾರೆ.
ಜೊರ್ಡಾನ್ ಲೆಪ್ಚಾ: ಕಲೆ
ಸಿಕ್ಕಿಂನಲ್ಲಿ ನೆಲೆಸಿರುವ ಇವರು ಕಳೆದ 25 ವರ್ಷಗಳಿಂದ ಬಿದಿರು ಬಳಸಿ ಟೋಪಿಗಳನ್ನು ಮಾಡುತ್ತಾ ಇತರರಿಗೂ ಹೇಳಿಕೊಟ್ಟು ಕಲೆಯನ್ನು ಸಂರಕ್ಷಿಸುವಲ್ಲಿ ಶ್ರಮಿಸಿದ್ದಾರೆ.
ಚಾರ್ಲೋಟ್ ಚೋಪಿನ್: ಯೋಗ
ಶತಾಯುಷಿಗಳಾಗಿರುವ ಇವರು ಫ್ರಾನ್ಸ್‌ನಲ್ಲಿ ನೆಲೆಸಿದ್ದು, ತಮ್ಮ 50ನೇ ವಯಸ್ಸಿನ ನಂತರ ಯೋಗಾಸನ ಕಲಿತು ಹಲವು ಮಂದಿಗೆ ಯೋಗಾ ಕಲಿಸಿಕೊಡುತ್ತಿದ್ದಾರೆ.
ಪಿ ಸಿ ನಂಬೂದಿರಿಪಾಡ್: ಶಿಕ್ಷಣ (ಮರಣೋತ್ತರ)
ಶತಾಯುಷಿಗಳಾಗಿದ್ದ ಇವರು ತ್ರಿಶ್ಶೂರ್ ಬಳಿ ಶಾಲೆಯೊಂದನ್ನು ಸ್ಥಾಪಿಸಿ ಹೆಸರುವಾಸಿಯಾಗಿದ್ದರು. ನಂತರ ಕೇರಳ ಸರ್ಕಾರದಲ್ಲಿ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಕಲೆಗೆ ಪ್ರಾಮುಖ್ಯತೆ ನೀಡಿದ್ದರು.
ಗುಲಾಂ ನಬಿ ದಾರ್: ಕಲೆ
ಜಮ್ಮು ಕಾಶ್ಮೀರದಲ್ಲಿ ನೆಲೆಸಿರುವ ಇವರು, ಕಳೆದ ನಾಲ್ಕು ದಶಕಗಳಿಂದ ಮರಗೆಲಸದಲ್ಲಿ ನವೀನ ವಿನ್ಯಾಸಗಳನ್ನು ಮಾಡಿ ಪ್ರಸಿದ್ಧಿ ಗಳಿಸಿದ್ದಾರೆ. ಇವರು ವಿದೇಶಗಳಲ್ಲೂ ತಮ್ಮ ಕಲಾ ನೈಪುಣ್ಯತೆ ಪ್ರದರ್ಶಿಸಿದ್ದಾರೆ.
ಮಾಯಾ ಟಂಡನ್: ಸಮಾಜ ಸೇವೆ
ರಾಜಸ್ಥಾನದಲ್ಲಿ ತಮ್ಮ ನಿವೃತ್ತಿಯ ನಂತರ ಎರಡು ದಶಕಗಳಿಗೂ ಅಧಿಕ ಕಾಲ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ.
ಮೊಹಮ್ಮದ್ ಸೋದರರು: ಕಲೆ
ರಾಜಸ್ಥಾನದ ಅಲಿ ಮತ್ತು ಘನಿ ಮೊಹಮ್ಮದ್ ಸೋದರರು ಜಾನಪದ ಮಾಂಡ್ ಶೈಲಿಯಲ್ಲಿ ಹಾಡುತ್ತಾ ಸಾಂಪ್ರದಾಯಿಕ ಕಲೆಯನ್ನು ಪೋಷಿಸುವಲ್ಲಿ 6 ದಶಕಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದಾರೆ.
ಲಕ್ಷ್ಮಣ ಭಟ್ ತೈಲಾಂಗ್: ಕಲೆ
ರಾಜಸ್ಥಾನದಲ್ಲಿ ಹಿಂದೂಸ್ತಾನಿ ಸಂಗೀತಗಾರರಾಗಿರುವ ಇವರು ವಿನೂತನ ಪಚ್‌ರಂಗ್ ರಾಗವನ್ನು ಅನ್ವೇಷಿಸಿ ಆರು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಸ್ವರ ಸೇವೆ ಮಾಡಿದ್ದಾರೆ.
ಜಾನಕಿಲಾಲ್: ಕಲೆ
ರಾಜಸ್ಥಾನದಲ್ಲಿ ಇವರು ಬೇಹುಪ್ರಿಯ ಕಲೆಯನ್ನು ಆರು ದಶಕಗಳಿಂದ ಪೋಷಿಸಿಕೊಂಡು ಬಂದಿದ್ದಲ್ಲದೆ ವಿದೇಶಗಳಲ್ಲೂ ಪ್ರದರ್ಶನವನ್ನು ನೀಡಿ ಪ್ರಸಿದ್ಧಿ ಪಡೆದಿದ್ದಾರೆ. ಇವರು ಕೋತಿಯ ವೇಷ ಧರಿಸಿ ನೃತ್ಯ ಮಾಡುವಲ್ಲಿ ಖ್ಯಾತಿ ಗಳಿಸಿದ್ದಾರೆ.