ಟ್ರಂಪ್‌ ಬಗ್ಗೆ ಮೋದಿ ಮೌನ ಏಕೆ? : ಕಾಂಗ್ರೆಸ್‌

| N/A | Published : Jul 29 2025, 01:01 AM IST / Updated: Jul 29 2025, 01:44 AM IST

ಸಾರಾಂಶ

ಲೋಕಸಭೆಯಲ್ಲಿ ಆರಂಭವಾದ ಆಪರೇಷನ್‌ ಸಿಂದೂರ ಕಾರ್ಯಾಚರಣೆ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್‌ ಸಂಸದ ಗೌರವ್‌ ಗಗೋಯ್‌ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು

  ನವದೆಹಲಿ :  ಭಾರತದ ಎಷ್ಟು ರಫೇಲ್ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ? ಒಂದು ವೇಳೆ ಪಾಕಿಸ್ತಾನವು ನಮ್ಮ ಮುಂದೆ ಮೊಣಕಾಲೂರಲು ಸಿದ್ಧವಾಗಿದ್ದರೆ ನಾವು ದಾಳಿ ನಿಲ್ಲಿಸಿದ್ದು ಏಕೆ? ಭಾರತ-ಪಾಕ್‌ ಕದನ ವಿರಾಮಕ್ಕೆ ತನ್ನ ಮಧ್ಯಸ್ಥಿಕೆಯೇ ಕಾರಣ ಎಂದು ಅಮೆರಿಕ ಅಧ್ಯಕ್ಷ 26 ಬಾರಿ ಹೇಳಿದ್ದಾರೆ. ಹಾಗಿದ್ದರೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದು ಯಾರು? ಪ್ರಧಾನಿ ಮೋದಿ ಶರಣಾಗಿದ್ದು ಯಾರ ಮುಂದೆ?

ಸೋಮವಾರ ಲೋಕಸಭೆಯಲ್ಲಿ ಆರಂಭವಾದ ಆಪರೇಷನ್‌ ಸಿಂದೂರ ಕಾರ್ಯಾಚರಣೆ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್‌ ಸಂಸದ ಗೌರವ್‌ ಗಗೋಯ್‌ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ.

ವ್ಯಾಪಾರದ ಬೆದರಿಕೆಯೊಡ್ಡಿ ಕದನ ವಿರಾಮ ಮಾಡಿಸಿದ್ದಾಗಿ ಟ್ರಂಪ್‌ 26ನೇ ಬಾರಿ ಹೇಳಿಕೆ ನೀಡಿದ್ದಾರೆ. ಜತೆಗೆ 5-6 ಯುದ್ಧವಿಮಾನ ಹೊಡೆದುರುಳಿಸಲಾಗಿದೆ ಎಂದೂ ತಿಳಿಸಿದ್ದಾರೆ. ಒಂದೊಂದು ವಿಮಾನದ ಬೆಲೆ ಕೋಟ್ಯಂತರ ರುಪಾಯಿ ಇದೆ. ಈ ಕಾರಣಕ್ಕಾಗಿ ನಾವು ರಕ್ಷಣಾ ಸಚಿವರಲ್ಲಿ ನಮ್ಮ ಎಷ್ಟು ವಿಮಾನ ಹೊಡೆದುರುಳಿಸಲಾಯಿತು ಎಂದು ಪ್ರಶ್ನಿಸುತ್ತಿದ್ದೇವೆ. ಇಡೀ ದೇಶಕ್ಕೆ ಸತ್ಯ ತಿಳಿಯಬೇಕಿದೆ ಎಂದರು.

ಇದೇ ವೇಳೆ ರಾಜನಾಥ್‌ ಸಿಂಗ್‌ ತಮ್ಮ ಭಾಷಣದಲ್ಲಿ ಪಹಲ್ಗಾಂ ದಾಳಿ ನಡೆಸಿದ ಉಗ್ರರು ಎಲ್ಲಿಂದ ಬಂದರು ಎಂದೇ ತಿಳಿಸಿಲ್ಲ. ಪ್ರತಿ ಬಾರಿ ದಾಳಿ ನಡೆದಾಗ ಉಗ್ರರ ಬೆನ್ನುಮೂಳೆ ಮುರಿಯಲಾಗಿದೆ ಎಂದು ಗೃಹ ಸಚಿವರು ಹೇಳುತ್ತಲೇ ಬರುತ್ತಿದ್ದಾರೆ. ಆದರೂ ದಾಳಿ ನಿಲ್ಲುತ್ತಿಲ್ಲ. ಹೀಗಾಗಿ ಪಹಲ್ಗಾಂ ದಾಳಿ ವೈಫಲ್ಯದ ಹೊಣೆ ಕೇಂದ್ರ ಗೃಹ ಸಚಿವರೇ ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

56 ಇಂಚು 36ಕ್ಕೆ ಇಳಿಯುತ್ತೆ

ಮೋದಿ ಅವರೇ ಒಮ್ಮೆ ನೀವು ನಿಮ್ಮ ಎಕ್ಸ್‌ ಹ್ಯಾಂಡಲ್‌ನಲ್ಲಿ ಅಮೆರಿಕದ ಅಧ್ಯಕ್ಷರು ಹೇಳಿದ್ದೆಲ್ಲವೂ ತಪ್ಪು ಎಂದು ಪೋಸ್ಟ್ ಮಾಡಲು ಏಕೆ ಸಾಧ್ಯವಾಗಲಿಲ್ಲ? ನೀವು ಅಮೆರಿಕದ ಅಧ್ಯಕ್ಷರ ಮುಂದೆ ನಿಂತ ಕ್ಷಣ, ನಿಮ್ಮ ಎತ್ತರ 5 ಅಡಿಗಳಿಗೆ ಇಳಿಯುತ್ತದೆ ಮತ್ತು ನಿಮ್ಮ ಎದೆ 56 ಇಂಚುಗಳಿಂದ 36 ಇಂಚುಗಳಿಗೆ ಇಳಿಯುತ್ತದೆ. ನೀವು ಅಮೆರಿಕ ಅಧ್ಯಕ್ಷರಿಗೆ ಏಕೆ ಹೆದರುತ್ತೀರಿ?

- ಕಲ್ಯಾಣ್‌ ಬ್ಯಾನರ್ಜಿ, ಟಿಎಂಸಿ ಸಂಸದೀಯ ನಾಯಕ

Read more Articles on