1960ರಲ್ಲಿ ಜಾರಿಯಾಗಿದ್ದ ಸಿಂಧು ನದಿ ಒಪ್ಪಂದಕ್ಕೆ ಭಾರತ ತಡೆ : ಪಾಕ್‌ಗೆ ಮರ್ಮಾಘಾತ

| N/A | Published : Apr 24 2025, 12:05 AM IST / Updated: Apr 24 2025, 04:30 AM IST

ಸಾರಾಂಶ

1960ರಲ್ಲಿ ಜಾರಿಯಾಗಿದ್ದ ಸಿಂಧು ನದಿ ಒಪ್ಪಂದಕ್ಕೆ ಭಾರತವು ಪಾಕಿಸ್ತಾನ ಗಡಿಯಾಚಿನ ಭಯೋತ್ಪಾದನೆ ನಿಲ್ಲಿಸುವವರೆಗೂ ತಡೆ ವಿಧಿಸಲಾಗುತ್ತದೆ ಎಂದು ಘೋಷಿಸಿದೆ.

ನವದೆಹಲಿ: 1960ರಲ್ಲಿ ಜಾರಿಯಾಗಿದ್ದ ಸಿಂಧು ನದಿ ಒಪ್ಪಂದಕ್ಕೆ ಭಾರತವು ಪಾಕಿಸ್ತಾನ ಗಡಿಯಾಚಿನ ಭಯೋತ್ಪಾದನೆ ನಿಲ್ಲಿಸುವವರೆಗೂ ತಡೆ ವಿಧಿಸಲಾಗುತ್ತದೆ ಎಂದು ಘೋಷಿಸಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಭಾರತದಿಂದ ಹರಿಯುವ ನೀರು ಸ್ಥಗಿತಗೊಂಡು ಪಾಕ್‌ಗೆ ಮರ್ಮಾಘಾತವಾಗುವ ಆತಂಕ ಉಂಟಾಗಿದೆ.

ಒಪ್ಪಂದಕ್ಕೆ ತಡೆ ನೀಡಿರುವ ಕಾರಣ ಸಿಂಧು ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್ ನದಿಗಳಿಂದ ಪಾಕಿಸ್ತಾನಕ್ಕೆ ನೀರು ಸರಬರಾಜು ನಿಲ್ಲುತ್ತದೆ. ಇದರಿಂದ ಆ ದೇಶದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತವೆ.

ಸಿಂಧು ನದಿ ನೀರು ಒಪ್ಪಂದಕ್ಕೆ 1960ರಲ್ಲಿ ಸಹಿ ಹಾಕಲಾಗಿತ್ತು. ಈ ಪ್ರಕಾರ ಪಶ್ಚಿಮಾಭಿಮುಖವಾಗಿ ಹರಿಯುವ ಸಿಂಧು, ಝೀಲಂ ಮತ್ತು ಚೆನಾಬ್ ನದಿಗಳನ್ನು ಪಾಕಿಸ್ತಾನಕ್ಕೆ ಬಳಸಲು ಹಂಚಿಕೆ ಮಾಡಲಾಗಿತ್ತು. ಇನ್ನು ಪೂರ್ವಾಭಿಮುಖವಾಗಿ ಹರಿಯುವ ರಾವಿ, ಬಿಯಾಸ್ ಮತ್ತು ಸಟ್ಲೆಜ್‌ ನದಿಗಳನ್ನು ಭಾರತದ ನಿಯಂತ್ರಣಕ್ಕೆ ನೀಡಲಾಗಿತ್ತು.

ಭಾರತವು ಪಶ್ಚಿಮ ನದಿಗಳನ್ನು ಕುಡಿವ ನೀರಿನಂಥ ಸೀಮಿತ ಬಳಕೆಗೆ ಮಾತ್ರ ಬಳಸಿಕೊಳ್ಳಬಹುದು. ಆದರೆ ಈಗ ಒಪ್ಪಂದ ಸ್ಥಗಿತ ಮಾಡಿರುವ ಕಾರಣ ಅನ್ಯ ಕಾರ್ಯಕ್ಕೆ ಭಾರತ ನೀರು ಬಳಸಿಕೊಂಡರೆ ಪಾಕಿಸ್ತಾನಕ್ಕೆ ನೀರು ಹರಿಯುವುದು ನಿಲ್ಲಲಿದೆ.